ಇದು ಸಂವಿಧಾನ ರಕ್ಷಣೆಗಾಗಿ ಭಾರತೀಯರ ಹೋರಾಟ: ಯೋಗೇಂದ್ರ ಯಾದವ್

Update: 2020-01-09 05:17 GMT
PHOTO: twitter/yogendrayadav

ಜನವರಿ 5ರಂದು ರವಿವಾರ ದಿಲ್ಲಿಯ ಜೆಎನ್‌ಯು ಕ್ಯಾಂಪಸ್‌ನಲ್ಲಿ ಅಲ್ಲಿನ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಗುರಿಯಾಗಿಸಿ ಭೀಕರ, ಸಂಘಟಿತ ಹಲ್ಲೆಯೊಂದು ನಡೆದಿತ್ತು. ಎಬಿವಿಪಿ ಮತ್ತವರ ಪರಿವಾರದವರು ನೇಮಿಸಿದ ಬಾಡಿಗೆ ಗೂಂಡಾಗಳ ಸಶಸ್ತ್ರ ದಂಡೊಂದು ಕೇಂದ್ರ ಗೃಹ ಇಲಾಖೆಯಡಿ ಕೆಲಸ ಮಾಡುವ ಸ್ಥಳೀಯ ಪೊಲೀಸರ, ಉಪಕುಲಪತಿಯವರ ಮತ್ತು ವಿವಿ ಆಡಳಿತದ ವ್ಯಕ್ತ ಆಶೀರ್ವಾದದೊಂದಿಗೆ ಹಲ್ಲೆ ನಡೆಸಿತ್ತು. ಇಂದಿನ ವ್ಯವಸ್ಥೆಗೆ ತಕ್ಕಂತೆ, ಹಲ್ಲೆಕೋರರ ಪೈಕಿ ಒಬ್ಬರನ್ನೂ ಬಂಧಿಸದ ಪೊಲೀಸರು ಹಲ್ಲೆಗೆ ಬಲಿಯಾಗಿ ಗಾಯಗೊಂಡ ಹಲವು ಮುಗ್ಧ ವಿದ್ಯಾರ್ಥಿಗಳ ವಿರುದ್ಧ ಕ್ರಿಮಿನಲ್ ಆರೋಪಗಳನ್ನು ದಾಖಲಿಸಿದ್ದರು! ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಲು, ಮರುದಿನವೇ (ಸೋಮವಾರ) ನಾನು ಕ್ಯಾಂಪಸ್ ತಲುಪಿದ್ದೆ. ಅಲ್ಲಿ ಭಾರೀ ಬಿಗಿ ಬಂದೋಬಸ್ತಿನ ಜೊತೆ ತೀವ್ರ ಆಕ್ರೋಶ ಮತ್ತು ಸಂದೇಹದ ವಾತಾವರಣವಿತ್ತು. ಹೆಚ್ಚಿನವರು ಮಾತನಾಡುವ ಮೂಡ್‌ನಲ್ಲಿರಲಿಲ್ಲ. ಆದ್ದರಿಂದ ಮಂಗಳವಾರ (ಜನವರಿ 7) ನಾನು ಮತ್ತೆ ಕ್ಯಾಂಪಸ್ ತಲುಪಿದೆ. 

ಆ ದಿನ ಅಲ್ಲಿ ಹಲ್ಲೆ ನಡೆದ ಸಾಬರ್ಮತಿ ಹಾಸ್ಟೆಲ್ ಪಕ್ಕದ ಟಿ ಜಂಕ್ಷನ್‌ನಲ್ಲಿ ಸಂತ್ರಸ್ತ ವಿದ್ಯಾರ್ಥಿಗಳ ಕಡೆಯಿಂದ ಸಂಜೆ 4 ಗಂಟೆಗೆ ಒಂದು ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿತ್ತು. ದೇಶದ ವಿವಿಧ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳು ಅಲ್ಲಿ ಮೊದಲೇ ಜಮಾಯಿಸಿದ್ದರು. ಅಲ್ಲಿ ಬಂದು ವಿದ್ಯಾರ್ಥಿಗಳ ಜೊತೆ ಸೇರಿಕೊಂಡವರಲ್ಲಿ ಡಿ.ರಾಜಾ, ಸೀತಾರಾಮ್ ಯೆಚೂರಿ (ಇಬ್ಬರೂ ಮಾಜಿ ಸಂಸದರು), ಯೋಗಿಂದರ್ ಯಾದವ್ (ಅಧ್ಯಕ್ಷರು ಸ್ವರಾಜ್ ಅಭಿಯಾನ್), ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ಮುಂತಾದ ಹಲವು ಪ್ರಮುಖರಿದ್ದರು.

ಆ ಪೈಕಿ ಹಲವು ಜನಪರ ಚಳವಳಿಗಳ ನಾಯಕ ಯೋಗೇಂದ್ರ ಯಾದವ್‌ರನ್ನು ಪಕ್ಕಕ್ಕೆ ಕರೆದು ಮಾತಾಡಿದಾಗ ಕೆಲವು ಮಹತ್ವದ ವಿಷಯಗಳ, ಮುಖ್ಯವಾಗಿ NRC, CAA ಮತ್ತು NPR ಗಳ ವಿರುದ್ಧ ಸದ್ಯ ನಡೆಯುತ್ತಿರುವ ದೇಶವ್ಯಾಪಿ ಪ್ರತಿಭಟನೆಗಳ ಕುರಿತಂತೆ ಅವರ ನಿಲುವನ್ನು ಅರಿಯುವ ಅವಕಾಶವೊಂದು ಸಿಕ್ಕಿತು.

► ಅವರ ಜೊತೆಗಿನ ಮಾತುಕತೆ ಇಲ್ಲಿದೆ 

ಸರಕಾರದ ವಿವಾದಾಸ್ಪದ ಕ್ರಮಗಳನ್ನು ವಿರೋಧಿಸಿ ಇದೀಗ ನಡೆಯುತ್ತಿರುವ ಪ್ರತಿಭಟನೆಗಳ ಸರಣಿ ಇದೇ ಆವೇಶವನ್ನು ದೀರ್ಘಕಾಲ ಉಳಿಸಿಕೊಂಡೀತೇ?

ಇಂದು ಕಾಣಿಸುತ್ತಿರುವ ಉತ್ಸಾಹ ಮತ್ತು ಆವೇಶವು ಖಂಡಿತವಾಗಿಯೂ ಅಲ್ಪಕಾಲದಲ್ಲಿ ತಣಿದುಹೋಗುವ ಸ್ವರೂಪದ್ದಲ್ಲ. ನ್ಯಾಯಕ್ಕಾಗಿ ಹಾಗೂ ಸಾಂವಿಧಾನಿಕ ಹಕ್ಕುಗಳ ಸಂರಕ್ಷಣೆಗಾಗಿ ಹೋರಾಡುತ್ತಿರುವ ಜನತೆಯ ಸ್ಫೂರ್ತಿಯು ಮುಂದಿನ ದಿನಗಳಲ್ಲಿ ಇನ್ನಷ್ಟು ಬಲ ಪಡೆಯಲಿದೆ. ಸಂವಿಧಾನವನ್ನು ದುರ್ಬಲಗೊಳಿಸಲು ಫ್ಯಾಶಿಸ್ಟ್ ಶಕ್ತಿಗಳು ನಡೆಸುತ್ತಿರುವ ಹುನ್ನಾರಗಳನ್ನು ಸೋಲಿಸಲು ಮತ್ತು ಸಂವಿಧಾನವನ್ನು ಸಂರಕ್ಷಿಸಲು ಹೋರಾಡುತ್ತಿರು ವವರು ಎಲ್ಲ ಅವಕಾಶಗಳನ್ನು ಬಳಸಿಕೊಂಡು, ದೇಶದ ಮುಂದಿರುವ ಕಠಿಣ ಸವಾಲುಗಳ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಲು ಶ್ರಮಿಸಲಿದ್ದಾರೆ.

ಉದಾಹರಣೆಗೆ, ಜನವರಿ 12 ರಂದು ವಿವೇಕಾನಂದ ಜಯಂತಿಯನ್ನು ಆಚರಿಸಲಿರುವ ದೇಶವಾಸಿಗಳಿಗೆ ಸ್ವಾಮಿ ವಿವೇಕಾನಂದರು 1893ರ ತಮ್ಮ ಚಿಕಾಗೋ ಭಾಷಣದಲ್ಲಿ ಹೇಳಿದ್ದ ಐತಿಹಾಸಿಕ ಮಾತೊಂದನ್ನು ದೇಶಕ್ಕೆ ನೆನಪಿಸಲಾಗುವುದು. ನಾನು ಎಲ್ಲ ಧರ್ಮಗಳ ಮತ್ತು ಎಲ್ಲ ದೇಶಗಳ ಪೀಡಿತ ಜನರಿಗೆ ಆಶ್ರಯ ನೀಡಿದ ದೇಶದವನು ಎಂಬ ಬಗ್ಗೆ ನನಗೆ ಅಭಿಮಾನವಿದೆ ಎಂದು ಅವರು ಹೇಳಿದ್ದರು. ಇಂದಿನ ಸಿಎಎ ಕುರಿತಾದ ರಾಷ್ಟ್ರೀಯ ಸಂವಾದದ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆಯು, ನಮ್ಮನ್ನು ಆಳುತ್ತಿರುವ ಸರಕಾರದ ಧೋರಣೆಗಳು ಯಾವ ರೀತಿ ಆ ಮಹಾನ್ ಸಂತನ ಧೋರಣೆಗಳಿಗೆ ತೀರಾ ತದ್ವಿರುದ್ಧವಾಗಿವೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಸಲಿದೆ.

ಜನವರಿ 17ರ ದಿನವನ್ನು ದೇಶವು ರೋಹಿತ್ ವೇಮುಲಾ ದಿನವಾಗಿ ಆಚರಿಸಲಿದೆ. ಆ ದಿನ ದೇಶದ ನಾಗರಿಕರಿಗೆ ಮತ್ತು ವಿಶೇಷವಾಗಿ ಇಲ್ಲಿ ಮೂಲೆಗುಂಪಾಗಿಸಲಾಗಿರುವ ಜನವರ್ಗಗಳಿಗೆ ಸರಕಾರದ ಎನ್‌ಆರ್‌ಸಿ ಮತ್ತಿತರ ಕ್ರಮಗಳು ನೇರವಾಗಿ ಆ ವರ್ಗಗಳನ್ನು ಬಲಿತೆಗೆದುಕೊಳ್ಳಲಿವೆ ಎಂಬಂಶವನ್ನು ಮನದಟ್ಟು ಮಾಡಿಸುವ ಪ್ರಯತ್ನ ನಡೆಯಲಿದೆ. ಮತ್ತೆ ಜನವರಿ 23ರಂದು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಂಪೂರ್ಣ ಹಾಗೂ ಪರಿಪೂರ್ಣ ಸ್ವಾತಂತ್ರ್ಯದ ಪ್ರತಿಪಾದಕ ಸುಭಾಶ್ಚಂದ್ರ ಬೋಸ್ ಅವರ ಜನ್ಮ ದಿನವನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುವುದು. ಅವರ ಬದುಕು,ಆದರ್ಶ ಮತ್ತು ತ್ಯಾಗದ ನೆನಪುಗಳು ದೇಶದ ಜನರಲ್ಲಿ, ತಮ್ಮ ಸ್ವಾತಂತ್ರ್ಯ ಮತ್ತು ಹಕ್ಕುಗಳಿಗೆ ಫ್ಯಾಶಿಸ್ಟ್ ವಲಯಗಳು ಒಡ್ಡುತ್ತಿರುವ ಬೆದರಿಕೆಗಳ ವಿರುದ್ಧ ಎಚ್ಚೆತ್ತು ಹೋರಾಡುವುದಕ್ಕೆ ಹೊಸ ಹುರುಪನ್ನು ಒದಗಿಸಲಿವೆ.

ಜನವರಿ 26 ಗಣರಾಜ್ಯೋತ್ಸವ ದಿನ. ನಾಡಿನ ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯಗಳ ಸಂರಕ್ಷಣೆಗೆ ಬದ್ಧರಾಗಿರುವ ಎಲ್ಲ ನಾಗರಿಕರು ಅಂದು ಸಾಂವಿಧಾನಿಕ ಆಶಯಗಳ ಶತ್ರುಗಳ ಕಣ್ತೆರೆಸಲಿಕ್ಕಾಗಿ ದೇಶದೆಲ್ಲೆಡೆ ಮಧ್ಯರಾತ್ರಿ ಧ್ವಜಾರೋಹಣ ನಡೆಸಲಿದ್ದಾರೆ ಮತ್ತು ದೇಶದ ಮೂಲೆ ಮೂಲೆಗಳಲ್ಲಿ ಸಂವಿಧಾನದ ಮುನ್ನುಡಿಯನ್ನು ಸಾಮೂಹಿಕವಾಗಿ ಮತ್ತು ಜೋರಾಗಿ ಓದುವ ಮೂಲಕ ಸಾರ್ವತ್ರಿಕ ಸ್ತರದಲ್ಲಿ ಜನಜಾಗೃತಿ ಬೆಳೆಸಲಿದ್ದಾರೆ.

ಜನವರಿ 30 ರಂದು ದೇಶದ ಉದ್ದಗಲಗಳಲ್ಲಿ ಅಖಿಲ ಭಾರತ ಮಾನವ ಸರಪಣಿಯನ್ನು ಆಯೋಜಿಸಲಾಗುವುದು. ಮೋದಿ- ಶಾ ಸರಕಾರದ ಸರ್ವಾಧಿಕಾರಿ ಹಾಗೂ ವಿಭಜನವಾದಿ ನೀತಿಗಳನ್ನು ವಿರೋಧಿಸುತ್ತಿರುವ ಎಲ್ಲ ವ್ಯಕ್ತಿ ಮತ್ತು ಸಂಘಟನೆಗಳು ಈ ಕಾರ್ಯದಲ್ಲಿ ಕೈ ಜೋಡಿಸಲಿದ್ದಾರೆ. ಈ ಸಂದರ್ಭದಲ್ಲಿ ವಿಶೇಷವಾಗಿ ಎನ್‌ಆರ್‌ಸಿ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು.

ಇದೀಗ ದೇಶದಲ್ಲಿ NRC, CAA ಮತ್ತು NPRಗಳ ವಿರುದ್ಧ ಅಲ್ಲಲ್ಲಿ ಪ್ರತ್ಯ ಪ್ರತ್ಯೇಕವಾಗಿ ಹೋರಾಟ ನಿರತರಾಗಿರುವ ವಿಭಿನ್ನ ಹಿನ್ನೆಲೆಯ ವಿವಿಧ ಗುಂಪು ಪಂಗಡಗಳನ್ನು ಒಂದುಗೂಡಿಸುವ ಯೋಜನೆಯೇನಾದರೂ ಇದೆಯೇ?

ಸದ್ಯ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನಾ ಚಳವಳಿಗಳಲ್ಲಿ ಪ್ರಮುಖವಾಗಿ ಮೂರು ಧಾರೆಗಳು ಎದ್ದು ಕಾಣುತ್ತಿವೆ. ಮೊದಲನೆಯದು ಅಸಾಮಿನಲ್ಲಿ ನಡೆಯುತ್ತಿರುವ NRC ವಿರೋಧಿ ಚಳವಳಿ. ಅದರಲ್ಲಿ ಆ ರಾಜ್ಯದ ಎಲ್ಲ ಜಾತಿ ಧರ್ಮಗಳ ಜನರು ಭಾಗವಹಿಸುತ್ತಿದ್ದಾರೆ. ಎರಡನೆಯದು CAA ಕಾಯ್ದೆಯಲ್ಲಿನ ವಿಭಜಕ ಅಂಶದ ವಿರುದ್ಧ ಆಕ್ರೋಶಿತರಾಗಿ ಮತ್ತು ತಮ್ಮ ಪೌರತ್ವಕ್ಕೆ ಅಪಾಯವಿದೆ ಎಂಬ ಆತಂಕದಿಂದಾಗಿ ರಸ್ತೆಗಿಳಿದಿರುವ ಮುಸ್ಲಿಮ್ ಸಮುದಾಯದವರ ಪ್ರತಿಭಟನೆ. ಮೂರನೆಯದು, ಭಾರತ ಎಂಬ ಮೂಲ ಕಲ್ಪನೆಯನ್ನೇ ಹೊಸಕಿ ಹಾಕಲು ಹೊರಟಿರುವ ಸರಕಾರದ ಸಂಚಿನ ವಿರುದ್ಧ ಜಾಗೃತರಾಗಿರುವ ಈ ದೇಶದ ಉದಾರ ಚಿಂತನೆಯ ವಿದ್ಯಾರ್ಥಿ ಮತ್ತು ಯುವ ಸಮುದಾಯ. ಸರಕಾರವು ಈ ಎಲ್ಲ ಚಳವಳಿಗಳನ್ನು ಕೇವಲ ಮುಸ್ಲಿಮರ ಚಳವಳಿ ಎಂದು ಚಿತ್ರಿಸಲು ಎಲ್ಲ ಬಗೆಯ ಆಟಗಳನ್ನು ಆಡುತ್ತಿದೆ.

ಆದರೆ ನಾವು ಸರಕಾರದ ಈ ಷಡ್ಯಂತ್ರವನ್ನು ಬಯಲಿಗೆಳೆಯಲಿದ್ದೇವೆ. ಇದು ಯಾವುದೇ ಒಂದು ಸಮುದಾಯದ ಸಮಸ್ಯೆ ಅಲ್ಲ, ಇದು ನಾಡಿನ ಎಲ್ಲ ನಾಗರಿಕರ ಹಿತಾಸಕ್ತಿಗಳನ್ನು ಅಪಾಯಕ್ಕೊಡ್ಡಿರುವ ಸಮಸ್ಯೆ. ಆದ್ದರಿಂದ ಇದು ಎಲ್ಲ ನಾಗರಿಕರು ಜೊತೆಗೂಡಿ ನಡೆಸಬೇಕಾದ ಸಂವಿಧಾನ ಸಂರಕ್ಷಣೆಯ ಹೋರಾಟ. ಬಹುಬೇಗನೆ ಈ ಪೈಕಿ ಮೂರನೆಯ ಧಾರೆಯು ಮತ್ತಷ್ಟು ಬಲಿಷ್ಠವಾಗಲಿದೆ ಮತ್ತು ಕ್ರಮೇಣ ಪ್ರಸ್ತುತ ಮೂರೂ ಧಾರೆಗಳು ಇದನ್ನು ಮನಗಂಡು ಒಂದೇ ಧಾರೆಯಾಗಿ ಮಾರ್ಪಡುತ್ತವೆ ಎಂಬ ವಿಶ್ವಾಸ ನನಗಿದೆ.

ಈ ಆಂದೋಲನದ ಧ್ಯೇಯ ಮತ್ತು ಸ್ವರೂಪವನ್ನು ದೇಶದ ಜನಸಾಮಾನ್ಯನಿಗೆ ನೀವು ಹೇಗೆ ವಿವರಿಸುತ್ತೀರಿ?

ಸರಳವಾಗಿ ಹೇಳಬೇಕೆಂದರೆ ಇದು ‘ಭಾರತ್ ಜೋಡೋ ಆಂದೋಲನ ( ಭಾರತವನ್ನು ಒಂದುಗೂಡಿಸುವ ಆಂದೋಲನ)’. ಕಳೆದುಹೋಗುತ್ತಿರುವ ನಮ್ಮ ಗಣರಾಜ್ಯವನ್ನು ಮತ್ತೆ ಪಡೆಯುವುದು ನಮ್ಮ ಗುರಿ. ದೇಶದ ಜನಸಾಮಾನ್ಯರು ಈಗಿರುವ ಪರಿಸ್ಥಿತಿಯ ಗಾಂಭೀರ್ಯವನ್ನು ತಿಳಿದುಕೊಳ್ಳುವಷ್ಟು ಪ್ರಬುದ್ಧರಾಗಿದ್ದಾರೆ. ನಾವು ಅತ್ಯಂತ ಸರಳ, ಮಾಹಿತಿಯುಕ್ತ ಹಾಗೂ ಸ್ಫೂರ್ತಿದಾಯಕ ಸಂದೇಶಗಳೊಂದಿಗೆ ಜನರ ಬಳಿ ಹೋಗುತ್ತೇವೆ. ಉದಾ : ನಮ್ಮ ಈ ಘೋಷಣೆ ಬಹಳ ವೈರಲ್ ಆಗುತ್ತಿದೆ : ಏಕ್ ಹಾಥ್ ಮೇ ತಿರಂಗಾ - ದೂಸ್ರೆಮೇ ಸಂವಿಧಾನ್ , ಮನ್ ಮೇ ಹೋ ಅಹಿಂಸಾ - ಜನ್ ಮನ್ ಗಣ್ ಕಾ ಗಾನ್ (ಒಂದು ಕೈಯಲ್ಲಿ ತ್ರಿವರ್ಣ ಧ್ವಜ - ಇನ್ನೊಂದು ಕೈಯಲ್ಲಿ ಸಂವಿಧಾನ, ಮನಸ್ಸಲ್ಲಿದೆ ಅಹಿಂಸೆ - ಅದೇ ಜನಮನಗಣದ ಗಾನ).

Writer - ಎ.ಎಸ್.ಪುತ್ತಿಗೆ

contributor

Editor - ಎ.ಎಸ್.ಪುತ್ತಿಗೆ

contributor

Similar News