ಬಿಜೆಪಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ: ಈಶ್ವರ ಖಂಡ್ರೆ

Update: 2020-01-10 17:46 GMT

ಬೆಂಗಳೂರು, ಜ.10: ಪೌರತ್ವ (ತಿದ್ದುಪಡಿ) ಕಾಯ್ದೆ ಪರವಾಗಿ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹಕ್ಕೆ ಮುಂದಾಗಿದ್ದ ಬಿಜೆಪಿ ಕಾರ್ಯಕರ್ತರು ನಗರದ ಕೋರಮಂಗಲ ಬಳಿಯಿರುವ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಅರಾಜಕತೆ ಸೃಷ್ಟಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಕ್ಷೇಪಿಸಿದ್ದಾರೆ.

ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಎ ಪರ ಬಿಜೆಪಿ ಕಾರ್ಯಕರ್ತರು ಸಹಿ ಸಂಗ್ರಹ ಕ್ಯಾಂಪೇನ್ ಮಾಡಲು ತೆರಳಿದ್ದಾರೆ. ಈ ವೇಳೆ ವಿದ್ಯಾರ್ಥಿಗಳಿಂದ ಬಲವಂತವಾಗಿ ಸಹಿ ಮಾಡಿಸಲಾಗಿದೆ. ಬಿಜೆಪಿ ಮತ್ತು ಸಂಘ ಪರಿವಾರ ವಿದ್ಯಾಕೇಂದ್ರಗಳಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ ಎಂದು ಹೇಳಿದರು.

ದಿಲ್ಲಿಯ ಜಾಮಿಯಾ ಮಿಲಿಯಾ ವಿವಿ, ಜೆಎನ್‌ಯು ವಿವಿಯಲ್ಲಿ ನಡೆಸಿದ ರೀತಿಯಲ್ಲಿಯೇ ಬಿಜೆಪಿ, ಎಬಿವಿಪಿ ಹಾಗೂ ಸಂಘಪರಿವಾರದ ಗುಂಪುಗಳು ಶಿಕ್ಷಣ ಕೇಂದ್ರಗಳಲ್ಲಿ ಮಾಡುತ್ತಿವೆ. ಶೈಕ್ಷಣಿಕ ಸಂಸ್ಥೆಗಳನ್ನು ಕೋಮುವಾದಿ ಕೇಂದ್ರಗಳನ್ನಾಗಿ ಮಾಡುತ್ತಿದ್ದಾರೆ ಎಂದ ಅವರು, ಮುಸುಕು ಹಾಕಿಕೊಂಡು ಬಂದು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುತ್ತಾರೆ. ಬಳಿಕ, ಹಲ್ಲೆಗೊಳಗಾದವರ ಮೇಲೆಯೇ ಕೇಸು ದಾಖಲಿಸುತ್ತಿದ್ದಾರೆ. ಇದೇ ಪರಿಸ್ಥಿತಿಯನ್ನು ರಾಜ್ಯದಲ್ಲಿಯೂ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಅವರು ದೂರಿದರು.

ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ನಡೆದಿರುವ ಘಟನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎರಡೂ ಕಾರಣವಾಗಿವೆ. ಗೃಹ ಸಚಿವರು ಬಾಯಿಗೆ ಬಂದಂತೆ ಮಾತನಾಡುವುದು ನಿಲ್ಲಿಸಬೇಕು. ಇಲ್ಲಿ ಘಟನೆಗೆ ಕಾರಣವಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಕಳೆದ 10 ವರ್ಷಗಳಲ್ಲಿ ವಸತಿಹೀನರಿಗೆ ಮನೆ ಕಟ್ಟಿಸಿಕೊಡುವ ಯೋಜನೆಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಮೈತ್ರಿ ಸರಕಾರವು 7 ಲಕ್ಷ ಕಡು ಬಡವರಿಗೆ ಮನೆ ಕಟ್ಟಿಕೊಡುವ ಯೋಜನೆಗೆ ತನಿಖೆ ನೆಪದಲ್ಲಿ ಹಣವನ್ನು ಸ್ಥಗಿತ ಮಾಡಿರುವುದು ದ್ವೇಷದ ರಾಜಕಾರಣ ಎಂದು ಈಶ್ವರ ಖಂಡ್ರೆ ಆಪಾದಿಸಿದರು.

ರಾಜ್ಯದಲ್ಲಿನ ಗ್ರಾಮ ಪಂಚಾಯತ್, ನಗರಸಭೆಗಳಲ್ಲಿ ವಸತಿ ಹೀನರಿಗೆ ನಿರ್ಮಿಸಿರುವ ಮನೆಗಳನ್ನು ತನಿಖೆ ನೆಪದಲ್ಲಿ ಹಣ ಬಿಡುಗಡೆ ಮಾಡದೇ ಸ್ಥಗಿತಗೊಳಿಸಲಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದಿನ ಸಮ್ಮಿಶ್ರ ಸರಕಾರ ವಸತಿ ರಹಿತ ಬಡವರಿಗೆ 15 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿತ್ತು. 7 ಲಕ್ಷ ಮನೆಗಳ ಪೈಕಿ 3 ಲಕ್ಷಕ್ಕೂ ಅಧಿಕ ಮನೆಗಳು ಪ್ರಗತಿಯಲ್ಲಿವೆ. ಇವುಗಳಿಗೆ ಹಣ ಬಿಡುಗಡೆ ಮಾಡದೇ, ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತರು ಸೇರಿದಂತೆ ಹಲವು ಸಮುದಾಯಗಳ ನಾಯಕರು ಮುಂಚೂಣಿಯಲ್ಲಿದ್ದಾರೆ. ಆದರೆ, ಯಾರಿಗೆ ಅಧ್ಯಕ್ಷ ಪಟ್ಟ ಕಟ್ಟಬೇಕು ಎಂಬುದು ವರಿಷ್ಠರೇ ತೀರ್ಮಾನಿಸಲಿದ್ದಾರೆ.

-ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News