​ಇದರ ಮುಂದಿನ ಹಂತಗಳೇನು?

Update: 2020-01-09 18:12 GMT

ಮಾನ್ಯರೇ,

ದೇಶಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳಾದ ಮೇಲೆ ಈ ದೇಶದ ಪ್ರತಿಯೊಬ್ಬ ನಾಗರಿಕ, ತಾನು ಈ ದೇಶದವನೆಂದು ದಾಖಲೆ ಸಲ್ಲಿಸಬೇಕಾಗಿ ಬರುವುದೂ, ಅದಕ್ಕಾಗಿ ಸರಕಾರಿ ಕಚೇರಿಗಳಿಗೆ ಎಡತಾಕುವುದೂ ಎಂತಹ ದುರ್ದೈವ. ಹುಟ್ಟಿದಾಗಿನಿಂದ ಆರಂಭವಾಗುವ ಅನೇಕ ಅರ್ಜಿ ಫಾರ್ಮುಗಳಲ್ಲಿ, ಅದು ಶಾಲಾ ಕಾಲೇಜುಗಳದ್ದಾಗಿರಲಿ ಅಥವಾ ಇತರ ಅನೇಕ ಸಂದರ್ಭಗಳದ್ದಾಗಿರಲಿ, ಪ್ರತಿಯೊಂದರಲ್ಲೂ ‘ರಾಷ್ಟ್ರೀಯತೆ’ ಎಂಬ ಅಂಕಣದಲ್ಲಿ ‘ಭಾರತೀಯ’ ಎಂದೇ ದಾಖಲಿಸಿಕೊಂಡು ಬಂದ ವ್ಯಕ್ತಿಗೆ, ಈಗ ಮತ್ತೆ ತಾನು ಭಾರತೀಯ ಎಂಬುದನ್ನು ಖಚಿತಪಡಿಸಿಕೊಡಬೇಕಾದ ಪ್ರಶ್ನೆ ಎದುರಾಗಿದೆ. ಹಾಗಿದ್ದರೆ ಇಷ್ಟೂ ವರ್ಷಗಳ ಕಾಲ ತಾನು ಆ ಫಾರ್ಮುಗಳಲ್ಲಿ ‘ಭಾರತೀಯ’ ಎಂದು ನಮೂದಿಸಿದ್ದಕ್ಕೆ ಯಾವ ಬೆಲೆಯೂ ಇಲ್ಲವೇ?

ಹೇಳಿ ಕೇಳಿ ಈ ಎನ್‌ಆರ್‌ಸಿಯನ್ನು ವಿದೇಶೀ ನುಸುಳುಕೋರರನ್ನು ಪತ್ತೆ ಹಚ್ಚಲು ಜಾರಿಗೆ ತರಲಾಗುತ್ತಿದೆ ಎನ್ನಲಾಗುತ್ತಿದೆ. ಭಾರತದಲ್ಲಿ ನುಸುಳುಕೋರರಿದ್ದಾರೆ, ಅದೊಂದು ಗಂಭೀರ ಸವಸ್ಯೆ ಎಂದು ಸರಕಾರ ಭಾವಿಸುವುದಾದರೆ, ಅಂತಹ ನುಸುಳುಕೋರರ ಸಂಖ್ಯೆಯಾದರೂ ಸರಕಾರಕ್ಕೆ ಗೊತ್ತಿರಬೇಕಲ್ಲವೇ? ಅವರನ್ನು ಪತ್ತೆ ಹಚ್ಚುವುದು ಸರಕಾರಿ ಯಂತ್ರಕ್ಕೆ ಸಾಧ್ಯವಿಲ್ಲವೇ? ಅದಕ್ಕೋಸ್ಕರ ದೇಶದ 130 ಕೋಟಿ ಜನರೂ ಸರಕಾರಿ ಕಚೇರಿಗಳ ಮುಂದೆ ದಾಖಲೆ ಸಲ್ಲಿಸಲು ಅಲೆದಾಡಬೇಕೇ? ಕಡಿಮೆ ಸಂಖ್ಯೆಯ ಅಪರಾಧಿಗಳನ್ನು ಪತ್ತೆಹಚ್ಚಲು ದೊಡ್ಡ ಸಂಖ್ಯೆಯ, ನಿರಪರಾಧಿಗಳಾದ ಪ್ರಾಮಾಣಿಕ ನಾಗರಿಕರು ಪರದಾಡಬೇಕೇ?

 ದಾಖಲೆ ಸಲ್ಲಿಸಲಾಗದ ಈ ಮಂದಿ, ಅವರು ಹಿಂದೂಗಳಿರಲಿ ಅಥವಾ ಇತರ ಸಮುದಾಯಗಳಿಗೆ ಸೇರಿದವರಾಗಿರಲಿ, ಮುಂದೆ ಈ ದೇಶದಲ್ಲಿ ಎರಡನೇ ದರ್ಜೆ ನಾಗರಿಕರಾಗಿ ಪರಿಗಣಿತರಾಗುವ ಸಾಧ್ಯತೆಗಳಿಲ್ಲವೇ? ಮತ್ತು ಆ ಕಾರಣಕ್ಕೆ ಇವರಿಗೆ ಮತದಾನದ ಹಕ್ಕು, ಪಡಿತರ ಚೀಟಿ, ಇನ್ನಿತರ ನಾಗರಿಕ ಸೌಲಭ್ಯಗಳಿಗೆ ಅನರ್ಹತೆಯನ್ನು ತರುವ ಕಾನೂನುಗಳು ಮುಂದಿನ ದಿನಗಳಲ್ಲಿ ಬರುವ ಸಾಧ್ಯತೆ ಇರಬಹುದಲ್ಲವೇ? ಶಿಕ್ಷಣ ಪಡೆದಿರದ ಅಥವಾ ಅಲ್ಪಶಿಕ್ಷಣ ಹೊಂದಿರುವ ಈ ದೇಶದ ದೊಡ್ಡ ಸಂಖ್ಯೆಯ ಬಡವರು, ದಲಿತರು ಎರಡನೆಯ ದರ್ಜೆ ನಾಗರಿಕರಾಗಿರುತ್ತಾ; ವಿದ್ಯೆ ಹೊಂದುವ ಅವಕಾಶ ಪಡೆದು ಸಮಾಜದ ಇಲೈಟ್ ವರ್ಗಕ್ಕೆ ಸೇರಿದವರು ಮಾತ್ರ ಪ್ರಥಮ ದರ್ಜೆಯ ನಾಗರಿಕರಾಗಿ, ಮತದಾನ ಹಕ್ಕನ್ನು ಪಡೆದು ತವಗೆ ಬೇಕಾದ ಸರಕಾರವೇ ಇರುವಂತೆ ನೋಡಿಕೊಳ್ಳುವ ಒಂದು ವರ್ಗ ತಾರತಮ್ಯದ ಸಮಾಜ ನಿರ್ಮಾಣಕ್ಕೆ ಇದು ನಾಂದಿಯಾಗಬಹುದಲ್ಲವೇ?

Writer - -ಸದಾಶಿವ ಮಂಗಳೂರು

contributor

Editor - -ಸದಾಶಿವ ಮಂಗಳೂರು

contributor

Similar News