ನ್ಯೂಝಿಲ್ಯಾಂಡ್ ವಿರುದ್ದ ಟೆಸ್ಟ್ ನಿಂದ ಹೊರಗುಳಿಯುವ ಭೀತಿಯಲ್ಲಿ ಪೃಥ್ವಿ ಶಾ

Update: 2020-01-08 05:16 GMT

ಮುಂಬೈ, ಜ.7: ಹದಿನಾರು ತಿಂಗಳ ಹಿಂದೆ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿ ಗಮನಾರ್ಹ ಪ್ರದರ್ಶನ ನೀಡಿದ್ದ 20ರ ಹರೆಯದ ಪೃಥ್ವಿ ಶಾ ಇದೀಗ ಗಾಯದ ಸಮಸ್ಯೆ ಹಾಗೂ ಅಶಿಸ್ತಿನ ಕಾರಣ ತಂಡಕ್ಕೆ ವಾಪಸಾಗಲು ಕಷ್ಟದ ಹಾದಿ ಎದುರಿಸುತ್ತಿದ್ದಾರೆ.

 ಕರ್ನಾಟಕ ವಿರುದ್ಧ ಮುಂಬೈನಲ್ಲಿ ನಡೆದಿದ್ದ ರಣಜಿ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಎಡ ಭುಜನೋವಿಗೆ ತುತ್ತಾಗಿದ್ದ ಪೃಥ್ವಿ ಶಾ ಶನಿವಾರ ಎಂಆರ್‌ಐ ಸ್ಕಾನಿಂಗ್‌ಗೆ ಒಳಗಾಗಿದ್ದರು. ವೈದ್ಯರು ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಇದೀಗ ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ಯಲ್ಲಿದ್ದಾರೆ. ಶಾ ಚೇತರಿಕೆಯ ಮೇಲ್ವಿಚಾರಣೆವಹಿಸಿರುವವರು ಶಾ ನ್ಯೂಝಿಲ್ಯಾಂಡ್ ವಿರುದ್ದ ಭಾರತ ‘ಎ’ ತಂಡದ 2 ಚತುರ್ದಿನ ಪಂದ್ಯದಲ್ಲಿ ಆಡುವ ನಿರೀಕ್ಷೆಯಲ್ಲಿದ್ದಾರೆ.

ಭಾರತ ಎ ಹಾಗೂ ನ್ಯೂಝಿಲ್ಯಾಂಡ್ ‘ಎ’ ಮಧ್ಯೆ ಎರಡು ಚತುರ್ದಿನ ಪಂದ್ಯಗಳು ಕ್ರೈಸ್ಟ್ ಚರ್ಚ್ ಹಾಗೂ ಲಿಂಕೊನ್‌ನಲ್ಲಿ ನಡೆಯಲಿದೆ. ಜ.30ರಿಂದ ಆರಂಭವಾಗಿ ಫೆ.10ರಂದು ಕೊನೆಗೊಳ್ಳಲಿದೆ. ಟೀಮ್ ಇಂಡಿಯಾವು ನ್ಯೂಝಿಲ್ಯಾಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲು ಹ್ಯಾಮಿಲ್ಟನ್‌ನಲ್ಲಿ ಫೆ.14ರಿಂದ ತ್ರಿದಿನ ಅಭ್ಯಾಸ ಪಂದ್ಯವನ್ನು ಆಡಲಿದೆ. ‘‘ನ್ಯೂಝಿಲ್ಯಾಂಡ್ ವಿರುದ್ಧದ ಭಾರತದ ಟೆಸ್ಟ್ ತಂಡದಲ್ಲಿ ಶಾ ಭಾಗಿಯಾಗುವುದು ಅನುಮಾನ. ಶಾಗೆ ತಂಡದಲ್ಲಿ ಸ್ಥಾನ ಎಲ್ಲಿದೆ ಎಂದು ಗೊತ್ತಿಲ್ಲ. ಮಾಯಾಂಕ್ ಹಾಗೂ ರೋಹಿತ್ ಅಗ್ರ ಕ್ರಮಾಂಕದಲ್ಲಿದ್ದರೆ, ರಾಹುಲ್ ಕೂಡ ಮೂರನೇ ಆಯ್ಕೆಯಾಗಿದ್ದಾರೆ. ನ್ಯೂಝಿಲ್ಯಾಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ಎ ತಂಡದ ನಾಯಕ ಶುಭಮನ್ ಗಿಲ್ ಕೂಡ ಅಗ್ರ ಸರದಿಯಲ್ಲಿ ಸ್ಥಾನ ಪಡೆಯುವ ರೇಸ್‌ನಲ್ಲಿದ್ದಾರೆ. ಭಾರತ ‘ಎ’ ತಂಡದೊಂದಿಗೆ ನ್ಯೂಝಿಲ್ಯಾಂಡ್‌ನಿಂದ ವಾಪಸಾದ ಬಳಿಕ ಶಾ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಆಡುವ ಸಾಧ್ಯತೆಯಿಲ್ಲ. ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ್ದ ಮುಂಬೈ ಬ್ಯಾಟ್ಸ್‌ಮನ್ ಶಾ ಕಳೆದ 15 ತಿಂಗಳುಗಳಿಂದ ಟೆಸ್ಟ್ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. 2020ರಲ್ಲಿ ಅವರು ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಲಕ್ಷಣವಿಲ್ಲ.

ಶಾ ಸ್ಥಳೀಯ ಶಾಲಾ ಟೂರ್ನಮೆಂಟ್‌ನಲ್ಲಿ 330 ಎಸೆತಗಳಲ್ಲಿ 546 ರನ್ ಗಳಿಸಿದ್ದರು. ದುಲೀಪ್ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕಿರಿಯ ಆಟಗಾರನೆಂಬ ಕೀರ್ತಿಗೆ ಪಾತ್ರರಾಗಿದ್ದರು.ಭಾರತ ಅಂಡರ್-19 ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸಲು ತಂಡದ ನೇತೃತ್ವವಹಿಸಿದ್ದ ಶಾ ಕೊನೆಗೂ ಟೆಸ್ಟ್ ಕ್ರಿಕೆಟ್ ಆಡುವ ಕನಸನ್ನು ಈಡೇರಿಸಿ ಕೊಂಡಿದ್ದರು. ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News