ಎಚ್‌ಡಿಕೆ ಬಿಡುಗಡೆ ಮಾಡಿರುವ ವಿಡಿಯೋ ಸರಿಯಿಲ್ಲ: ಗೃಹ ಸಚಿವ ಬೊಮ್ಮಾಯಿ

Update: 2020-01-10 11:58 GMT

ಬೆಂಗಳೂರು, ಜ. 10: ‘ಪೊಲೀಸರನ್ನು ತಪ್ಪಿತಸ್ಥರೆಂದು ಬಿಂಬಿಸುವುದು ಸರಿಯಲ್ಲ. ಪೊಲೀಸರು ಗಲಭೆ ಮಾಡುವುದಿಲ್ಲ. ಬದಲಿಗೆ ನಿಯಂತ್ರಿಸುತ್ತಾರೆ. ಆದರೆ, ಮಂಗಳೂರು ಗಲಭೆ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆ ಮೂಲಕ ಗೊಂದಲ ಸೃಷ್ಟಿ ಸರಿಯಲ್ಲ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಆಕ್ಷೇಪಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಚ್‌ಡಿಕೆ ಬಿಡುಗಡೆ ಮಾಡಿರುವ ವಿಡಿಯೋ ಸರಿಯಿಲ್ಲ. ವಿಡಿಯೋದಲ್ಲಿ ಹಿಂದೆ ಇರೋದು ಮುಂದೆ, ಮುಂದೆ ಇರೋದು ಹಿಂದೆ ಹಾಕಿ ತೋರಿಸಿದ್ದಾರೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಇದ್ದ ಪೊಲೀಸರೇ ಈಗಲೂ ಇದ್ದಾರೆ. ಇದೀಗ ಅವರನ್ನೆ ತಪ್ಪಿತಸ್ಥರು ಎಂದು ಹೇಳುವುದು ಸರಿಯಲ್ಲ. ಜನರು ಗುಂಪು ಸೇರಿದ್ದು, ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಲಾಠಿ ಪ್ರಹಾರ ನಡೆಸಲಾಗಿದೆ. ಶಸ್ತ್ರಾಸ್ತ್ರ ಸಂಗ್ರಹಣೆ ಮಾಡಿದ್ದ ಸ್ಥಳಕ್ಕೆ ದಾಳಿ ಮಾಡಲು ಮುಂದಾದಾಗ ಗೋಲಿಬಾರ್ ಆಗಿದೆ. ಆದರೆ, ಇದೀಗ ಎಚ್‌ಡಿಕೆ ಘಟನೆ ತಿರುಚಲು ಹೊರಟಿದ್ದಾರೆ. ಶಾಂತಿಯಿಂದ ಇದ್ದ ರಾಜ್ಯವನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ ಅವರು, ಎಚ್‌ಡಿಕೆ ತಮ್ಮ ವಿಡಿಯೋವನ್ನು ತನಿಖಾ ತಂಡಕ್ಕೆ ನೀಡಲಿ. ಈಗಾಗಲೇ ನಾನು ಜಿಲ್ಲಾಧಿಕಾರಿಗೆ ಆ ವಿಡಿಯೋ ಪರಿಶೀಲನೆ ನಡೆಸಲು ಸೂಚನೆ ನೀಡಿದ್ದೇನೆ ಎಂದರು.

ಗಲಭೆಗೆ ಪೊಲೀಸರೇ ಪ್ರಚೋದನೆ ನೀಡಿದ್ದಾರೆಂಬುದು ತಪ್ಪು. ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ರಾಜ್ಯದಲ್ಲಿ ಎಲ್ಲೆಲ್ಲಿ ಗಲಭೆ ನಡೆದಿದೆ. ಆ ಬಳಿಕ ಏನೇನು ಆಗಿದೆ ಎಂಬುದು ಎಲ್ಲರಿಗೂ ಗೊತ್ತು. ಮತ್ತಷ್ಟು ವಿಡಿಯೋಗಳಿವೆ ಎಂದ ಎಚ್‌ಡಿಕೆ ಅವುಗಳನ್ನು ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News