ಸಿಎಎ ವಿರೋಧಿಸಿ ಮಹಿಳಾ ಕಾಂಗ್ರೆಸ್ ನಿಂದ ವಿಭಿನ್ನ ಪ್ರತಿಭಟನೆ

Update: 2020-01-09 17:31 GMT

ಬೆಂಗಳೂರು, ಜ.9: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ನೂರಾರು ಮಹಿಳಾ ಕಾಂಗ್ರೆಸ್ ಸದಸ್ಯೆಯರು, ರಂಗೋಲಿ ಹಾಕುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ಗುರುವಾರ ನಗರದ ಸ್ವಾತಂತ್ರ ಉದ್ಯಾನವನ ಮೈದಾನದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಜಮಾಯಿಸಿದ ಮಹಿಳಾ ಸದಸ್ಯೆಯರು, ನೊ ಸಿಎಎ, ನೊ ಎನ್‌ಆರ್‌ಸಿ, ನೊ ಅಟ್ರಾಸಿಟಿ ಆನ್ ವುಮೆನ್, ಗೋ ಬ್ಯಾಕ್ ನರೇಂದ್ರ ಮೋದಿ ಎಂಬ ಘೋಷವಾಕ್ಯಗಳನ್ನು ರಂಗೋಲಿಯಲ್ಲೇ ಬಿಡಿಸುವ ಮೂಲಕ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿರುವ ಸಿಎಎ ಹಾಗೂ ಎನ್‌ಆರ್‌ಸಿ ಕಾಯ್ದೆ ಖಂಡಿಸಿ ರಂಗೋಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಯುವಕ-ಯುವತಿಯರಿಗೆ ಉದ್ಯೋಗ, ಮಹಿಳೆಯರಿಗೆ ರಕ್ಷಣೆ ಬೇಕಿದೆ. ಆದರೆ, ಎನ್‌ಆರ್‌ಸಿ ಮತ್ತು ಸಿಎಎ ನಮಗೆ ಬೇಡ, ಇದನ್ನು ಬಲವಂತವಾಗಿ ಹೇರಲಾಗುತ್ತಿದೆ. ಸುಳ್ಳು ಹೇಳುವ ರಾಷ್ಟ್ರೀಯ ನಾಯಕರು, ಹೆಣ್ಣುಮಕ್ಕಳ ರಕ್ಷಣೆಗೆ ಗಮನ ಕೊಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ನಿ ಸೇರಿದಂತೆ ಪ್ರಮುಖರು ರಂಗೋಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News