ಫೆ.26ರಿಂದ 12ನೇ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ: ಲಾಂಛನ ಬಿಡುಗಡೆಗೊಳಿಸಿದ ಸಿಎಂ

Update: 2020-01-09 18:20 GMT

ಬೆಂಗಳೂರು, ಜ.9: 12ನೇ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ಫೆ.26 ರಿಂದ ಮಾ.4ರ ವರೆಗೂ ನಗರದ ಒರಾಯನ್ ಮಾಲ್‌ನಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಗುರುವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ 12ನೇ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ಚಲನಚಿತ್ರೋತ್ಸವದ ಉದ್ಘಾಟನೆ ಫೆ.26ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾಜಾಜಿನಗರದಲ್ಲಿರುವ ಒರಾಯನ್ ಮಾಲ್‌ನ 11 ಪರದೆಗಳಲ್ಲಿ 50 ದೇಶದ 200 ಸಮಕಾಲೀನ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದಲ್ಲಿ ಈ ಚಿತ್ರೋತ್ಸವ ನಡೆಯುತ್ತಿದ್ದು, ಮಾ.4 ರಂದು ಪ್ರಶಸ್ತಿ ಪ್ರದಾನ ಸಮಾರಂಭದೊಂದಿಗೆ ಚಿತ್ರೋತ್ಸವದ ಸಮಾರೋಪ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

7 ದಿನಗಳ ಸಿನಿಮೋತ್ಸವದಲ್ಲಿ ಒಟ್ಟು 14 ವಿಭಾಗಗಳಿದ್ದು, ಚಲನಚಿತ್ರೋದ್ಯಮದ ಎಲ್ಲ ವಿಭಾಗಗಳನ್ನು ಪ್ರತಿನಿಧಿಸಲಿದೆ. ವಿಶ್ವ ಸಿನಿಮಾ, ಚಿತ್ರ ಭಾರತಿ, ಭಾರತೀಯ ಚಿತ್ರಗಳ ಸ್ಪರ್ಧಾ ವಿಭಾಗ, ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ, ಚಲನಚಿತ್ರ ವಿಮರ್ಶಕರ ಅಂತರ್‌ರಾಷ್ಟ್ರೀಯ ಒಕ್ಕೂಟದ ಪ್ರಶಸ್ತಿ ಪಡೆದ ಚಿತ್ರಗಳು, ಏಷಿಯನ್ ಸಿನಿಮಾ, ಆತ್ಮಚರಿತ್ರೆ ಆಧಾರಿತ ಚಿತ್ರಗಳು, ಉಪಭಾಷಾ ಚಿತ್ರಗಳು, ವಿಶೇಷ ವಸ್ತು ಆಧಾರಿತ ಚಿತ್ರಗಳು, ಕಣ್ಮರೆಯಾದ ನಟ, ನಿರ್ದೇಶಕರ ಸ್ಮರಣೆ, ಸಾಕ್ಷಚಿತ್ರಗಳು ಇಲ್ಲಿ ಚಿತ್ರಲೋಕದ ವೈವಿಧ್ಯವನ್ನು ತೆರೆದಿಡಲಿವೆ ಎಂದು ಅವರು ಹೇಳಿದರು.

ಸಿನಿಮಾದ ಬೆಳವಣಿಗೆ ಕುರಿತಂತೆ ಸಂವಾದ, ಉಪನ್ಯಾಸ, ಚಲನಚಿತ್ರ ತಯಾರಿಕೆ, ಚಲನಚಿತ್ರ ಕಲೆ, ರಸಗ್ರಹಣ ಶಿಬಿರ, ವಿಚಾರ ಸಂಕಿರಣ, ಕಾರ್ಯಾಗಾರ, ಮಾಸ್ಟರ್‌ ಕ್ಲಾಸ್ ವಿಭಾಗದಲ್ಲಿ ಸಿನಿಮಾ ತಜ್ಞರಿಂದ ಉಪನ್ಯಾಸ ಇವೆಲ್ಲಾ ಸಿನಿಮಾಸಕ್ತರಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿವೆ ಎಂದು ಅವರು ವಿವರಿಸಿದರು. ಬೆಂಗಳೂರು ನಗರಕ್ಕೆ ವಿಶ್ವ ಸಿನಿಮಾವನ್ನು ಪರಿಚುಸುವುದೇ ಚಲನಚಿತ್ರೋತ್ಸವದ ಮುಖ್ಯ ಉದ್ದೇಶ. ಜತೆಗೆ ಕನ್ನಡ ಸಿನಿಮಾವನ್ನು ವಿಶ್ವದ ನಾನಾ ರಾಷ್ಟ್ರಗಳಿಗೆ ಪರಿಚಯಿಸುವ ಕೆಲಸವೂ ಈ ಮೂಲಕ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅರಣ್ಯ ಸಚಿವ ಸಿ.ಸಿ.ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ವಾರ್ತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್, ಆಯುಕ್ತ ಸಿದ್ದರಾಮಪ್ಪ, ವಾರ್ತಾ ಇಲಾಖೆಯ ನಿರ್ದೇಶಕ ಹಾಗೂ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದರ್ಶಿ ಭೃಂಗೀಶ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

-12ನೇ ಬೆಂಗಳೂರು ಅಂತರ್‌ರಾಷ್ಟ್ರೀಯ ಸಿನೆಮೋತ್ಸವಕ್ಕೆ ಪ್ರತಿನಿಧಿ ಶುಲ್ಕ 800ರೂ ಇದ್ದು, ವಿದ್ಯಾರ್ಥಿಗಳಿಗೆ ಹಾಗೂ ಚಲನಚಿತ್ರ ರಂಗದವರಿಗೆ 400ರೂ.ನಿಗದಿ ಪಡಿಸಲಾಗಿದೆ.

-50 ದೇಶಗಳ ಸುಮಾರು 200 ಚಿತ್ರಗಳ ಪ್ರದರ್ಶನ.

-ರಾಜಾಜಿನಗರದ ಒರಾಯನ್ ಮಾಲ್ ನ 11 ಪರದೆಯಲ್ಲಿ ಚಿತ್ರ ಪ್ರದರ್ಶನವಾಗಲಿದೆ.

-ವಿಶ್ವ ಸಿನಿಮಾ, ಚಿತ್ರ ಭಾರತಿ, ಭಾರತೀಯ ಚಿತ್ರಗಳ ಸ್ಪರ್ಧಾ ವಿಭಾಗ, ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ ಸೇರಿದಂತೆ 14 ವಿಭಾಗಗಳು ಪ್ರತಿನಿಧಿಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News