ಕುಸ್ತಿಗೆ ಆಧುನಿಕ ಸ್ಪರ್ಶ ನೀಡಿದರೆ ಜನಮನ ಗೆಲ್ಲಲು ಸಾಧ್ಯ: ಸಚಿವ ಸಿ.ಟಿ.ರವಿ

Update: 2020-01-11 17:59 GMT

ಬಳ್ಳಾರಿ, ಜ.11: ಕುಸ್ತಿ ದೇಶದ ಪಾರಂಪರಿಕ ಕ್ರೀಡೆ. ಈ ಕುಸ್ತಿಗೆ ಪ್ರಾಚೀನತೆ ಜೊತೆಗೆ ಆಧುನಿಕ ಸ್ಪರ್ಶ ನೀಡಿದರೆ ಮುಂದಿನ ದಿನಗಳಲ್ಲಿ ‘ಪ್ರೋ ಕಬಡ್ಡಿ’ ಮಾದರಿಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜನಮನ ಗೆಲ್ಲಲು ಸಾಧ್ಯವಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ಶನಿವಾರ ಹಂಪಿ ಉತ್ಸವದ ನಿಮಿತ್ತ ಮಲಪನಗುಡಿ ಮೈದಾನದಲ್ಲಿ ಏರ್ಪಡಿಸಿದ್ದ ಕುಸ್ತಿ ಸ್ಪರ್ಧೆ, ಕಲ್ಲು ಗುಂಡೆತ್ತುವ ಮತ್ತು ಬಂಡಿಗಾಲಿ ಜೋಡಿಸುವ ಮತ್ತು ಬಿಡಿಸುವ ಸ್ಪರ್ಧೆಗೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ವಿಜಯನಗರ ಸಂಸ್ಥಾನದಲ್ಲಿ ಕುಸ್ತಿ ಸ್ಪರ್ಧೆ ಪ್ರಮುಖವಾಗಿತ್ತು. ಸ್ವತಃ ಶ್ರೀಕೃಷ್ಣ ದೇವರಾಯರೇ ಕುಸ್ತಿಪಟು ಆಗಿದ್ದರು. ಇಂದು ಅಳಿವಿನಂಚಿನಲ್ಲಿರುವ ಕುಸ್ತಿ ಸ್ಪರ್ಧೆಯನ್ನು ಹಂಪಿ ಉತ್ಸವ ಆಯೋಜಿಸಿ ಸ್ಥಳೀಯ ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧಾಳುಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಅವರು ಹೇಳಿದರು.

ಇನ್ನಷ್ಟು ಸಹಭಾಗಿತ್ವ ಇದ್ದರೇ ಪಂಚಾಯತ್ ನಿಂದ ಪಾರ್ಲಿಮೆಂಟಿವರೆಗಿನ ಜನಪ್ರತಿನಿಧಿಗಳು ತೊಡಗಿಸಿಕೊಂಡರೆ ಉತ್ಸವ ವಿಜೃಂಭಣೆಯಿಂದ ಆಗುತ್ತದೆ. ಈಗಲೂ ವಿಜೃಂಭಣೆಯಿಂದ ಆಗುತ್ತಿದೆ. ಮುಂದಿನ ವರ್ಷ ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲಾಗುವುದು ಹಾಗೂ ಎಲ್ಲರನ್ನೂ ತೊಡಗಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಹಂಪಿ ಉತ್ಸವ ಅನುದಾನ ನಿಗದಿ ಮೊದಲಗೊಂಡು ದಿನಾಂಕ ನಿಗದಿಪಡಿಸಿದರೇ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ವಹಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಕ್ರಮವಹಿಸಲಿದೆ ಎಂದು ಸಿ.ಟಿ.ರವಿ ತಿಳಿಸಿದರು.

ಸಂಶೋಧಕ ಚಿದಾನಂದಮೂರ್ತಿ ಕನ್ನಡ ನಾಡು-ನುಡಿಗೆ ಇಡೀ ಜೀವ ತ್ಯಾಗಕ್ಕೆ ಮುಂದಾಗಿದ್ದ ಮಹನೀಯರು. ನಮ್ಮ ನಾಡು-ನುಡಿ, ಸಂಸ್ಕ್ರತಿ, ಸ್ಮಾರಕಗಳು ಸಂರಕ್ಷಿಸುವುದಕ್ಕೆ ಮುಂದಾಗುವುದರ ಮೂಲಕ ಅವರಿಗೆ ನಿಜವಾದ ಶ್ರದ್ಧಾಂಜಲಿಯನ್ನು ನಾವು ಸಲ್ಲಿಸಬೇಕು ಎಂದು ಸಿ.ಟಿ.ರವಿ ಹೇಳಿದರು.

ಹಂಪಿಯಂತಹ ವೈಭವದ ವಿಜಯನಗರ ಸಾಮ್ರಾಜ್ಯದ ಸ್ಮಾರಕಗಳು ಸಂಶೋಧನೆಯಲ್ಲಿ ಹಾಗೂ ಸಂರಕ್ಷಣೆಯಲ್ಲಿ ಅವರು ವಹಿಸಿದ ಪಾತ್ರ ಅಪಾರವಾಗಿದೆ. ಗೋಕಾಕ್ ಚಳವಳಿಯಲ್ಲಿ ಅವರು ವಹಿಸಿದ ಪಾತ್ರ ಅಪಾರ, ಅವರ ನಿಧನದಿಂದ ಸಾಹಿತ್ಯ ಕ್ಷೇತ್ರ ಬಡವಾಗಿದೆ ಮತ್ತು ಸಂಶೋಧನಾ ಕ್ಷೇತ್ರ ಅನಾಥವಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಕುಲ್, ಅಪರ ಜಿಲ್ಲಾಧಿಕಾರಿ ಮಂಜುನಾಥ, ಪ್ರೊಬೆಷನರಿ ಐಎಎಸ್ ಅಧಿಕಾರಿ ಈಶ್ವರ್ ಕಾಂಡೂ, ಜಿಪಂ ಯೋಜನಾ ನಿರ್ದೇಶಕ ಚಂದ್ರಶೇಖರ ಗುಡಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಹರಿಸಿಂಗ್ ರಾಠೋಡ್ ಮತ್ತಿತರರು ಇದ್ದರು.

ಅಧಿವೇಶನಕ್ಕೆ ಮುಂಚೆ ಸಂಪುಟ ವಿಸ್ತರಣೆ

ಸಂಪುಟ ವಿಸ್ತರಣೆ ಖಂಡಿತ, ಯಾವಾಗ ಆಗುತ್ತದೆ ಎಂಬುದು ನಮಗೆ ಗೊತ್ತಿಲ್ಲ. ದೆಹಲಿ ಚುನಾವಣೆಯ ಆಚೆ ಈಚೆ ಸಂಪುಟ ವಿಸ್ತರಣೆ ಆಗಬಹುದು. ಫೆ.21ರಿಂದ 27 ಅಧಿವೇಶನ ಆರಂಭವಾಗುತ್ತದೆ. ಮಾರ್ಚ್ ಮೊದಲ ವಾರದಲ್ಲಿಯೇ ಬಜೆಟ್ ಅಧಿವೇಶನ ಆರಂಭವಾಗಲಿದೆ. ಅಷ್ಟರೊಳಗೆ ಸಂಪುಟ ವಿಸ್ತರಣೆ ಆಗಬಹುದು. ಯಾವುದೇ ಸಚಿವ ಸ್ಥಾನ ವಹಿಸಿದರೂ ನಾನು ಸಮರ್ಪಕವಾಗಿ ನಿಭಾಯಿಸುವೆ.

-ಸಿ.ಟಿ.ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News