ಬೆಂಗಳೂರು ವಿವಿ: ಬಿ.ಕಾಂನಲ್ಲಿ ರಹಮತುನ್ನೀಸಾಗೆ ಪ್ರಥಮ ರ‍್ಯಾಂಕ್

Update: 2020-01-08 16:50 GMT
ರಹಮತುನ್ನೀಸಾ

ಬೆಂಗಳೂರು, ಜ.8: "ನನ್ನ ನಾಲ್ವರು ಒಡಹುಟ್ಟಿದವರಿಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆಯಲಾಗಿಲ್ಲ. ಹಿರಿಯ ಸಹೋದರ ನಮ್ಮ ತಂದೆ ಅಕಾಲಿಕ ಮರಣ ಹೊಂದಿದ್ದರಿಂದ 6ನೇ ತರಗತಿಗೆ ಶಾಲೆಯನ್ನು ಮೊಟಕುಗೊಳಿಸಿ, ಕುಟುಂಬದ ಜವಾಬ್ದಾರಿ ತೆಗೆದುಕೊಂಡ. ಮೂವರು ಸಹೋದರಿಯರಲ್ಲಿ ಇಬ್ಬರು 10ನೇ ತರಗತಿ, ಇನ್ನೊಬ್ಬಳು 12ನೇ ತರಗತಿಗೆ ಶಾಲೆಯನ್ನು ನಿಲ್ಲಿಸಿದ್ದಾಳೆ. ನಾನೇ ನಮ್ಮ ಕುಟುಂಬದ ಮೊದಲ ಪದವೀಧರೆ..." ಇದು, ಪ್ರಸಕ್ತ ಸಾಲಿನ ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದ 2018-2019ರ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ತಾತ್ಕಾಲಿಕ ಶ್ರೇಣಿಯ ಪಟ್ಟಿಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ಬಿಬಿಎಂಪಿಯ ಕ್ಲೇವ್‌ಲ್ಯಾಂಡ್ ಟೌನ್‌ನ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನ 20ರ ಹರೆಯದ ವಿದ್ಯಾರ್ಥಿನಿ ರಹಮತುನ್ನೀಸಾ ಮಾತುಗಳು.

ಬದುಕಿಗೆ ಶಿಕ್ಷಣವೆಂಬುದು ಬಹುಮುಖ್ಯ. ಇಂದು ಶಿಕ್ಷಣಕ್ಕಾಗಿಯೇ ಲಕ್ಷಾಂತರ ರೂ. ಖರ್ಚು ಮಾಡಿ ಖಾಸಗಿ ಶಾಲೆ, ಟ್ಯೂಷನ್‌ಗಳಿಗೆ ಸೇರಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ ಕೇವಲ ಖಾಸಗಿ ಸಂಸ್ಥೆಗಳಲ್ಲಿ ಮಾತ್ರವಲ್ಲದೆ ಸರಕಾರಿ ಶಾಲಾ-ಕಾಲೇಜಿನಲ್ಲಿಯೂ ಬುದ್ಧಿವಂತ ವಿದ್ಯಾರ್ಥಿಗಳಿದ್ದಾರೆ ಎಂದು ಈ ವಿದ್ಯಾರ್ಥಿನಿ ಸಾಬೀತುಪಡಿಸಿದ್ದಾಳೆ.

ಬೆಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ 475 ಪದವಿ ಕಾಲೇಜುಗಳಲ್ಲಿ 7 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು 2016-19ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇತ್ತೀಚೆಗೆ, ಬೆಂಗಳೂರು ವಿಶ್ವವಿದ್ಯಾಲಯವು 2018-2019ರ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ತಾತ್ಕಾಲಿಕ ಶ್ರೇಣಿಯ ಪಟ್ಟಿಯನ್ನು ಪ್ರಕಟಿಸಿತ್ತು. ಅದರಲ್ಲಿ ಬಿ.ಕಾಂ ಪದವಿಯಲ್ಲಿ ಈ ವಿದ್ಯಾರ್ಥಿನಿಯು ಶೇ.91.87ರಷ್ಟು (4600ಕ್ಕೆ 4226) ಅಂಕಗಳನ್ನು ಪಡೆಯುವ ಮೂಲಕ ವಿಶ್ವವಿದ್ಯಾಲಯಕ್ಕೆ ಅಗ್ರಸ್ಥಾನ ಪಡೆದಿದ್ದಾಳೆ. ಈ ಮೂಲಕ ಬಿಬಿಎಂಪಿ ನಡೆಸುತ್ತಿರುವ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಮೊದಲ ಬಾರಿಗೆ ಈ ಗೌರವಕ್ಕೆ ಪಾತ್ರಳಾಗಿದ್ದಾಳೆ.

'ಉತ್ತಮ ಅಂಕಗಳನ್ನು ಗಳಿಸುವ ನಿರೀಕ್ಷೆಯನ್ನು ಹೊಂದಿದ್ದೆ. ಆದರೆ, ಅಗ್ರಸ್ಥಾನ ಪಡೆಯುವ ನಿರೀಕ್ಷೆ ಇರಲಿಲ್ಲ. ನಾನು ಬಿ.ಕಾಂನಲ್ಲಿ ಮೊದಲ ಸ್ಥಾನ ಪಡೆದಿದ್ದೇನೆ ಎಂದು ತಿಳಿಸಲು ಪ್ರಾಂಶುಪಾಲರು ನನಗೆ ಕರೆ ಮಾಡಿದಾಗ, ಸಂತೋಷದಿಂದ ಮಾತೇ ಹೊರಡದಂತಾಯಿತು' ಎಂದು ಆ ಕ್ಷಣವನ್ನು ವಿದ್ಯಾರ್ಥಿನಿ ರಹಮತುನ್ನೀಸಾ ‘ವಾರ್ತಾಭಾರತಿ’ಯೊಂದಿಗೆ ಹಂಚಿಕೊಂಡರು.

'ಬಿಬಿಎಂಪಿ ನಡೆಸುವ ಕಾಲೇಜುಗಳು ಗುಣಮಟ್ಟದ ಶಿಕ್ಷಣವನ್ನು ನೀಡುವುದಿಲ್ಲ ಎಂಬ ಮಾತನ್ನು ಮುರಿಯಲು ಬಯಸುತ್ತೇನೆ. ಇಲ್ಲಿನ ಶಿಕ್ಷಕರು ಹೆಚ್ಚು ಅರ್ಹತೆ ಪಡೆದಿದ್ದಾರೆ ಮತ್ತು ನಮಗೆ ಬೆಂಬಲ ನೀಡುತ್ತಾರೆ' ಎಂದು ರಹಮತುನ್ನೀಸಾ ತಿಳಿಸಿದ್ದಾಳೆ.

ಶಿಕ್ಷಣ ಸಚಿವರ ಮೆಚ್ಚುಗೆ: ರಹಮತುನ್ನಿಸಾ ಅವರನ್ನು ಅಭಿನಂದಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎಸ್.ಸುರೇಶ್‌ ಕುಮಾರ್ ತಮ್ಮ ಫೇಸ್‌ ಬುಕ್ ಪುಟದಲ್ಲಿ "ಈ ಹುಡುಗಿ ಬಿಕಾಂನಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಮೂಲಕ ನಮಗೆ ಹಾಗೂ ಬಿಬಿಎಂಪಿಗೆ ಹೆಮ್ಮೆ ತಂದಿದೆ ಎಂದು ಬರೆದಿದ್ದಾರೆ. ಅಲ್ಲದೇ ಮುಂದಿನ ಅವಳ ಶಿಕಣಕ್ಕೆ ಸಹಾಯ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.

ಚಿಕ್ಕ ಮನೆಯಲ್ಲಿ ವಾಸ ಮಾಡಿಕೊಂಡು ಓದಿ ಪ್ರಥಮ ರ‍್ಯಾಂಕ್ ಸಾಧಿಸಿರುವುದು ಅತ್ಯಂತ ಶ್ಲಾಘನೀಯ. ಇದು ಇತರೆ ವಿದ್ಯಾರ್ಥಿಗಳಿಗೂ ಸ್ಪೂರ್ತಿ ನೀಡುವ ಅಂಶ. ಜೀವನದಲ್ಲಿ ಏನಾದರೂ ಸಾಧಿಸಲೇಬೇಕೆನ್ನುವ ಛಲವಿದ್ದರೆ ಯಾವುದೂ ಅಡ್ಡ ಬರುವುದಿಲ್ಲ ಎಂಬುದಕ್ಕೆ ರಹಮತುನ್ನೀಸಾ ಉದಾಹರಣೆ.

-ಎಸ್.ಸುರೇಶ್‌ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.96ರಷ್ಟು ಅಂಕ ಗಳಿಸಿದ್ದೇನೆ. ನನ್ನ ತಂದೆಯ ಅಕಾಲಿಕ ಮರಣದಿಂದ ತಾಯಿಗೆ ಎದುರಾದ ಸಂಕಷ್ಟ ನನ್ನ ಇಂದಿನ ಸಾಧನೆಗೆ ಕಾರಣ. ಇಂದು ತುಂಬಾ ಖುಷಿಯಾಗುತ್ತಿದೆ. ಬಿಬಿಎಂಪಿಯವರು ಮತ್ತು ಶಿಕ್ಷಣ ಸಚಿವರು ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮುಂದೆ ಐಎಎಸ್ ಪಾಸ್ ಮಾಡಿ ಅಧಿಕಾರಿಯಾಗುವ ಆಸೆ ಇದೆ

-ರಹಮತುನ್ನೀಸಾ, ಬಿಬಿಎಂಪಿ ಕಾಲೇಜು ವಿದ್ಯಾರ್ಥಿನಿ

Writer - ಯುವರಾಜ್ ಮಾಳಗಿ

contributor

Editor - ಯುವರಾಜ್ ಮಾಳಗಿ

contributor

Similar News