×
Ad

ಸಂಪುಟ ವಿಸ್ತರಣೆ ಗೊಂದಲ: ಸಿಎಂ ಯಡಿಯೂರಪ್ಪ ವಿದೇಶ ಪ್ರವಾಸ ರದ್ದು

Update: 2020-01-09 22:30 IST

ಬೆಂಗಳೂರು, ಜ. 9: ಸಚಿವ ಸಂಪುಟ ವಿಸ್ತರಣೆ ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜ.20ರಿಂದ ಕೈಗೊಳ್ಳಲು ಉದ್ದೇಶಿಸಿದ್ದ ವಿದೇಶ ಪ್ರವಾಸವನ್ನು ರದ್ದುಗೊಳಿಸಲು ತೀರ್ಮಾನಿಸಿದ್ದಾರೆ.

ಗುರುವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಸ್ವಿಡ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ಆರಂಭವಾಗಲಿರುವ 50ನೆ ಅಂತರ್‌ರಾಷ್ಟ್ರೀಯ ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಬಹುತೇಕ ತೆರಳದಿರಲು ತೀರ್ಮಾನಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕ ಸೇರಿ ವಿವಿಧ ರಾಜ್ಯಗಳ ನಾಲ್ವರು ಮುಖ್ಯಮಂತ್ರಿಗಳು ದಾವೋಸ್‌ನಲ್ಲಿ ನಡೆಯಲಿರುವ ಆರ್ಥಿಕ ಸಮ್ಮೇಳನಕ್ಕೆ ಭಾಗವಹಿಸಬೇಕೆಂದು ಕೇಂದ್ರ ಸರಕಾರ ಸೂಚನೆ ನೀಡಿತ್ತು. ಆದರೆ, ಸಂಪುಟ ವಿಸ್ತರಣೆ ಗೊಂದಲದ ಹಿನ್ನೆಲೆಯಲ್ಲಿ ಬಿಎಸ್‌ವೈ ತಮ್ಮ ಪ್ರವಾಸ ರದ್ದುಗೊಳಿಸಲು ಮುಂದಾಗಿದ್ದಾರೆಂದು ಗೊತ್ತಾಗಿದೆ.

ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ದಾವೋಸ್‌ಗೆ ತೆರಳಬೇಕೆಂದು ಮನವಿ ಮಾಡಿದ ವೇಳೆ ವೈಯಕ್ತಿಕ ಕಾರಣಗಳಿಂದ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಉಪಚುನಾವಣೆ ಫಲಿತಾಂಶ ಹೊರಬಿದ್ದು ತಿಂಗಳು ಕಳೆಯುತ್ತಿದ್ದು, ಸಂಪುಟ ಸೇರ್ಪಡೆಗೆ ತುದಿಗಾಲ ಮೇಲೆ ನಿಂತಿದ್ದ 11 ಮಂದಿ ‘ಅರ್ಹ’ ಶಾಸಕರ ಒತ್ತಡವೂ ಹೆಚ್ಚಾಗಿದೆ. ಹೀಗಾಗಿ ಜ.11ರಂದು ಸಿಎಂ ದಿಲ್ಲಿಗೆ ತೆರಳಲಿದ್ದು, ಹೈಕಮಾಂಡ್ ಜತೆ ಚರ್ಚಿಸಿ ಸಂಕ್ರಾಂತಿ ವೇಳೆಗೆ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News