ಯುವ ಶಕ್ತಿಯ ಸಮಸ್ಯೆ

Update: 2020-01-08 18:05 GMT

ಯುವ ಶಕ್ತಿಯ ಜಾಗೃತಿ, ಸಂಘಟನೆ ವಿವಿಧ ಕಾರ್ಯಯೋಜನೆಗಳಲ್ಲಿ ಅದರ ವಿನಿಯೋಗ ಇಂದಿನ ಯುಗದ ಒಂದು ಧರ್ಮವಾಗಿದೆ. ಬ್ಲಾಕ್ ಮಟ್ಟದಲ್ಲಿ ಯುವಜನಮೇಳಗಳಲ್ಲಿ ಅಲ್ಲಲ್ಲಿಯ ಹಳ್ಳಿಪಟ್ಟಣಗಳಲ್ಲಿಯ ಯುವಕ ಸಂಘಗಳ ಹಲವು ಹಂತದ ಪಂದ್ಯಾಟಗಳಿಂದ ಪುಂಡಾಟಗಳವರೆಗಿನ ಚಟುವಟಿಕೆಯಲ್ಲಿ ಈ ಯುವ ಶಕ್ತಿಯ ಉಧ್ಯಾಪನೆ ಉಲ್ಬಣ ಪ್ರಕಟವಾಗುತ್ತಿರುತ್ತದೆ.

ಹಾಗೆ ನೋಡಿದರೆ ಒಂದು ರಾಷ್ಟ್ರದ ನವನಿರ್ಮಾಣದ ಎಲ್ಲ ಆರಂಭವೂ, ಸಾರಂಭವೂ ಯುವಜನಾಂಗದ ಶಕ್ತಿವಿಲಾಸವೇ ಆಗಿದೆ. ದೇವರ ಕಾರುಣ್ಯದ ಕತೆ ಏನೇ ಇದ್ದರೂ ಪ್ರಪಂಚ ನಡೆಯುತ್ತಿರುವುದು ಮಾನವನ ತಾರುಣ್ಯದ ಬಲದಿಂದಲೇ, ಛಲದಿಂದಲೇ, ಹಂಬಲದಿಂದಲೇ. ಇತಿಹಾಸವನ್ನು ಮತ್ತೆ ಮತ್ತೆ ಹೊಸ ಎರಕದಲ್ಲಿ ಹೊಯ್ಯುವ ಪ್ರಚಂಡ ತೋಳಬಲ ತರುಣರದ್ದೇ. ಮಹಾಯುದ್ಧಗಳ ರಣಮಾರಿಗೆ ಔತಣ ಉಣಬಡಿಸಿದ್ದು ಯುವಜನ ರಕ್ತ ಮಾಂಸದಿಂದಲೇ. ವೈಜ್ಞಾನಿಕ ಸಾಹಸ ಉತ್ತುಂಗ ಶಿಖರಗಳ ಆರೋಹಣ ಎಲ್ಲ ಪೌರುಷ- ಪುರುಷಾರ್ಥಗಳ ಆಹ್ವಾನ ಸಾಧನೆ ಯುವಜನರ ಸಂಕಲ್ಪ ಶಕ್ತಿ ಚಾರಿತ್ರವೇ ಆಗಿದೆ. ನಮ್ಮ ಸ್ವಾತಂತ್ರ ಸಾಧನೆ, ಸತ್ಯಾಗ್ರಹ, ಅಸಹಕಾರ ಆಂದೋಲನ, ಆಗಸ್ಟ್-ಚಳವಳಿ ಎಲ್ಲವೂ ಯುವಶಕ್ತಿಯ ವಿಕ್ರಮವಾಗಿತ್ತು. ಕಾಂಗ್ರೆಸ್ ಸುರತದಲ್ಲಿ ಕವಲೊಡೆದಾಗ ಹಳಬರೂ ಹರೆಯಳಿದ ವೃದ್ಧರೂ ಹಿಂದೆ ಸರಿದರು. ಆನಂತರ ಯುವ ಶಕ್ತಿಯ ಆವಾಹನೆಯಿಂದಲೇ ಆರಂಭವಾಯಿತು. ನಾಗಪುರ ಧ್ವಜ ಸತ್ಯಾಗ್ರಹ ಯುವಕರದೇ ಸಾಹಸವಾಗಿತ್ತು. ಲಾಹೋರ್ ಕಾಂಗ್ರೆಸ್‌ನ ಸಮಾಜವಾದದ ಪೂರ್ಣ ಸ್ವಾತಂತ್ರದ ಘೋಷಣೆ ಯುವಜನರ ಕಣ್ಮಣಿ ಜವಾಹರಲಾಲರದೇ ರಣಕಹಳೆಯಾಗಿತ್ತ್ತು. ಸುಭಾಶ್ಚಂದ್ರ, ಮೆಹರಲಿ, ಜಯಪ್ರಕಾಶ, ಅಚ್ಯುತ ಪಟವಧರ್ನ, ಅರುಣ ಅಸಫ್ ಅಲಿ-ಸಾವಿರ ಸಂಖ್ಯೆಯಲ್ಲಿ ಭಾರತದ ಯುವಜನ ಸ್ವಾತಂತ್ರದ ಹೋರಾಟದಲ್ಲಿ ಕಾಂಗ್ರೆಸ್‌ನ ಧ್ವಜದಡಿಗೆ ಧಾವಿಸಿ ಬಂದು ಶಿಬಿರ ತುಂಬಿದರು.

ಅದಕ್ಕೂ ಹಿಂದೆ ನಮ್ಮ ಕ್ರಾಂತಿಕಾರಿಗಳು, ಆತಂಕವಾದಿ ಜತಿನ್‌ದಾಸ್, ಭಗತ್‌ಸಿಂಗ್, ಮಾನವೇಂದ್ರನಾಥ್ ರಾವಲ್ ಪ್ರಭೃತಿಗಳು ಒಂದು ಕೈಯಲ್ಲಿ ಭಗವದ್ಗೀತೆ ಇನ್ನೊಂದು ಕೈಯಲ್ಲಿ ಬಾಂಬು ಹಿಡಿದು ನಗುನಗುತ್ತಾ ಗಲ್ಲಿಗೇರಲು ನುಗ್ಗಿ ಮುನ್ನಡೆದರು. ಅವರೆಲ್ಲರೂ ನವತಾರುಣ್ಯದ ಮೊಹರುಗಳೇ ಆಗಿದ್ದರು. ‘‘ನವ ಜವಾನೋ ಹೋಶಿಯಾರ’’ ಎಂಬುದು ನಮ್ಮ ಸ್ವಾತಂತ್ರ ಆಂದೋಲನದ ದುಂದುಭಿ ಘೋಷವಾಗಿತ್ತು.

ಅಂದಿನಿಂದ ಇಂದಿನವರೆಗೂ ಎಂದೆಂದಿಗೂ ರಾಷ್ಟ್ರದ ನವನಿರ್ಮಾಣ, ಅಭಿವೃದ್ಧಿ ವಿಕಾಸ, ನಿರಂತರದ ಪ್ರಗತಿಯಲ್ಲಿ ನಡೆಯುವುದು, ನೆಲೆ ನಿಂತಿರುವುದು ಯುವಜನರ ಹೃದಯದ ಓಟದ ಎಡೆಬಿಡದ ದಿಕ್ಕಿನಲ್ಲಿ. ಒಂದು ರಾಷ್ಟ್ರ ಜೀವಂತವಿರುವುದೇ ಅದರ ತಾರುಣ್ಯದಲ್ಲಿ. ತಾರುಣ್ಯ, ಉತ್ಸಾಹ, ಉತ್ತೇಜನ, ಉದ್ದೇಶಗಳ ಉಗಮಸ್ಥಾನ ಯುವಜನ ಶಕ್ತಿಯ ಸಾಮರ್ಥ್ಯವೂ, ದೌರ್ಬಲ್ಯವೂ ಇದೇ ಉಗಮದಲ್ಲಿವೆ. ಅತಿರೇಕಗಳು ಅವಿವೇಕಗಳು ಅದರ ಈ ಉದ್ದೇಶ-ಆವೇಶಗಳ ಅನಿವಾರ್ಯ ನಿಯತಿ. ಈ ಶಕ್ತಿ ಪ್ರಚಂಡ ತಡಸಲಿನಂತೆ ಅದನ್ನು ಶಕ್ತಿಗೆ ಒಳಪಡಿಸಿ ನೋಡಿದಾಗಲೇ ಅದರಿಂದ ಯೋಗ್ಯವಾದ, ಯಶಸ್ವಿಯಾದ ಕಾರ್ಯವು ಸಾಧ್ಯ.

ಈ ಶಿಸ್ತು, ಈ ಸಂಯಮ ಹೇಗೆ ಬರುವುದು? ಏಕೆ ಅವಶ್ಯ? ಇದಕ್ಕೆ ನಾವು ಮೊದಲಿಗೆ ಈ ಯುವಶಕ್ತಿಯ ಸ್ವರೂಪವನ್ನು ಪರೀಕ್ಷಿಸಬೇಕು. ಇಂದು ದೇಶದ ಅಭಿವೃದ್ಧಿಯ ಎಲ್ಲ ಅಂಗಗಳಲ್ಲಿಯೂ, ರಂಗಗಳಲ್ಲಿಯೂ ಕ್ರಿಯಾತ್ಮಕವಾಗಿ ಎದ್ದು ಕಾಣಬೇಕಾದದ್ದೇ ಈ ಯುವಶಕ್ತಿಯೇ. ಬೇಸಾಯವೇನು, ಚಿಕ್ಕ ಉದ್ದಿಮೆಯೇನು, ಕುಟುಂಬ ಯೋಜನೆಯೇನು, ಮಹಿಳಾ ಕಲ್ಯಾಣವೇನು, ಸಾಕ್ಷರತಾ ಪ್ರಸಾರವೇನು, ಭ್ರಷ್ಟಾಚಾರ ನಿರ್ಮೂಲನವೇನು-ಇವೆಲ್ಲ ರಂಗಗಳಲ್ಲಿ ಕಾರ್ಯಕಾರಿ ಆಗುವ ಸಮಾಜದ ಅಂಗವು ಯುವಕ ವೃಂದವೇ ಸರಿ. ಮಕ್ಕಳೂ-ಮುದುಕರೂ ಇಲ್ಲಿ ಸಲ್ಲುವುದಿಲ್ಲ. ಅಂದರೆ ರಾಷ್ಟ್ರದ ಉತ್ಥಾನ ಮತ್ತು ಪ್ರಗತಿಯ ಸಕಲ ಸಾಹಸ ಸಾಧನೆಗಳಿಗೂ ಚಾಲನೆ ಕೊಡುವ ವರ್ಗ ಯುವಕರದ್ದೇ. ಸೈನಿಕ, ನಾವಿಕ, ನಾಗರಿಕ ಯಾವ ಕ್ಷೇತ್ರದಲ್ಲಿಯೂ ಈ ಯುವಕರಿಗೇ ಆಹ್ವಾನ.

ಆದರೆ ನಿಜವಾಗಿ ನೋಡಿದರೆ ಯುವಕರೆಂಬುದು ಒಂದು ವರ್ಗವೇ? ಅಲ್ಲ, ಅದೊಂದು ಅವಸ್ಥೆ. ಜೀವನದ ಕೆಲವೇ ವರ್ಷಗಳ ಒಂದು ಅವಧಿಯ ಭಾವಾವಸ್ಥೆ, ವ್ಯಕ್ತಿ-ವ್ಯಕ್ತಿಯೂ ಈ ಅವಸ್ಥೆಯೊಳಗಿಂದ ಕೆಲ ಕಾಲ ಹಾದು ಹೋಗುತ್ತಾನೆ. ಕೆಲಸಗಾರ, ಕೂಲಿಕಾರ, ಬಂಡವಾಳಗಾರ, ಬುದ್ಧಿಜೀವಿಗಳಂತೆ ಯುವಕರೆಂಬುವುದೊಂದು ವಿಶಿಷ್ಟ ಹಿತ ಸಂಬಂಧಗಳ ಸ್ಥಾಯಿಯಾದ ಸಾಮಾಜಿಕ ವರ್ಗವಲ್ಲ. ಇಲ್ಲಿದೆ ಈ ಯುವಾವವಸ್ಥೆಯ ದೌರ್ಬಲ್ಯ.

ಈ ಯುವಜನರೆಂಬ ಅವಸ್ಥೆಯಲ್ಲಿ ಬೇರೆ ಬೇರೆ ವರ್ಗದವರು ಸೇರುತ್ತಾರೆ. ಯುವಕರು ಒಕ್ಕಲಾಗಬಹುದು, ಒಡೆಯನಾಗಬಹುದು, ಧನಿಕನಾಗಬಹುದು ಕೆಲಸಗಾರನಾಗಬಹುದು, ಕೆಲಸಕ್ಕೆ ಹಚ್ಚುವ ಮಾಲಕನಾಗಬಹುದು. ಆದರೆ ಹೀಗೆ ವಿಭಿನ್ನ ಹಾಗೂ ಪರಸ್ಪರ ವಿರುದ್ಧ ಹಿತಾಸಕ್ತ ಸ್ವಾರ್ಥ ಸತ್ವಗಳುಳ್ಳ ಈ ಯುವಜನರಲ್ಲಿ ನಿಜವಾದ ಒಗ್ಗಟ್ಟಿನಿಂದ ಒಮ್ಮತದಿಂದ ಬಹುಪಾಲು ದುಡಿಯಬಹುದೇ, ಹಾಗೆ ಅವರು ಭಾವೈಕ್ಯದಿಂದ ದೀರ್ಘ ಕಾಲ ಕೂಡಿ ನಡೆಯುವುದಾದರೆ ಆತನಕ ಅವರು ಯುವಕರಾಗಿ ಉಳಿಯಬಹುದೇ? 20-30 ರವರೆಗೆ ಯುವಾವಸ್ಥೆಯೆಂದು ಹಿಡಿದರೆ ಈ ಒಂದೂವರೆ ದಶಕದಲ್ಲಿ ಈ ಭಾವಾವೇಶದ ಸಂಕೀರ್ಣ ಸ್ವರೂಪದ ತಂಡವು ಯಾವ ಶಾಶ್ವತ ಶ್ರೇಯಸ್ಸನ್ನು ಸಾಧಿಸಬಹುದು?

ಈ ಯುವಕರಲ್ಲಿ ಬುದ್ಧಿವಂತ ಭಾವನೆಯ ಉಕ್ಕು ರಭಸ ಹೆಚ್ಚು. ಅದಕ್ಕೆ ಭವ್ಯ ದಿವ್ಯ ಆಕರ್ಷಣೆ ಹೆಚ್ಚು. ಅಸಾಧ್ಯದ ಮೋಹ ಹೆಚ್ಚು. ಆದರ್ಶದತ್ತ ತುಡಿತ ಅದಕ್ಕಾಗಿ. ತ್ಯಾಗ, ಬಲಿದಾನ, ಅವಿಶ್ರಾಂತ ಪರಿಶ್ರಮದ ಮಿಡಿತ ಹೆಚ್ಚು. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ದೇಶಾದ್ಯಂತ ಯೂತ್ ಲೀಗ್ ಕೆಲಸ ಮಾಡುತ್ತಿದ್ದವು. ಹಾಗೆಯೇ ಹಿಂದೂಸ್ಥಾನಿ ಸೇವಾದಳ, ರಾಷ್ಟ್ರ ಸೇವಾದಳಗಳು ಸಮಾಂತರವಾಗಿ ದುಡಿಯುತ್ತಿದ್ದವು. ಅವೆಲ್ಲವೂ ಒಂದೇ ಮನೋರಥಕ್ಕೆ ಹೂಡಿದ ಶಕ್ತಿಗಳಾಗಿದ್ದವು. ಈ ಯುವ ಸಂಘಟನೆಗಳ ಸಕಲ ಸೇವೆ, ಸಾಧನೆ ಸ್ವಾತಂತ್ರ್ಯ ಪ್ರಾಪ್ತಿಗಾಗಿ ರಾಷ್ಟ್ರೀಯತೆಯ ವಿಕಾಸಕ್ಕಾಗಿ ಇತ್ತು.

ಆದರೆ ಅಂತಹ ಒಂದು ಭವ್ಯವಾದ ಸಾರ್ವಭೌಮವಾದ ಆದರ್ಶದ ಕೆರೆಯ ಮುಂದೆ ಈ ಯುವಜನರ ರಕ್ತಗತವಾದ, ಜನ್ಮ ಸಿದ್ಧವಾದ, ಎಲ್ಲ ವಿಭಿನ್ನ ವಿರುದ್ಧ ವರ್ಗ ನಿಷ್ಠ ಹಿತಾಸಕ್ತಿಗಳ ಸೆಳೆತ ತೊಡಕು ಮರೆಯಾಗುವುದು, ಮರೆತು ಹೋಗುವುದು. ಶಾಲೆ ಕಾಲೇಜುಗಳಲ್ಲಿ ಕಲಿಯುವ ಯುವಜನಕ್ಕಾಗಿ ಎ.ಸಿ.ಸಿ., ಎನ್.ಸಿ.ಸಿ., ಸ್ಕೌಟ್, ಗೈಡ್ ಮುಂತಾದ ವೀರ ವೃತ್ತಿಗೆ, ಶಿಸ್ತಿಗೆ ಪೋಷಕವಾದ ಸಂಘಟನೆಗಳಿವೆ. ಆದರೆ ಅವು ಹೆಚ್ಚಾಗಿ ಯಾಂತ್ರಿಕವಾಗಿ ಒಣ ಆಡಳಿತದ ಕ್ರಮಬದ್ಧತೆಗೆ, ನಿಷ್ಠುರತೆಗೆ ಬಲಿಯಾಗಿ ಯುವಜನರ ಭಾವೋತ್ಸಾಹಕ್ಕೆ ಪ್ರೇರಣೆ ಕೊಡುವುದು ಕಂಡುಬರುವುದಿಲ್ಲ.

ಇನ್ನು ಹೊರಗಿನ ಖಾಸಗಿ ಸೈನಿಕ ಶಿಸ್ತಿನ ಮೂಲಗಳು, ಸಂಘಗಳು ಶಿವಸೇನೆ, ಭೀಮಸೇನೆ, ಆರೆಸ್ಸೆಸ್‌ಗಳಂತೆ ಬಲಿಷ್ಠವಾದದ್ದೂ ದೇಶಕ್ಕೆ ಘಾತಕವೇ ಆಗಿದೆ. ಆರಂಭದಲ್ಲಿಯೇ ಅವು ಯುವಜನರಲ್ಲಿ ಧೃಡನಿಷ್ಠೆಯನ್ನು ಹುಟ್ಟಿಸುತ್ತವೆ ಮತ್ತು ಕೊನೆಯಲ್ಲಿ ಅವರೆದುರು ಅಸಾಧ್ಯವಾದ, ಅಸತ್ಯವಾದ, ಸಂಕುಚಿತವಾದ ಆದರ್ಶಗಳನ್ನು ಇಟ್ಟು ಅವರನ್ನು ಕೆಲವೊಂದು ಕೋಮುವಾರು ಮತಪಂಥಗಳ ರಾಗ ದ್ವೇಷದ ಅಡ್ಡದಾರಿಗೆ ಒಯ್ಯಲು ಕಾರಣವಾಗುತ್ತವೆ.

ಇಂತಹ ಇಕ್ಕಟ್ಟಿನಲ್ಲಿ ಸಿಲುಕಿದ ನಮ್ಮ ಯುವ ಜನರು ಏನು ಮಾಡಬೇಕು? ಅವರ ಸ್ವಂತದ ವರ್ಗನಿಷ್ಠೆ, ಆಸಕ್ತಿ ಆಕರ್ಷಣೆಗಳನ್ನು ಮಾಡುವ, ವಿಶಾಲವಾದ ಸಮಗ್ರ ಜನಾಂಗದ ಹಿತ ಕಲ್ಯಾಣದ ಅಭಿವೃದ್ಧಿ ಪ್ರಗತಿಯ ಒಂದು ಸಾರ್ವಭೌಮ ಆದರ್ಶವನ್ನು ಅವರ ಕಣ್ಣು ಅರಳಿಸುವಂತೆ, ಭಾವ ಕೆರಳಿಸುವಂತೆ ಉತ್ಕಟವಾಗಿ, ಜೀವಂತವಾಗಿ ಅವರನ್ನು ಆಹ್ವಾನಿಸಬೇಕು, ಸ್ವರಾಜ್ಯವನ್ನು ಸುರಾಜ್ಯವನ್ನಾಗಿ ಮಾರ್ಪಡಿಸುವ ಆದರ್ಶ ಅಂತ ಒಂದು ನಿತ್ಯದ ಆಕರ್ಷಣೆಯಾಗಬೇಕು. ಔದ್ಯೋಗೀಕರಣ, ಅದರಿಂದ ಬರುವ ಆಧುನಿಕತೆ, ಅದಕ್ಕೆ ಪೋಷಕವಾಗುವ ಸತ್ಯಶೋಧಕ ವೈಜ್ಞಾನಿಕ ಪ್ರವೃತ್ತಿ ಯುವಜನರಲ್ಲಿ ಹಬ್ಬಬೇಕು.

ಇಂದು ಬಡತನದ, ವಿರುದ್ಧ ಅಜ್ಞಾನದ ವಿರುದ್ಧ, ರೂಢ, ಮೂಢನಂಬಿಕೆಗಳ ವಿರುದ್ಧ ಯುವಜನರು ಹೋರಾಡುವಂತೆ ಆಗಬೇಕು. ಅದಕ್ಕೆ ತಕ್ಕ ಧುರೀಣತ್ವ ಧೋರಣೆ ಪ್ರಭಾವಿಯಾಗಬೇಕು.

ತರುಣರ ತತ್ವ ಮೂಲಗಾಮಿತ್ವ, ತರುಣನೆಂದರೆ ತರುವಿನ ತಕ್ಷಣ ಉಳ್ಳವನು. ತರುವಿನ ಲಕ್ಷಣ ಸತತವಾದ ವಿಕಾಸ ಬೆಳವಣಿಗೆ. ಯಾರ ಮನಸ್ಸು ಬುದ್ಧಿ ವಿಚಾರ ಚಿಂತನೆ, ಯಾವಾಗಲೂ ಬೆಳೆಯುತ್ತಲೇ ಇರುವುದೋ ಅವನೇ ನಿಜವಾದ ಅರ್ಥದಲ್ಲಿ ತರುಣ. ಈ ಬೆಳವಣಿಗೆ ತಡೆದಲ್ಲಿ ತಾರುಣ್ಯವೂ ಮುಗಿಯಿತು. ನಮ್ಮ ತರುಣರು ಇಂದು ಸಮಾಜವನ್ನು ಕಾಡುತ್ತಿರುವ ಪ್ರಶ್ನೆಗಳನ್ನು ಅಮೂಲವಾಗಿ ಕೆದಕಿ ತಿಳಿದುಕೊಳ್ಳಬೇಕು. ಅವರು ಧ್ಯೇಯವಾದಿಗಳಾಗಬೇಕು. ಈ ಧ್ಯೇಯ ಜಾತಿ, ಮತ, ಪಂಥಗಳನ್ನು ಮೀರಿ ಮಾನವೀಯ ಸಮಾನತೆಗಾಗಿ ಸಾರುವ, ಸಾಧಿಸುವ ಸಾಧನೆ ಆಗಬೇಕು. ವ್ಯಕ್ತಿಗಿಂತ, ತತ್ವ ಪ್ರತಿಷ್ಠೆಗಿಂತ, ನ್ಯಾಯ ಹಕ್ಕಿಗಿಂತ ಹೊಣೆಗಾರಿಕೆಗಳನ್ನು ಹಿರಿದಾಗಿ ಮಿಗಿಲಾಗಿ ಕಾಣುವ ಪ್ರಜ್ಞೆ ಮೂಡಿ ಬಂದಾಗಲೇ ಯುವಶಕ್ತಿಗೆ ಮುಕ್ತಿ.

(ಗೌರೀಶ ಕಾಯ್ಕಿಣಿಯವರು 1976ರಲ್ಲಿ ಬರೆದ ಲೇಖನ)

Writer - ಗೌರೀಶ ಕಾಯ್ಕಿಣಿ

contributor

Editor - ಗೌರೀಶ ಕಾಯ್ಕಿಣಿ

contributor

Similar News