ಭರವಸೆ ಮೂಡಿಸದ ನೂರು ದಿನಗಳ ಮೇಯರ್ ಆಡಳಿತ !
ಬೆಂಗಳೂರು, ಜ.8: ಬಿಬಿಎಂಪಿ ಮೇಯರ್ ಆಗಿ ಗೌತಮ್ ಕುಮಾರ್ ಜೈನ್ ಅವರ ಅಧಿಕಾರಾವಧಿ ನೂರು (ಜ.8ಕ್ಕೆ) ದಿನ ಪೂರೈಸಿದೆ. ಈ ಅವಧಿಯಲ್ಲಿ ರಸ್ತೆ ಗುಂಡಿ ದುರಸ್ತಿಯಂತಹ ತುರ್ತು ಕಾರ್ಯವೂ ಪರಿಣಾಮಕಾರಿಯಾಗಿ ನಡೆಯದೇ ಇರುವುದು ನಗರವಾಸಿಗಳ ನಿರೀಕ್ಷೆ ಹುಸಿಯಾಗಿಸಿದೆ.
ನಾನು ಕೂಡ ವಾರ್ಡ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವುದರಿಂದ ವಾಹನ ಸವಾರರ ಸಮಸ್ಯೆ ಬಗ್ಗೆ ಅರಿವಿದ್ದು, ರಸ್ತೆ ಗುಂಡಿ ದುರಸ್ತಿ ಕಾರ್ಯಕ್ಕೆ ಒತ್ತು ನೀಡಲಾಗುವುದು ಎಂದು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಮೇಯರ್ ಹೇಳಿದ್ದರು. ಆದರೆ, ಇಂದಿಗೂ ಬಹುತೇಕ ಕಡೆ ರಸ್ತೆ ಗುಂಡಿ ದುರಸ್ತಿಯಾಗದ ಕಾರಣ ಜನರ ಪರದಾಟ ಮುಂದುವರಿದಿದೆ. ಈ ರಸ್ತೆ ಗುಂಡಿ ದುರಸ್ತಿ ವಿವರ ಕೂಡ ಅಧಿಕಾರಿಗಳ ಬಳಿ ಇಲ್ಲದಿರುವುದು ಗುಂಡಿ ದುರಸ್ತಿ ಬಗೆಗಿನ ಪಾಲಿಕೆ ನಿರ್ಲಕ್ಷವನ್ನು ತೋರಿಸುತ್ತದೆ.
ಅಲ್ಲದೇ, ನೂರು ದಿನ ಪೂರೈಸುವದರೊಳಗಾಗಿ ನಗರದ ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮೇಯರ್ ಭರವಸೆ ನೀಡಿದ್ದರು. ಆದರೆ, ಹಸಿ ಕಸ ಮತ್ತು ಒಣ ಕಸದ ಪ್ರತ್ಯೇಕ ಟೆಂಡರ್ ಪ್ರಕ್ರಿಯೆಯನ್ನು ಜಾರಿಗೆ ಮಾಡುವಲ್ಲಿ ಯಾವುದೇ ಪರಿಣಾಮಾತ್ಮಕ ಬದಲಾವಣೆ ಇದುವರೆಗೂ ಕಂಡು ಬಂದಿಲ್ಲ.
ಬಿಬಿಎಂಪಿ ವ್ಯಾಪ್ತಿಯ ಉದ್ದಿಮೆ, ಮಾಲ್, ಹೊಟೇಲ್, ಮಳಿಗೆಗಳು ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ಕೇಂದ್ರಗಳಲ್ಲಿ ಶೇ.60ರಷ್ಟು ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಮೇಯರ್ ಗೌತಮ್ ಕುಮಾರ್ ತಿಳಿಸಿದ್ದರು. ಆದರೆ, ಈ ವಿಷಯದಲ್ಲೂ ಸಹ ಅವರು ವಿಫಲರಾಗಿದ್ದರು. ಜತೆಗೆ ಕನ್ನಡ ನಾಮಫಲಕ ಕಡ್ಡಾಯಗೊಳಿಸದ ವಾಣಿಜ್ಯ ಮಳಿಗೆಗಳಿಗೆ ಬಿಬಿಎಂಪಿ ಅಧಿಕಾರಿಗಳು ಇಂಗ್ಲೀಷ್‌ನಲ್ಲಿ ನೋಟಿಸ್ ನೀಡಿ, ಮೇಯರ್ ಅವರಿಗೆ ಮುಜುಗರ ಉಂಟು ಮಾಡಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.