ಸೆರೆಮನೆಗಳು ದಲಿತರು ಮತ್ತು ಮುಸ್ಲಿಮರಿಂದ ತುಂಬಿರುವುದೇಕೆ?

Update: 2020-01-08 05:50 GMT

ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ ರಾಷ್ಟ್ರದ ಸೆರೆಮನೆಗಳ ಅಂಕಿ ಅಂಶದ ವರದಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ, ದೇಶದಲ್ಲಿರುವ ಸೆರೆಮನೆಗಳಲ್ಲಿ ಬಂಧಿಯಾಗಿರುವ ಅಪರಾಧಿಗಳಲ್ಲಿ ಬಹುಪಾಲು ದಲಿತ ಮತ್ತು ಮುಸ್ಲಿಮರಿರುವುದು ವರದಿಯಾಗಿದೆ. ಅಲ್ಲದೆ, ರಾಷ್ಟ್ರದಲ್ಲಿರುವ ಸೆರೆಮನೆಗಳಿಗಿಂತ ಕೈದಿಗಳ ಸಂಖ್ಯೆಯೇ ಅಧಿಕವಾಗಿರುವುದು ವ್ಯವಸ್ಥೆಯಲ್ಲಿನ ಲೋಪವನ್ನು ತಿಳಿಸುತ್ತದೆ. ದೇಶದ ಜನಸಂಖ್ಯೆಯ ಪ್ರಮಾಣದಲ್ಲಿ ಬಹುಮುಖ್ಯವಾದ ಪಾಲುದಾರಿಕೆ ಹೊಂದಿರುವ ಸಮುದಾಯಗಳು, ಅಪರಾಧಗಳಲ್ಲೂ ತಮ್ಮದೇ ಮೇಲುಗೈ ಸಾಧಿಸಿರುವುದು ಆಶ್ಚರ್ಯಕರ. ಈ ವರದಿಯ ಪ್ರಕಾರ ದಲಿತರು ಮತ್ತು ಮುಸ್ಲಿಮರು ಅತೀ ಹೆಚ್ಚು ಅಪರಾಧಗಳನ್ನು ಎಸಗುತ್ತಾರೆ ಎಂಬುದಾಗಿದೆ. ಆದರೆ, ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ, ಶೋಷಣೆ, ದೌರ್ಜನ್ಯಕ್ಕೆ ತುತ್ತಾಗಿರುವ ಸಮುದಾಯಗಳು ಹೇಗೆ ತಾನೇ ಅಪರಾಧಗಳನ್ನು ಎಸಗಲು ಸಾಧ್ಯ? ಎಂಬ ಪ್ರಶ್ನೆಯು ಸಂವೇದನಾಶೀಲ ಹೃದಯಗಳಲ್ಲಿ ಮೂಡದಿರದು. ಪ್ರಸ್ತುತ ವರದಿಯಲ್ಲಿ ವಿಚಾರಣಾಧೀನ ಪ್ರಕರಣಗಳ ಸಂಖ್ಯೆಯು 2016ಕ್ಕೆ ಹೋಲಿಸಿದರೆ ಶೇ.10.4ರಷ್ಟು ಅಧಿಕವಾಗಿರುವುದನ್ನು ಕಾಣಬಹುದಾಗಿದೆ. ಇದರಿಂದಾಗಿ ಸೆರೆಮನೆಗಳ ಕೈದಿಗಳ ಸಂಖ್ಯೆ 4.66 ಲಕ್ಷ (ಶೇ. 117.6) ಹೆಚ್ಚಾದ ಕಾರಣ ಸೆರೆಮನೆಗಳು ತುಂಬಿತುಳುಕುತ್ತಿವೆ. ಅಲ್ಲದೆ, ನ್ಯಾಯವು ಬಡವರಿಗೆ, ದೀನ-ದುರ್ಬಲರಿಗೆ ಸುಲಭವಾಗಿ ದೊರಕದ ಕಾರಣ ಹೆಚ್ಚು ಜನರು ಅಪರಾಧಿಗಳಾಗಿ ಉಳಿಯಲು ಕಾರಣವಾಗಿದೆ. ಇದು ಸಮಾಜದಲ್ಲಿ ತಾಂಡವವಾಡುತ್ತಿರುವ ಸಾಮಾಜಿಕ ಅನ್ಯಾಯ ಮತ್ತು ಅಸಮಾನತೆಯನ್ನು ಬಿಂಬಿಸುತ್ತದೆ.

ಟಂಡನ್ ಸಮಿತಿ(1977-81)ಯ ಶಿಫಾರಸಿನ ಮೇರೆಗೆ 1986ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ ಚಾಲನೆಗೆ ಬಂದಿತು. ಈ ಸಂಸ್ಥೆಯು ಅಪರಾಧಗಳ ಮಾಹಿತಿ ಘಟಕದ ಮುಖೇನ ಅಪರಾಧಗಳಿಗೆ ಸಂಬಂಧಿಸಿದ ಸಂಶೋಧನೆ, ಅಂಕಿ ಅಂಶಗಳ ಸಂಗ್ರಹ, ವರದಿಗಳ ತಯಾರಿಕೆಯಂತಹ ಮಹತ್ತರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಸೆರೆಮನೆಗಳ ಅಂಕಿ ಅಂಶಗಳನ್ನು 1995ರಿಂದ ಪ್ರಕಟಿಸುತ್ತಾ ಬಂದಿದೆ. ಅಲ್ಲದೆ, ಅಪರಾಧಗಳ ಅಂಕಿ ಅಂಶಗಳನ್ನು 1953ರಿಂದ ಸರಕಾರಿ ಅಂತರ್ಜಾಲಗಳಲ್ಲಿ ಪ್ರಕಟಿಸಿದೆ. ಇವುಗಳ ಜೊತೆಗೆ ಭಾರತದಲ್ಲಿ ಅಪರಾಧಗಳು, ಅಪಘಾತದಿಂದ ಸಾವುಗಳು ಮತ್ತು ಆತ್ಮಹತ್ಯೆಗಳ ವಿಚಾರಗಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹ ಮತ್ತು ವರದಿಗಳ ಬಿಡುಗಡೆಯ ಕೆಲಸವನ್ನು ನಿರ್ವಹಿಸುತ್ತಾ ಬಂದಿದೆ. ಈ ಎಲ್ಲಾ ಮಾಹಿತಿಗಳು ರಾಷ್ಟ್ರದಲ್ಲಿ ಜರುಗುವ ಅಚಾತುರ್ಯಗಳು ಹಾಗೂ ಅಪರಾಧಗಳ ಬಗ್ಗೆ ಅಗತ್ಯ ಅರಿವು ಮೂಡಿಸಲು ಉಪಯುಕ್ತವಾಗಿವೆ. ಹಾಗೆಯೇ, ಇಂತಹ ಕೃತ್ಯಗಳನ್ನು ತಹಬಂದಿಗೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನೆರವಾಗುತ್ತಿವೆ. ಭಾರತೀಯ ಸೆರೆಮನೆಗಳ ಅಂಕಿ ಅಂಶ 2018 ವರದಿಯ ಪ್ರಕಾರ ರಾಷ್ಟ್ರದ ಸೆರೆಮನೆಗಳಲ್ಲಿರವ ಅಪರಾಧಿಗಳ ಪ್ರಮಾಣದಲ್ಲಿ ದಲಿತರು, ಆದಿವಾಸಿಗಳು ಮತ್ತು ಮುಸ್ಲಿಮರೇ ಅಧಿಕವಾಗಿದ್ದಾರೆ. ಇದರ ಹಿಂದಿನ ವರದಿಗಳಾದ 2016 ಮತ್ತು 2017ಗಳಲ್ಲಿ ಜಾತಿ ಆಧಾರಿತ ಮತ್ತು ಧರ್ಮ ಆಧಾರಿತ ಮಾಹಿತಿಗಳು ಲಭ್ಯವಿರದಿದ್ದದ್ದು ಚರ್ಚೆಗೆ ಗ್ರಾಸವಾಗಿತ್ತು. ಇತ್ತೀಚೆಗಷ್ಟೇ ಆ ಮಾಹಿತಿಗಳನ್ನು ಸಂಸ್ಥೆಯು ಪ್ರಕಟಿಸಿರುವುದರಿಂದ ಮಾಹಿತಿಯ ಕೊರತೆಯನ್ನು ಸರಿದೂಗಿಸಲು ಅನುಕೂಲವಾಗಿದೆ. 2018ರ ವರದಿಯಲ್ಲಿ ಅಪರಾಧಿಗಳ ಪ್ರಮಾಣದಲ್ಲಿ ಶೇ.34.87ರಷ್ಟು ಒಬಿಸಿಗಳಿದ್ದರೆ, ಶೇ.21.06 ಪರಿಶಿಷ್ಟ ಜಾತಿಯವರು, ಶೇ.13.49 ಪರಿಶಿಷ್ಟ ಪಂಗಡದವರು, ಇತರೆ ಶೇ.30.58ರಷ್ಟಿದ್ದಾರೆ. ಹಾಗೆಯೇ, ವಿಚಾರಣಾಧೀನ ಕೈದಿಗಳ ಪ್ರಮಾಣದಲ್ಲಿ ಶೇ.36.23 ಒಬಿಸಿಗಳು, ಶೇ.22.60 ಪರಿಶಿಷ್ಟ ಜಾತಿ, ಶೇ.11.83ರಷ್ಟು ಪರಿಶಿಷ್ಟ ಪಂಗಡದವರು, ಇತರ ಶೇ.29.33ರಷ್ಟಿದ್ದಾರೆ. ಈ ಅಂಕಿ ಅಂಶಗಳು 2015ರ ವರದಿಯಲ್ಲಿದ್ದ ಅಂಕಿ ಅಂಶಗಳಿಗೆ ಸಮಾನವಾಗಿವೆ. ಅಂದರೆ 2015ರಿಂದಿಚೆಗೆ ಪ್ರತಿ ವರದಿಗಳಲ್ಲೂ ದೇಶದ ದಲಿತರು ಮತ್ತು ಮುಸ್ಲಿಮರ ಅಪರಾಧಗಳ ಪ್ರಮಾಣ ಏರುಮುಖವಾಗಿ ಚಲಿಸುತ್ತಿದೆಯೇ ವಿನಃ ಅಪರಾಧಗಳ ಪ್ರಮಾಣ ಇಳಿಕೆಯಾಗುತ್ತಿಲ್ಲ ಎಂಬುದು ಈ ವರದಿಗಳ ಸಾರಂಶವಾಗಿದೆ. ಅಲ್ಲದೆ, ಅತೀ ಹೆಚ್ಚು ಮುಸ್ಲಿಮ್ ಮತ್ತು ದಲಿತ ಅಪರಾಧಿಗಳು ಉತ್ತರ ಪ್ರದೇಶದಲ್ಲಿ ಕಂಡುಬಂದಿದ್ದು ಅಲ್ಲಿನ ಆಡಳಿತರೂಢ ಸರಕಾರವು, ಎರಡು ಸಮುದಾಯಗಳ ಮೇಲೆ ನಡೆಸಿರುವ ದೌರ್ಜನ್ಯಗಳನ್ನು ಬಿಂಬಿಸುವಂತಿದೆ. ಹಾಗೆಯೇ, ಅತೀ ಹೆಚ್ಚು ಆದಿವಾಸಿ ಅಪರಾಧಿಗಳು ಮಧ್ಯಪ್ರದೇಶದಲ್ಲಿ ಹಾಗೂ ಜಾರ್ಖಂಡ್‌ನಲ್ಲಿ ಕಂಡುಬಂದಿದ್ದು ಅಲ್ಲಿ ಜರುಗಿದ ಆದಿವಾಸಿಗಳ ಮೇಲಿನ ದೌರ್ಜನ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಕರ್ನಾಟಕದ ಅಂಕಿ ಅಂಶಗಳನ್ನು ಗಮನಿಸುವುದಾದರೆ 3,817 ಅಪರಾಧಿಗಳಿದ್ದು ಶೇ. 43.54 ಒಬಿಸಿ, ಶೇ.19.75 ಎಸ್ಸಿ, ಶೇ.9.11ರಷ್ಟು ಎಸ್ಟಿಗಳಿದ್ದಾರೆ ಹಾಗೆಯೇ ವಿಚಾರಣಾಧೀನ ಕೈದಿಗಳು ಒಟ್ಟು 10,109ವಿದ್ದು ಶೇ.51.26ರಷ್ಟು ಒಬಿಸಿ, ಶೇ.20.27 ಎಸ್ಸಿ, ಶೇ.8.96 ಎಸ್ಟಿಗಳಿದ್ದು, ಇತರೆ ಶೇ.19.51ರಷ್ಟಿದ್ದಾರೆ. ಧರ್ಮಾಧಾರಿತ ಅಂಕಿ ಅಂಶಗಳನ್ನು ನೋಡುವುದಾದರೆ ಅಪರಾಧಿಗಳ ಸಂಖ್ಯೆ 3,817ರಷ್ಟಿದ್ದು, ಹಿಂದೂಗಳು ಶೇ.77.86ರಷ್ಟಿದ್ದರೆ, ಶೇ.14.04ಮುಸ್ಲಿಮರು, ಶೇ.2.12ರಷ್ಟು ಕ್ರಿಶ್ಚಿಯನ್ನರಿದ್ದು, ಇತರ ಶೇ.5.81ರಷ್ಟಿದ್ದಾರೆ. ಹಾಗೆಯೇ ವಿಚಾರಣಾಧೀನ ಒಟ್ಟು ಕೈದಿಗಳ ಸಂಖ್ಯೆ 10,109ರಲ್ಲಿ ಶೇ.72.54ರಷ್ಟು ಹಿಂದೂಗಳಿದ್ದರೆ.ಶೇ.22.38ಮುಸ್ಲಿಮರು, ಶೇ.3.43ಕ್ರಿಶ್ಚಿಯನ್ನರು, ಇತರ ಶೇ.1.54ರಷ್ಟು ಕರ್ನಾಟಕದಲ್ಲಿದ್ದಾರೆ. ರಾಷ್ಟ್ರಮಟ್ಟದಲ್ಲಿ ಗಮನಿಸುವುದಾದರೆ ಒಟ್ಟು 4.66ಲಕ್ಷ ಕೈದಿಗಳಲ್ಲಿ 3.12ಲಕ್ಷ ಹಿಂದೂಗಳು, 87,673 ಮುಸ್ಲಿಮರಿದ್ದರೆ, 13,886 ಕ್ರಿಶ್ಚಿಯನ್ನರು, 16,989 ಸಿಖ್ಖರಿದ್ದಾರೆ ಹಾಗೂ ಇತರ ಧರ್ಮದವರು 5,028 ರಷ್ಟಿದ್ದಾರೆ. ಮೇಲೆ ವಿವರಿಸಿರುವ ಅಂಕಿ ಅಂಶಗಳಲ್ಲಿ ಅಪರಾಧ ಮತ್ತು ವಿಚಾರಣಾಧೀನ ಕೈದಿಗಳ ಪ್ರಮಾಣಗಳನ್ನು ವಿಂಗಡಿಸಿ ವಿಸ್ತರಿಸಲಾಗಿದೆ. ಏಕೆಂದರೆ ವಿಚಾರಣಾಧೀನ ಕೈದಿಗಳೆಲ್ಲರೂ ಅಪರಾಧಿಗಳಾಗಿರುವುದಿಲ್ಲ, ಅವರು ಕೇವಲ ಆರೋಪಿಗಳಷ್ಟೆ. ನ್ಯಾಯಾಲಯದಲ್ಲಿ ಅಪರಾಧಿ ಎಂದು ಸಾಬೀತಾಗದ ಹೊರತು ಅವರನ್ನು ಅಪರಾಧಿಗಳೆಂದು ನಮೂದಿಸುವುದು ತಪ್ಪಾಗುತ್ತದೆಂಬುದನ್ನು ಅರಿತು ವಿಂಗಡಿಸಿ ನಮೂದಿಸಲಾಗಿದೆ. ಮೇಲಿನ ಅಂಶಗಳನ್ನು ಗಮನಿಸಿದಾಗ ತಿಳಿಯುವುದೇನೆಂದರೆ 2015ರಿಂದಿಚೆಗೆ ದೇಶದಲ್ಲಿ ದಲಿತರು, ಆದಿವಾಸಿಗಳು ಮತ್ತು ಮುಸ್ಲಿಮ್ ಅಪರಾಧಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಉತ್ತರ ಪ್ರದೇಶದಲ್ಲಿ ಅಪರಾಧಿ ಮತ್ತು ವಿಚಾರಣಾಧೀನ ಮುಸ್ಲಿಮ್ ಕೈದಿಗಳ ಸಂಖ್ಯೆಯು 59,312ರಷ್ಟಿದ್ದರೆ, ಪರಿಶಿಷ್ಟ ಜಾತಿಯವರು 24,489ರಷ್ಟಿದ್ದಾರೆ. ಇನ್ನು ಛತ್ತೀಸ್‌ಗಡದಲ್ಲಿ 6,890ರಷ್ಟು ಆದಿವಾಸಿ ಕೈದಿಗಳಿರುವುದು ವರದಿಯಲ್ಲಿ ಕಾಣಬಹುದು.

ಹೀಗೆ ವರ್ಷದಿಂದ ವರ್ಷಕ್ಕೆ ದೇಶದಲ್ಲಿ ದಲಿತರು, ಆದಿವಾಸಿಗಳು ಮತ್ತು ಮುಸ್ಲಿಮ್ ಅಪರಾಧಿಗಳ ಸಂಖ್ಯೆಯು ಏರಿಕೆಯಾಗಲು ಕಾರಣವನ್ನು ಹುಡುಕುತ್ತಾ ಹೋದರೆ ಆ ರಾಜ್ಯದಲ್ಲಿರುವ ಸಾಮಾಜಿಕ ಅಸಮಾನತೆಯೇ ಇದಕ್ಕೆ ಕಾರಣವೆನ್ನಬಹುದು. ಉತ್ತರಪ್ರದೇಶದಲ್ಲಿನ ಸರಕಾರವು ಪರಿಶಿಷ್ಟಜಾತಿ ಮತ್ತು ಮುಸ್ಲಿಮ್ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಸುವ ದೌರ್ಜನ್ಯಗಳು ಪ್ರತಿನಿತ್ಯವೂ ವರದಿಯಾಗುತ್ತವೆ. ಅಲ್ಲದೆ ಎಷ್ಟೋ ಪ್ರಕರಣಗಳು ಬೆಳಕಿಗೆ ಬಾರದೆ ಮರೆಯಾಗುವುದು ಅಲ್ಲಿನ ಪಟ್ಟಭದ್ರ ಹಿತಾಸಕ್ತಿಗಳ ದೌರ್ಜನ್ಯಗಳನ್ನು ತಿಳಿಸುತ್ತದೆ. ಇಂದಿನ ನ್ಯಾಯಾಂಗ ವ್ಯವಸ್ಥೆಯು ಹಣಬಲ, ರಾಜಕೀಯಬಲ, ಜನಬಲವಿರುವವರಿಗೆ ದೊರೆಯುವಷ್ಟು ಶೀಘ್ರವಾಗಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ದುರ್ಬಲರಿಗೆ ದೊರೆಯುವುದಿಲ್ಲ. ಎಷ್ಟೋ ಪ್ರಕರಣಗಳಲ್ಲಿ ದೌರ್ಜನ್ಯಕ್ಕೊಳಗಾದವರ ವಿರುದ್ಧವೇ ದೌರ್ಜನ್ಯಕೋರರು ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸುವ ಮೂಲಕ ದಮನಿತರು, ಶೋಷಿತರನ್ನೇ ಅಪರಾಧಿಗಳಾಗಿಸಿರುವ ಅನೇಕ ನಿದರ್ಶನಗಳು ಕಾಣಸಿಗುತ್ತವೆ. ಇತ್ತೀಚಿನ ದಿನಗಳಲ್ಲಿ ಜಾರಿಗೆ ಬರುತ್ತಿರುವ ಕಾನೂನುಗಳು, ತಿದ್ದುಪಡಿಗಳು ಈ ಸಮುದಾಯಗಳನ್ನೇ ಗುರಿಯಾಗಿಸಿಕೊಂಡು ರೂಪಿತವಾಗುತ್ತಿವೆ. ಅರಣ್ಯ ರಕ್ಷಣಾ ಕಾಯ್ದೆಯು ಆದಿವಾಸಿಗಳನ್ನು ಒಕ್ಕಲೆಬ್ಬಿಸಿ ಅವರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ದೌರ್ಜನ್ಯಗಳು ದ್ವಿಗುಣಗೊಳ್ಳವಂತೆ ಮಾಡಲಾಗಿದೆ. ತ್ರಿವಳಿ ತಲಾಖ್, ಪೌರತ್ವ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಮೊದಲಾದ ಕಾಯ್ದೆಗಳನ್ನು ಮುಸ್ಲಿಮ್ ಸಮುದಾಯದ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ರೀತಿಯ ಕಾನೂನುಗಳ ಮೂಲಕ ಸರಕಾರದ ವಿರುದ್ಧ ಅಪಸ್ವರವೆತ್ತುವ ಶೋಷಿತ, ದಮನಿತ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳನ್ನು ಬಂಧನಕ್ಕೊಳಪಡಿಸಿ ಅಪರಾಧಿಗಳನ್ನಾಗಿಸಲಾಗುತ್ತಿದೆ. ಮೇಲಿನ ಕಾರಣಗಳ ಜೊತೆಗೆ ಸಮಾಜದಲ್ಲಿನ ಆರ್ಥಿಕ ಅಸಮಾನತೆಯು ಈ ಸಮುದಾಯಗಳನ್ನು ಅಪರಾಧಿ ಸ್ಥಾನದಲ್ಲಿರಿಸಿದೆ. ಹೀಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆಯಿಂದಾಗಿ ಶೋಷಿತ, ದುರ್ಬಲ ಸಮುದಾಯಗಳು ಸೆರೆಮನೆ ವಾಸಿಗಳಾಗಿದ್ದಾರೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರಾನಂತರದಲ್ಲೂ ಸಾಮಾಜಿಕ ಅಸಮಾನತೆಯನ್ನು ಎದುರಿಸುತ್ತಿರುವ ಶೋಷಿತರು ಹಾಗೂ ಧಾರ್ಮಿಕ ಅಸಮಾನತೆಯನ್ನು ಎದುರಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳು ಪ್ರಕರಣಗಳಿಂದ ಹೊರ ಬರಲು ತಗಲುವ ನ್ಯಾಯಾಂಗ ವೆಚ್ಚ ಭರಿಸಲಾಗದೆ ಅಪರಾಧಿಗಳಾಗಿ ಉಳಿಯುತ್ತಾರೆ ಎಂದು ಕೆಲವು ವಕೀಲರು, ಮಾನವ ಹಕ್ಕು ಹೋರಾಟಗಾರರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಪೊಲೀಸ್ ಇಲಾಖೆ, ನ್ಯಾಯಾಲಯಗಳಲ್ಲಿ ಈ ಸಮುದಾಯಗಳ ಪ್ರಾತಿನಿಧ್ಯದ ಕೊರತೆಯು ಕಾನೂನಿನ ಅರಿವಿನ ಕೊರತೆಗೆ ಕಾರಣವಾಗಿ ಜನರು ಅಪರಾಧಿಗಳಾಗುತ್ತಿದ್ದಾರೆ ಎನ್ನಬಹುದಾಗಿದೆ.

(ಶ್ರೀನಿವಾಸ್, ಕೆ. ದಾಖಲೀಕರಣಕಾರರು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ ಬೆಂಗಳೂರು)

Writer - ಶ್ರೀನಿವಾಸ್ ಕೆ.

contributor

Editor - ಶ್ರೀನಿವಾಸ್ ಕೆ.

contributor

Similar News