×
Ad

‘ಸಪ್ತಪದಿ’ ಸಾಮೂಹಿಕ ವಿವಾಹಕ್ಕೆ ಮುಹೂರ್ತ: ಲಾಂಛನ ಬಿಡುಗಡೆ ಮಾಡಿದ ಮುಖ್ಯಮಂತ್ರಿ

Update: 2020-01-10 23:33 IST

ಬೆಂಗಳೂರು, ಜ. 10: ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಸಾಮೂಹಿಕ ಮದುವೆಗಳನ್ನು ಪ್ರೋತ್ಸಾಹಿಸಲು ರಾಜ್ಯ ಸರಕಾರ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ 100 ‘ಎ’ ವರ್ಗದ ಆಯ್ದ ದೇವಸ್ಥಾನಗಳಲ್ಲಿ ‘ಸಪ್ತಪದಿ’ ಸಾಮೂಹಿಕ ವಿವಾಹಕ್ಕೆ ‘ಮುಹೂರ್ತ’ ನಿಗದಿಪಡಿಸಿದೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ‘ಸಪ್ತಪದಿ ಸಾಮೂಹಿಕ ವಿವಾಹ’ ಲಾಂಛನ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, 2020ರ ಎಪ್ರಿಲ್ 26 ಮತ್ತು ಮೇ 24ರಂದು ಸಾಮೂಹಿಕ ವಿವಾಹ ನಡೆಯಲಿದ್ದು, ವಧು-ವರರು ಕ್ರಮವಾಗಿ 2020ರ ಮಾರ್ಚ್ 27 ಮತ್ತು ಎಪ್ರಿಲ್ 24ರ ಒಳಗಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಪ್ರಕಟಿಸಿದರು.

ಉತ್ತಮ ಆದಾಯವಿರುವ ‘ಎ’ ವರ್ಗದ ನೂರು ದೇವಾಲಯಗಳಲ್ಲಿ ಸಾಮೂಹಿಕ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು(8 ಗ್ರಾಂ) ಸೇರಿದಂತೆ ವಧು-ವರರಿಗೆ 55 ಸಾವಿರ ರೂ.ಗಳನ್ನು ಉಚಿತವಾಗಿ ಸಂಬಂಧಿಸಿದ ಮುಜರಾಯಿ ದೇವಾಲಯದ ವತಿಯಿಂದ ನೀಡಲಾಗುವುದು ಎಂದರು.

ಬಾಲ್ಯ ವಿವಾಹಕ್ಕೆ ತಡೆ: ಇತ್ತೀಚಿನ ದಿನಗಳಲ್ಲಿ ಮದುವೆ ಖರ್ಚಿಗೆ ಹಲವು ಕುಟುಂಬಗಳು ಮನೆ-ಮಠ ಮಾರಾಟ ಮಾಡಿಕೊಂಡು ತೊಂದರೆಗೆ ಸಿಲುಕಿರುವುದು ಸರಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಜನರ ಅನುಕೂಲಕ್ಕೆ ನೂರು ಆಯ್ದ ದೇವಾಲಯಗಳಲ್ಲಿ ಪ್ರತಿವರ್ಷ ಸಾಮೂಹಿಕ ವಿವಾಹ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.

‘ಮದುವೆ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹಗಳು ಅವಶ್ಯಕವಾಗಿವೆ. ದೇವರ ಹಣ ಸದ್ಬಳಕೆ ಆಗಬೇಕೆಂಬುದು ಉದ್ದೇಶ. ಸಾಮೂಹಿಕ ವಿವಾಹಗಳಲ್ಲಿ ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಯಡಿಯೂರಪ್ಪ ಇದೇ ವೇಳೆ ಸ್ಪಷ್ಟನೆ ನೀಡಿದರು.

ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಸಪ್ತಪದಿ’ ತುಳಿಯುವ ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣಕ್ಕಾಗಿ 10 ಸಾವಿರ ರೂ, ಮತ್ತು ಚಿನ್ನದ ತಾಳಿ, ಎರಡು ಚಿನ್ನದ ಗುಂಡು ಖರೀದಿಗೆ 40 ಸಾವಿರ ರೂ. ಹಾಗೂ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯ ಖರೀದಿಗೆ 5ಸಾವಿರ ರೂ.ಸೇರಿ ಒಟ್ಟು 55ಸಾವಿರ ರೂ.ಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.

‘ಸಾಮೂಹಿಕ ವಿವಾಹಕ್ಕೆ ಆಗಮಿಸುವ ವಧು-ವರರು ಮತ್ತು ಅವರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಇತರೆ ಅವಶ್ಯಕ ವ್ಯವಸ್ಥೆ ಮಾಡಲು ತಗುಲುವ ವೆಚ್ಚಗಳನ್ನು ಸಂಬಂಧಿಸಿದ ದೇವಾಲಯದ ನಿಧಿಯಿಂದ ಭರಿಸಲಾಗುವುದು’ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್, ಆನಂದ್ ಗುರೂಜಿ, ಕಂದಾಯ ಇಲಾಖೆ ಕಾರ್ಯದರ್ಶಿ ಅನಿಲ್‌ಕುಮಾರ್, ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

‘ಸಪ್ತಪದಿ ಸಾಮೂಹಿಕ ವಿವಾಹ ಯಾವುದೇ ಒಂದು ಧರ್ಮಕ್ಕೆ ಸೀಮಿತವಲ್ಲ. ಮುಸ್ಲಿಮ್, ಕ್ರೈಸ್ತರು ಸೇರಿದಂತೆ ಯಾವುದೇ ಧರ್ಮದಲ್ಲೂ ಸಾಮೂಹಿಕ ವಿವಾಹಗಳ ಏರ್ಪಟ್ಟರೂ ರಾಜ್ಯ ಸರಕಾರ ಅಗತ್ಯ ಪ್ರೋತ್ಸಾಹ ನೀಡಲಿದೆ’

-ಯಡಿಯೂರಪ್ಪ, ಮುಖ್ಯಮಂತ್ರಿ

ನಟ ಯಶ್-ಸುಧಾಮೂರ್ತಿ ರಾಯಭಾರಿಗಳು

ಚಿತ್ರನಟ ಯಶ್ ಮತ್ತು ಇನ್ಫೋಸಿಸ್‌ನ ಸುಧಾಮೂರ್ತಿ ಅವರನ್ನು ‘ಸಪ್ತಪದಿ’ ಸಾಮೂಹಿಕ ವಿವಾಹಕ್ಕೆ ರಾಯಭಾರಿಗಳಾಗಿದ್ದು, ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ ಜನಪ್ರಿಯಗೊಳಿಸಲು ನೆರವಾಗಲಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News