ಪೌರತ್ವ ಕಾಯ್ದೆಯಿಂದ ಒಬ್ಬ ಮುಸ್ಲಿಮನಿಗೆ ತೊಂದರೆಯಾದರೂ ನಾನು ಜವಾಬ್ದಾರಿ: ಸಿಎಂ ಯಡಿಯೂರಪ್ಪ

Update: 2020-01-10 14:49 GMT

ಬೆಂಗಳೂರು, ಜ.10: ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಯಾವ ಮುಸ್ಲಿಮರಿಗೂ ತೊಂದರೆಯಾಗುವುದಿಲ್ಲ. ನಮ್ಮ ರಾಜ್ಯದಲ್ಲಿ ಒಬ್ಬರೇ ಒಬ್ಬ ಮುಸ್ಲಿಮರಿಗೆ ಈ ಕಾಯ್ದೆಯಿಂದ ತೊಂದರೆಯಾದರೆ ಅದರ ಜವಾಬ್ದಾರಿಯನ್ನು ನಾನು ಹೊರುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಯ ನೀಡಿದ್ದಾರೆ.

ಶುಕ್ರವಾರ ಹೆಗಡೆ ನಗರ ಸಮೀಪದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ 2020ನೇ ಸಾಲಿನಲ್ಲಿ ಪವಿತ್ರ ಹಜ್‌ಯಾತ್ರೆ ಕೈಗೊಳ್ಳುವ ಯಾತ್ರಿಗಳನ್ನು ಆನ್‌ಲೈನ್ ಲಾಟರಿ(ಖುರ್ರಾ) ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅನಗತ್ಯವಾಗಿ ಗೊಂದಲ ನಿರ್ಮಿಸುತ್ತಿರುವವರ ಕಡೆ ಕಿವಿಗೊಡಬೇಡಿ ಎಂದು ಕೈ ಜೋಡಿಸಿ ವಿನಂತಿಸುತ್ತೇನೆ. ರಾಜ್ಯದ ಎಲ್ಲ ನಾಗರಿಕರು ಸುಖ, ಶಾಂತಿಯಿಂದ ಬಾಳುವಂತೆ ನಿಮ್ಮ ಪವಿತ್ರ ಹಜ್‌ ಯಾತ್ರೆ ಸಂದರ್ಭದಲ್ಲಿ ಅಲ್ಲಾಹ್‌ನ ಬಳಿ ಪ್ರಾರ್ಥಿಸಿ ಎಂದು ಅವರು ಕೋರಿದರು.

ನಾನು ಹಿಂದೂ, ಮುಸ್ಲಿಮ್, ಕ್ರೈಸ್ತ ಎಂದು ಯಾವುದೇ ಭೇದ ಭಾವ ಮಾಡಿಲ್ಲ. ಬಜೆಟ್‌ನಲ್ಲಿ ಅನುದಾನ ಮೀಸಲು ಇಡುವ ಸಂದರ್ಭದಲ್ಲಿಯೂ ಎಲ್ಲ ರೀತಿಯ ಸಹಕಾರ ಕೊಟ್ಟಿದ್ದೇನೆ. ವಿಶೇಷ ವಿಮಾನದ ಮೂಲಕ ನಾನು ಮತ್ತೊಂದು ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಆದರೆ, ಹಜ್‌ ಯಾತ್ರಿಗಳ ಆಯ್ಕೆ ಪ್ರಕ್ರಿಯೆ ಮಾಡಲು ಇಲ್ಲಿಗೆ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ಹಜ್ ಭವನ ನಿರ್ಮಿಸಿದ ಬಳಿಕ ಇಲ್ಲಿಗೆ ಬರಲು ಅವಕಾಶ ಸಿಕ್ಕಿರಲಿಲ್ಲ. ಆದುದರಿಂದ, ಈ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕು ಎಂದು ಬಂದಿದ್ದೇನೆ. ನಿಮ್ಮ ಪ್ರೀತಿ ಹಾಗೂ ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ನಿಮ್ಮ ಸಮಾಜದ ಯಾವುದೇ ಕೆಲಸ ಕಾರ್ಯಗಳಿದ್ದರೂ 24 ಗಂಟೆಯಲ್ಲಿ ಅದಕ್ಕೆ ಸ್ಪಂದಿಸುತ್ತೇನೆ. ಬಜೆಟ್‌ನಲ್ಲಿಯೂ ಹೆಚ್ಚಿನ ಅನುದಾನವನ್ನು ಅಲ್ಪಸಂಖ್ಯಾತ ಮುಸ್ಲಿಮರಿಗೆ ಮೀಸಲಿಡುತ್ತೇನೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.

ಗುಲ್ಬರ್ಗದಿಂದ ಹಜ್‌ ಯಾತ್ರೆಗೆ ವಿಮಾನ: ಉತ್ತರ ಕರ್ನಾಟಕ ಭಾಗದ ಮುಸ್ಲಿಮ್ ಬಾಂಧವರು, ಹಜ್‌ ಯಾತ್ರೆಗೆ ತೆರಳಲು ಅನುಕೂಲವಾಗುವಂತೆ ಗುಲ್ಬರ್ಗ ವಿಮಾನ ನಿಲ್ದಾಣದಿಂದ ಮಕ್ಕಾ ಹಾಗೂ ಮದೀನಾ ನಗರಗಳಿಗೆ ವಿಮಾನಯಾನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಜೊತೆ ಚರ್ಚಿಸಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಪ್ರಸಕ್ತ ಸಾಲಿನ ಜುಲೈ ತಿಂಗಳಲ್ಲಿ ನಡೆಯಲಿರುವ ಹಜ್‌ ಯಾತ್ರೆಗೆ ತೆರಳಲು ರಾಜ್ಯ ಹಜ್ ಸಮಿತಿಗೆ 9823 ಅರ್ಜಿಗಳು ಸಲ್ಲಿಕೆಯಾಗಿದ್ದವು. ಭಾರತೀಯ ಹಜ್ ಸಮಿತಿಯು ನಮ್ಮ ರಾಜ್ಯಕ್ಕೆ 6734 ಮಂದಿಯ ಖೋಟಾವನ್ನು ನಿಗದಿಪಡಿಸಲಾಗಿದೆ. ಈ ಪೈಕಿ 70 ವರ್ಷ ಮೇಲ್ಪಟ್ಟ 459 ಹಾಗೂ ಮೆಹ್ರಮ್ ಇಲ್ಲದೆ ಪ್ರಯಾಣಿಸುವಂತಹ 32 ಮಂದಿ ಮಹಿಳೆಯರನ್ನು ನೇರವಾಗಿ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ನಮ್ಮ ರಾಜ್ಯದ ಹಜ್ ಭವನವು ಇಡೀ ದೇಶದ ಗಮನ ಸೆಳೆಯುವ ಮೂಲಕ, ನಾಡಿಗೆ ಹೆಮ್ಮೆ ತಂದಿದೆ. ಹಜ್ ಭವನದ ಸಮ್ಮೇಳನ ಸಭಾಂಗಣದ ಕಾಮಗಾರಿಯನ್ನು ಪೂರ್ಣಗೊಳಿಸಲು ತುರ್ತಾಗಿ 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು. ಕಲಬುರಗಿಯಲ್ಲಿ ಹಜ್ ಭವನ ನಿರ್ಮಾಣಕ್ಕೆ 1 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಹಜ್‌ ಯಾತ್ರೆಗೆ ತೆರಳುವ ಎಲ್ಲ ಯಾತ್ರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಮಕ್ಕಾ ಹಾಗೂ ಮದೀನಾ ನಗರಗಳಲ್ಲಿ ನೀವೆಲ್ಲರೂ ಮಾಡುವ ದುಆದಲ್ಲಿ ನಮ್ಮ ದೇಶದ ಐಕ್ಯತೆ ಹಾಗೂ ಅಭಿವೃದ್ಧಿಗಾಗಿ ಪ್ರಾರ್ಥನೆ ಮಾಡಿ ಎಂದು ಮುಖ್ಯಮಂತ್ರಿ ಹೇಳಿದರು.

ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚೌಹಾಣ್ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ಮೇಲೆ ವಿಶ್ವಾಸವಿಟ್ಟು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜವಾಬ್ದಾರಿ ವಹಿಸಿದ್ದಾರೆ. ಅವರ ನಂಬಿಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ. ಬಜೆಟ್‌ನಲ್ಲಿಯೂ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ಹಾಗೂ ಹೊಸ ಕಾರ್ಯಕ್ರಮಗಳನ್ನು ಘೋಷಿಸಲು ಪ್ರಯತ್ನಿಸುತ್ತೇನೆ ಎಂದರು.

ಸ್ವಾಗತ ಭಾಷಣ ಮಾಡಿದ ರಾಜ್ಯ ಹಜ್ ಸಮಿತಿ ಅಧ್ಯಕ್ಷ ಆರ್.ರೋಷನ್ ಬೇಗ್, ಗುಲ್ಬರ್ಗ, ಬೀದರ್, ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಯಾತ್ರಿಗಳು ಹೈದರಾಬಾದ್ ಮೂಲಕ ಹಜ್‌ ಯಾತ್ರೆಗೆ ತೆರಳುವ ಪರಿಸ್ಥಿತಿ ಇದೆ. ಈಗ ಗುಲ್ಬರ್ಗದಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿರುವುದರಿಂದ, ಅಲ್ಲಿಂದಲೇ ನೇರವಾಗಿ ಸೌದಿ ಅರೇಬಿಯಾಗೆ ವಿಮಾನ ಸಂಪರ್ಕ ಕಲ್ಪಿಸಲು ಕೇಂದ್ರ ಸರಕಾರದ ಜೊತೆ ಚರ್ಚಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಕಾರ್ಯದರ್ಶಿ ಇಬ್ರಾಹಿಂ ಅಡೂರ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್, ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಣಾಧಿಕಾರಿ ಸರ್ಫರಾಝ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News