×
Ad

ವಿದ್ಯಾರ್ಥಿಯ 'ಪಕ್ಕೆಲುಬು' ಪದ ವೈರಲ್ ವಿಚಾರ: ಸೈಬರ್ ಕ್ರೈಂ ಠಾಣೆಗೆ ದೂರು ನೀಡಲು ಶಿಕ್ಷಣ ಸಚಿವರ ಸೂಚನೆ

Update: 2020-01-09 22:34 IST

ಬೆಂಗಳೂರು, ಜ.9: ರಾಜ್ಯದ ಶಾಲೆಯೊಂದರಲ್ಲಿ ಮಗುವೊಂದು ಶಿಕ್ಷಕರು ಹೇಳಿಕೊಟ್ಟರೂ ಪಕ್ಕೆಲುಬು ಎಂಬ ಪದವನ್ನು ಸರಿಯಾಗಿ ಉಚ್ಚರಿಸಲು ಬಾರದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ಪತ್ತೆ ಹಚ್ಚಲು ಸಚಿವ ಎಸ್.ಸುರೇಶ್‌ ಕುಮಾರ್ ಅವರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಲು ಹಾಗೂ ವಿಡಿಯೋ ಮಾಡಿದ ಶಿಕ್ಷಕರ, ಶಾಲಾ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲು ಸೂಚಿಸಿದ್ದಾರೆ.

ಪುಟ್ಟ ಮಕ್ಕಳ ಕಲಿಕೆಯನ್ನು ವ್ಯಂಗ್ಯದ ರೀತಿಯಲ್ಲಿ ತೋರಿಸುವಂತಹ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವಂತಹ ಕೃತ್ಯಗಳಿಗೆ ಮುಂದಾದರೆ ಅಂಥ ಶಿಕ್ಷಕರ, ಶಾಲಾ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದು ಸೇರಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದೆಂಬ ಸುತ್ತೋಲೆ ಹೊರಡಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಮಕ್ಕಳು ತಪ್ಪು ಉಚ್ಛಾರ ಮಾಡುವುದು ಸಹಜವೇ. ಇಂತಹ ಪದಗಳನ್ನು ಮಕ್ಕಳು ನಿರಂತರ ಕಲಿಕೆಯ ಬಳಿಕ ಉಚ್ಛಾರ ಮಾಡುತ್ತಾರೆ. ಇಂತಹ ವಿಚಾರ ಮಗುವಿನ ಗಮನಕ್ಕೆ ಬಂದರೆ ಆತನ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುತ್ತದೆ. ಶಿಕ್ಷಕರು ಮಕ್ಕಳಿಗೆ ಸರಿಯಾಗಿ ಉಚ್ಛಾರ ಮಾಡುವುದನ್ನು ಕಲಿಸಬೇಕೇ ಹೊರತು ಅದನ್ನೇ ದೊಡ್ಡ ಅಪರಾಧವೆಂಬಂತೆ ಬಿಂಬಿಸಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ಕೆಲಸ ನಿಜಕ್ಕೂ ಅಪರಾಧ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News