×
Ad

ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಧರಣಿ

Update: 2020-01-09 23:14 IST

ಬೆಂಗಳೂರು, ಜ.9: ಆಶಾ ಕಾರ್ಯಕರ್ತೆಯರಿಗೆ ಬಾಕಿ ಉಳಿಸಿಕೊಂಡಿರುವ 15 ತಿಂಗಳ ವೇತನವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ನೂರಾರು ಆಶಾ ಕಾರ್ಯಕರ್ತೆಯರು ನಗರದಲ್ಲಿಂದು ಧರಣಿ ನಡೆಸಿದರು.

ನಗರದ ಪುರಭವನದ ಎದುರು ಜಮಾಯಿಸಿದ್ದ ನೂರಾರು ಆಶಾ ಕಾರ್ಯಕರ್ತೆಯರು, ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕಳೆದ ವಾರ ಧರಣಿ ನಡೆಸಿದ್ದೆವು. ಆದರೆ, ಆಗ ಅಧಿಕಾರಿಗಳು ಮತ್ತು ಸರಕಾರ ನೀಡಿದ ಭರವೆಯನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡುವ ಗೌರವಧನವನ್ನು ಮಾಸಿಕ ಕನಿಷ್ಠ 12 ಸಾವಿರಕ್ಕೆ ಹೆಚ್ಚಳ ಮಾಡಬೇಕು. ಪಿಂಚಣಿ ಸೇರಿದಂತೆ ಮತ್ತಿತರೆ ಸೌಲಭ್ಯಗಳನ್ನು ಒದಗಿಸಬೇಕು. ಪ್ರತಿ ತಿಂಗಳು ನಿಗದಿತ ದಿನದಂದೇ ಗೌರವಧನ ಪಾವತಿಸಬೇಕು. ಸಮೀಕ್ಷೆ ಮತ್ತು ಸಭೆಗಳಿಗೆ ಪ್ರತ್ಯೇಕ ಭತ್ಯೆ ನೀಡಬೇಕು ಸೇರಿದಂತೆ 12 ಬೇಡಿಕೆಗಳು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸಾವಿರಾರು ಆಶಾ ಕಾರ್ಯಕರ್ತೆಯರು ಧರಣಿ ನಡೆಸಿದರು. ಆದರೆ, ಸರಕಾರ ನಮ್ಮ ಬೇಡಿಕೆ ಈಡೇರಿಸುವ ಬದಲಿಗೆ, ಪ್ರತಿಭಟಿಸುವವರನ್ನು ಕೆಲಸದಿಂದ ವಜಾ ಮಾಡುವುದು, ಗೌರವಧನ ನಿಲ್ಲಿಸುವುದನ್ನು ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ರಾಜ್ಯ ಸರಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ಯಾರೂ ಸೇವೆಗೆ ತೆರಳುವುದಿಲ್ಲ. ಅಧಿಕಾರಿಗಳು ಬಹುತೇಕರು ಸೇವೆಗೆ ಮರಳಿದ್ದಾರೆ ಎಂಬುದು ಸತ್ಯಕ್ಕೆ ದೂರವಾದದ್ದು. ಕೆಲವರಷ್ಟೇ ಇವರ ಬೆದರಿಕೆಗೆ ಹೆದರಿ ಕೆಲಸಗಳಿಗೆ ಹಾಜರಾಗಿದ್ದಾರೆ. ಉಳಿದವರು ಎಲ್ಲರೂ ಮನೆಯಿಂದಲೇ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಆಶಾ ಕಾರ್ಯಕರ್ತೆಯರ ನೇಮಕಾತಿಯ ಬಳಿಕ ತಾಯಿ ಮತ್ತು ಶಿಶುಗಳ ಮರಣ ಪ್ರಮಾಣ ಇಳಿಕೆಯಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸೂಚ್ಯಂಕಗಳಲ್ಲಿ ಏರಿಕೆಯಾಗಿದೆ. ತಿಂಗಳಲ್ಲಿ ಮೂರರಿಂದ ನಾಲ್ಕು ಸಮೀಕ್ಷೆ ಮಾಡಿಸುತ್ತಿದ್ದಾರೆ. ಕುಟುಂಬ ಮತ್ತು ಮಕ್ಕಳಿಗೆ ಸಮಯ ನೀಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಜೀವನವನ್ನು ಪಣಕ್ಕಿಟ್ಟು ಕೆಲಸ ಮಾಡಬೇಕಾದ ಸ್ಥಿತಿಯಿದೆ ಎಂದು ಅವರು ತಿಳಿಸಿದರು.

ಆಶಾ ಕಾರ್ಯಕರ್ತೆಯರ ಸುರಕ್ಷತೆಯ ಬಗ್ಗೆ ಸರಕಾರ ಯಾವ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರ ಶೋಷಣೆ ನಡೆಯುತ್ತಿದೆ. ಎರಡು ಗಂಟೆ ಕೆಲಸ ಮಾಡಿದರೆ ಸಾಕು ಎಂಬ ಭರವಸೆಯಲ್ಲಿ ನೇಮಕಾತಿ ಮಾಡಲಾಗಿತ್ತು. ಈಗ ಎರಡು ಗಂಟೆಗೆ ವಿಶ್ರಾಂತಿಯೂ ಇಲ್ಲವಾಗಿದೆ. ಕೆಲಸಕ್ಕೆ ತಕ್ಕ ಗೌರವಧನವೂ ನೀಡುತ್ತಿಲ್ಲ. ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವೇತನವನ್ನೂ ನಿಮಗೆ ನೀಡುತ್ತಿಲ್ಲ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News