ಜಾರ್ಖಂಡ್ ವಿರುದ್ಧ ಜಮ್ಮು-ಕಾಶ್ಮೀರಕ್ಕೆ ಭರ್ಜರಿ ಜಯ

Update: 2020-01-07 05:10 GMT

ರಾಂಚಿ, ಜ.6: ಬಲಗೈ ಮಧ್ಯಮ ವೇಗದ ಬೌಲರ್ ಅಖೀಬ್ ನಬಿ ಐದು ವಿಕೆಟ್‌ಗಳ ಗೊಂಚಲು ನೆರವಿನಿಂದ ಜಮ್ಮು-ಕಾಶ್ಮೀರ ತಂಡ ಸೋಮವಾರ ಇಲ್ಲಿ ನಡೆದ ರಣಜಿ ಟ್ರೋಫಿ ‘ಸಿ’ ಗುಂಪಿನ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಇನಿಂಗ್ಸ್ ಹಾಗೂ 27 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು.

 4 ವಿಕೆಟ್‌ಗಳ ನಷ್ಟಕ್ಕೆ 103 ರನ್‌ನಿಂದ ನಾಲ್ಕನೇ ಹಾಗೂ ಅಂತಿಮ ದಿನದಾಟವನ್ನು ಮುಂದುವರಿಸಿದ ಜಾರ್ಖಂಡ್ ತಂಡ 26.4 ಓವರ್‌ಗಳಲ್ಲಿ ಕೊನೆಯ ಆರು ವಿಕೆಟ್‌ಗಳನ್ನು ಕಳೆದುಕೊಂಡು 155 ರನ್‌ಗೆ ಆಲೌಟಾಯಿತು. ನಾಲ್ಕು ಪಂದ್ಯಗಳಲ್ಲಿ ಮೊದಲ ಸೋಲು ಕಂಡಿತು. ಕೊನೆಯ ದಿನದಾಟದಲ್ಲಿ ಅನುಭವಿ ಬ್ಯಾಟ್ಸ್ ಮನ್ ಇಶಾಂಕ್ ಜಗ್ಗಿ(34,96 ಎಸೆತ, 2 ಬೌಂಡರಿ)ಜಮ್ಮು-ಕಾಶ್ಮೀರದ ದಾಳಿಯನ್ನು ದಿಟ್ಟವಾಗಿ ಎದುರಿಸಿದರು. ಪ್ರತಿಭಾವಂತ ಆಟಗಾರ ಇಶಾನ್ ಕಿಶನ್(8,28 ಎಸೆತ, 1 ಬೌಂಡರಿ)ಹಾಗೂ ವಿರಾಟ್ ಸಿಂಗ್(1)ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದೆ ನಿರಾಸೆಗೊಳಿಸಿದರು.

ವಿರಾಟ್ ಸಿಂಗ್ ವಿಕೆಟ್ ಪಡೆದ ಮುಹಮ್ಮದ್ ಮುಧಾಸಿರ್ ಜಮ್ಮು-ಕಾಶ್ಮೀರಕ್ಕೆ ಮೇಲುಗೈ ಒದಗಿಸಿದರು. ಕಿಶನ್ ಹಾಗೂ ಜಗ್ಗಿ 8 ಓವರ್‌ಗಳನ್ನು ನಿಭಾಯಿಸಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು 3 ರನ್ ಅಂತರದಲ್ಲಿ ಕ್ರಮವಾಗಿ ಉಮರ್ ನಝೀರ್ ಹಾಗೂ ಅಖೀಬ್ ನಬಿಗೆ ವಿಕೆಟ್ ಒಪ್ಪಿಸಿದರು.

ಈ ಗೆಲುವಿನೊಂದಿಗೆ ಜಮ್ಮು-ಕಾಶ್ಮೀರ ತಂಡ 4 ಪಂದ್ಯಗಳಲ್ಲಿ 20 ಅಂಕ ಕಲೆ ಹಾಕಿದೆ. ಜಾರ್ಖಂಡ್ 16 ಅಂಕ ಗಳಿಸಿದೆ.

ರಾಯ್‌ಪುರದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಹರ್ಯಾಣ ತಂಡ ಛತ್ತೀಸ್‌ಗಢ ತಂಡವನ್ನು 89 ರನ್‌ಗಳಿಂದ ಮಣಿಸಿತು. ಈ ಮೂಲಕ 21 ಅಂಕ ಕಲೆಹಾಕಿತು. ಅಗರ್ತಲದಲ್ಲಿ ನಡೆದ ಪಂದ್ಯದಲ್ಲಿ ಒಡಿಶಾ ತಂಡ ತ್ರಿಪುರಾಕ್ಕೆ ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆ ಬಿಟ್ಟುಕೊಟ್ಟಿತು. 22 ಅಂಕ ಗಳಿಸಿ ಸಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.

ಸಂಕ್ಷಿಪ್ತ ಸ್ಕೋರ್

ಜಾರ್ಖಂಡ್ 259 ಹಾಗೂ 155 ಆಲೌಟ್(ಮುಹಮ್ಮದ್ ನಝೀಮ್ 37, ಇಶಾಂಕ್ ಜಗ್ಗಿ 34, ಅಖೀಬ್ ನಬಿ 5-38)

ಜಮ್ಮು-ಕಾಶ್ಮೀರ: 87.4 ಓವರ್‌ಗಳಲ್ಲಿ 441 ರನ್‌ಗೆ ಆಲೌಟ್

(ಅಬ್ದುಲ್ ಸಮದ್ 128, ಸೂರ್ಯಾಂಶ್ ರೈನಾ 76, ಅಬಿದ್ ಮುಷ್ತಾಕ್ 50, ವರುಣ್ ಆ್ಯರೊನ್ 3-69, ಆಶೀಷ್ ಕುಮಾರ್ 3-102)

ಜಮ್ಮು-ಕಾಶ್ಮೀರಕ್ಕೆ 7 ಅಂಕ, ಜಾರ್ಖಂಡ್:0

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News