ಮಧ್ವಮತ ಮತ್ತು ಕುವೆಂಪು ವಿಶ್ವಮಾನವತೆ

Update: 2020-01-12 05:31 GMT

ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ ಎಂದು ಸಂದೇಶ ನೀಡುವ ಮೂಲಕ ಆಸ್ತಿಕ ಸಮಾಜದ ಸಾಂಪ್ರದಾಯಿಕ ಸಂಕೋಲೆಗಳನ್ನು ಕಿತ್ತೆಸೆಯಲು ಕರೆ ನೀಡಿದ ರಾಷ್ಟ್ರಕವಿ ಕುವೆಂಪು ನೂರು ದೇವರುಗಳ ನೂಕಾಚೆ ದೂರ ಎಂದು ಹೇಳುವ ಮೂಲಕ ವೈಚಾರಿಕತೆಗೆ ಸುಭದ್ರ ಅಡಿಪಾಯವನ್ನು ನಿರ್ಮಿಸಿದ್ದರು.

ಕರ್ನಾಟಕದ ಸಾಕ್ಷಿ ಪ್ರಜ್ಞೆ ಎನ್ನಬಹುದಾದ ಮಹಾನ್ ಕವಿ ಸಾರ್ವಕಾಲಿಕ ಪ್ರಸ್ತುತತೆ ಪಡೆಯುವುದು ಅವರ ವಿಶ್ವಮಾನವ ಸಂದೇಶದ ಮೂಲಕ ಮತ್ತು ಅವರು ತಮ್ಮ ಕಾವ್ಯ, ನಾಟಕ, ಕಾದಂಬರಿ ಮತ್ತು ಉಪನ್ಯಾಸಗಳಲ್ಲಿ ಕಟ್ಟಿಕೊಟ್ಟ ಮನುಜಪಥದ ಸಂದೇಶದ ಮೂಲಕ. ಮನುಜ ಮತ ವಿಶ್ವ ಪಥ ಎನ್ನುವ ಅದ್ಭುತ ಸಂದೇಶದ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಸೌಹಾರ್ದತೆಯ ರಸಬೀಜ ಬಿತ್ತಿ ಹೋದ ಕುವೆಂಪು ಪ್ರಾತಃಸ್ಮರಣೀಯರಾಗುವುದು ಅವರು ಕಟ್ಟಿಕೊಟ್ಟ ಮಾನವೀಯ ವೌಲ್ಯಗಳಿಗಾಗಿ ಮತ್ತು ಮಾನವತೆಯ ಸೂಕ್ಷ್ಮ ಸಂವೇದನೆಗಳಿಗಾಗಿ. ಸಾಹಿತ್ಯದ ನೆಲೆಯಲ್ಲಿ ಕುವೆಂಪು ಕುರಿತ ವಿಮರ್ಶೆ, ಪರಾಮರ್ಶೆಗಳೇನೇ ಇದ್ದರೂ ಅದು ಸಾರಸ್ವತ ಲೋಕದ ಒಂದು ಆಯಾಮ. ವ್ಯಕ್ತಿಗತ ನೆಲೆಯಲ್ಲಿರಬಹುದಾದ ಆಕ್ಷೇಪಗಳು ಕುವೆಂಪು ಅವರ ಬದುಕಿನ ಒಂದು ಆಯಾಮ. ಆದರೆ ಇಂದು ಭಾರತೀಯ ಸಮಾಜ ಪರ್ವಕಾಲದಲ್ಲಿ ನಿಂತಿದೆ. ಮಾನವ ಸೂಕ್ಷ್ಮತೆಯನ್ನು ಪ್ರಶ್ನಿಸುವಂತಹ ಉದ್ವಿಗ್ನ ಪರಿಸ್ಥಿತಿಯಲ್ಲಿ ಮನುಜ ಸಂಬಂಧಗಳೇ ಛಿದ್ರವಾಗುತ್ತಿರುವ ವಿಷಮ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಮನುಕುಲದ ಬೇಲಿಗಳನ್ನು ಅಳಿಸಿ ಒಗ್ಗೂಡಿಸುವ ಒಂದು ಸಂದೇಶ ಅತ್ಯವಶ್ಯವಾಗಿದೆ. ಇಡೀ ವಿಶ್ವವನ್ನೇ ಒಂದು ಪುಟ್ಟ ಗ್ರಾಮವನ್ನಾಗಿ ಮಾಡುವ ಜಾಗತೀಕರಣದ ಮಾರುಕಟ್ಟೆಯ ಪರಿಕಲ್ಪನೆ ರೂಪುಗೊಳ್ಳುವ ಹಲವು ದಶಕಗಳ ಹಿಂದೆಯೆ ಬೌದ್ಧಿಕ ನೆಲೆಯಲ್ಲಿ, ಅಧ್ಯಾತ್ಮದ ನೆಲೆಯಲ್ಲಿ ವಿಶ್ವಮಾನವ ಸಂದೇಶವನ್ನು ಸಾರಿದ ಕುವೆಂಪು ಶ್ರೇಷ್ಠರಾಗಿ ನಿಲ್ಲುವುದು ಈ ಕಾರಣಕ್ಕಾಗಿಯೇ.

ಕಾಕತಾಳೀಯವೇನೋ ಎನ್ನುವಂತೆ ವಿಶ್ವಮಾನವ ಸಂದೇಶವಾಹಕನ ಜನುಮದಿನದಂದೇ ಕರ್ನಾಟಕದ ಮತಧಾರ್ಮಿಕ ಸಂತ ವಿಶ್ವೇಶತೀರ್ಥರು ಬದುಕಿಗೆ ವಿದಾಯ ಹೇಳಿದ್ದಾರೆ. ವಿಶ್ವೇಶತೀರ್ಥರು ಬದುಕಿದ್ದ ಸಂದರ್ಭದಲ್ಲಿ ಸಾರಿದ ಸಂದೇಶದ ಹಿಂದೆಯೂ ಮಾನವತೆಯ ಒಂದು ಆಯಾಮವನ್ನು ಕಾಣುವ ಮನಸುಗಳು ಹೇರಳವಾಗಿವೆ. ಅಸ್ಪಶ್ಯತೆಯ ನಿವಾರಣೆ, ಜಾತಿ ತಾರತಮ್ಯದ ಅಂತ್ಯ, ಸೌಹಾರ್ದ ವಾತಾವರಣದ ನಿರ್ಮಾಣ ಹೀಗೆ ಪೇಜಾವರರ ಏಳು ದಶಕಗಳ ಪಯಣದಲ್ಲಿ ಹಲವು ಪರ್ವಗಳನ್ನು ಎತ್ತಿ ತೋರುವ ಮೂಲಕ ಮಧ್ವಮತದ ಸಂತರು ಹೇಗೆ ತಮ್ಮ ಮತಧಾರ್ಮಿಕ ಚೌಕಟ್ಟುಗಳನ್ನು ಮೀರಿ, ಕರ್ಮಠರ ಟೀಕಾಸ್ತ್ರಗಳನ್ನು ಎದುರಿಸಿ ಸಮಾಜದ ಒಳಿತಿಗಾಗಿ ಶ್ರಮಿಸಿದರು ಎಂದು ವಿಶ್ಲೇಷಿಸಲಾಗುತ್ತಿದೆ. ಯತಿವರ್ಯರ ಸಾವು ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಎಷ್ಟು ಕದಡಿಬಿಟ್ಟಿದೆ ಎಂದರೆ ಈ ಪ್ರಜ್ಞೆಯನ್ನು ಬಿಂಬಿಸಬೇಕಾದ ದೃಶ್ಯಮಾಧ್ಯಮಗಳಿಗೆ ವಿಶ್ವೇಶತೀರ್ಥರ ಸ್ತುತಿಯ ನಡುವೆ ವಿಶ್ವಮಾನವತೆಯ ನೆನಪೂ ಆಗಲಿಲ್ಲ. ಶವಯಾತ್ರೆಗಳನ್ನು ನೇರ-ದಿಟ್ಟ-ನಿರಂತರ-24ಗಿ

7 ಪ್ರಸಾರ ಮಾಡುವ ಅತ್ಯಾಧುನಿಕ ಪರಂಪರೆಗೆ ಒಗ್ಗಿಹೋಗಿರುವ ಕನ್ನಡ ವಾಹಿನಿಗಳಲ್ಲಿ ಪ್ರವಹಿಸಿದ ಕಂಬನಿಯ ಕೋಡಿ ವಿಶ್ವೇಶತೀರ್ಥರ ಬದುಕನ್ನೇ ಮುಳುಗಿಸುವಷ್ಟು ಎತ್ತರಕ್ಕೇರಿತ್ತು. ಆದರೆ ವಿಶ್ವಮಾನವನ ಪ್ರಜ್ಞೆ ಕೆಲವೇ ಸಭಾಂಗಣಗಳಲ್ಲಿ, ಪ್ರತಿಮೆಗಳ ಮುಂದೆ, ಶಾಮಿಯಾನಗಳ ಕೆಳಗೆ ಕಳೆದುಹೋಗಿತ್ತು. ಮರುದಿನ ಪತ್ರಿಕೆಗಳೂ ತೀರ ಭಿನ್ನವಾಗೇನೂ ಇರಲಿಲ್ಲ. ಜನಪ್ರಿಯತೆಯೇ ಸಾರ್ವಜನಿಕ ಪ್ರಜ್ಞೆಯ ಮಾನದಂಡವಾಗಿರುವ ಸಂದರ್ಭದಲ್ಲಿ ಇದೇನು ಅಚ್ಚರಿ ಮೂಡಿಸುವ ಸಂಗತಿಯಲ್ಲ. ಇಲ್ಲಿ ಮುಖಾಮುಖಿಯಾಗಬೇಕಿರುವುದು ಮಾನವತೆಯ ಪರಿಕಲ್ಪನೆ, ವಿಶ್ವಮಾನವ ಸಂದೇಶದ ಸಾರಸತ್ವ ಮತ್ತು ಸಮಾಜಮುಖಿ ಚಿಂತನೆ. ಇಲ್ಲಿ ಅನುಸಂಧಾನ ನಡೆಸಬೇಕಿರುವುದು ಸಮಾಜೋ ಸಾಂಸ್ಕೃತಿಕ ಪ್ರಜ್ಞೆಯೊಡನೆ ಮತ್ತು ಈ ಪ್ರಜ್ಞೆಯನ್ನು ಬಿಂಬಿಸುವ ಸಾಕ್ಷಿಪ್ರಜ್ಞೆಯೊಡನೆ. ಈ ಸಾಕ್ಷಿ ಪ್ರಜ್ಞೆಯನ್ನು ಯಾರಲ್ಲಿ ಕಂಡುಕೊಳ್ಳಲು ಸಾಧ್ಯ? ಈ ಪ್ರಶ್ನೆಗೆ ಉತ್ತರ ಶೋಧಿಸಿದರೆ ನಮ್ಮೆಳಗಿನ ಮಾನವತೆಯ ಪ್ರಜ್ಞೆ ಯಾವ ಹಾದಿಯಲ್ಲಿದೆ ಎಂದು ಸ್ಪಷ್ಟವಾಗುತ್ತದೆ. ಕರ್ಮಠ ಬ್ರಾಹ್ಮಣ್ಯ ಮತ್ತು ವೈದಿಕ ಸಂಪ್ರದಾಯದ ಕಟ್ಟುಪಾಡುಗಳನ್ನು ಪಾಲಿಸುತ್ತಲೇ ಸಮಾಜದ ಹುಳುಕುಗಳನ್ನು ಸರಿಪಡಿಸಲು ಮುಂದಾದ ಒಬ್ಬ ಮಠಾಧೀಶರನ್ನು ಅವರ ಮರಣಾನಂತರ ಭಾರತ ಕಂಡ ಶ್ರೇಷ್ಠ ಸಮಾಜ ಸುಧಾರಕರು ಎನ್ನುವಂತೆ ಬಿಂಬಿಸುವುದನ್ನು ನೋಡಿದರೆ ಈ ಪ್ರಶ್ನೆ ಮತ್ತಷ್ಟು ವೌಲ್ಯಯುತವಾಗುತ್ತದೆ. ಸ್ಥಾಪಿತ ವ್ಯವಸ್ಥೆಯನ್ನು, ಸ್ವೀಕೃತ ಸಂಪ್ರದಾಯಗಳನ್ನು, ಒಪ್ಪಿತ ಕಟ್ಟುಪಾಡುಗಳನ್ನು ಭೇದಿಸಿ ನವ ಸಮಾಜ ನಿರ್ಮಿಸುವ ಕನಸು ಹೊತ್ತವರು ಅದೇ ವ್ಯವಸ್ಥೆಯನ್ನು ಜರಡಿ ಹಿಡಿಯುತ್ತಾ, ಸಂಪ್ರದಾಯದೊಳಗಿನ ಜೊಳ್ಳು, ಕಾಳು ಕಸ ಕಡ್ಡಿಗಳನ್ನು ಬೇರ್ಪಡಿಸಿ, ಕಟ್ಟುಪಾಡುಗಳಿಗೆ ಹೊಂದಿಸುವಂತೆ ಸರಿಪಡಿಸುವುದಿಲ್ಲ. ಇದು ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯಾಗಿ ಕಾಣುವುದೇ ಹೊರತು ಕ್ರಾಂತಿಕಾರಿ ಪರಿವರ್ತನೆಯಂತೆ ಕಾಣುವುದಿಲ್ಲ.

ಇಲ್ಲಿ ಕುವೆಂಪು ಉತ್ಕೃಷ್ಟ ವ್ಯಕ್ತಿಯಾಗಿ ಕಾಣುತ್ತಾರೆ. ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ ಎಂದು ಸಂದೇಶ ನೀಡುವ ಮೂಲಕ ಆಸ್ತಿಕ ಸಮಾಜದ ಸಾಂಪ್ರದಾಯಿಕ ಸಂಕೋಲೆಗಳನ್ನು ಕಿತ್ತೆಸೆಯಲು ಕರೆ ನೀಡಿದ ರಾಷ್ಟ್ರಕವಿ ಕುವೆಂಪು ನೂರು ದೇವರುಗಳ ನೂಕಾಚೆ ದೂರ ಎಂದು ಹೇಳುವ ಮೂಲಕ ವೈಚಾರಿಕತೆಗೆ ಸುಭದ್ರ ಅಡಿಪಾಯವನ್ನು ನಿರ್ಮಿಸಿದ್ದರು. ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ತಾತ್ವಿಕ ನೆಲೆಯಲ್ಲಿಟ್ಟು ನೋಡಿದಾಗ ಪರಸ್ಪರ ಪೂರಕ ವಿದ್ಯಮಾನಗಳಾಗಿ ಕಾಣುತ್ತವೆ. ಸಾಂಪ್ರದಾಯಿಕ ಧೋರಣೆಯನ್ನು ಹೊಂದಿದ್ದವರಲ್ಲೂ ಕೆಲವೊಮ್ಮೆ ವೈಚಾರಿಕತೆಯ ಸುಳಿವು ಕಾಣುತ್ತದೆ. ಆದರೆ ಸಮ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಈ ವೈಚಾರಿಕತೆ ಸಂಪೂರ್ಣವಾಗಿ ನೆರವಾಗುವುದಿಲ್ಲ. ಸಿದ್ಧ ಸೂತ್ರಗಳ ಮೂಲಕ ಚಾಲ್ತಿಯಲ್ಲಿರುವ ವೌಲ್ಯಗಳ ಚೌಕಟ್ಟಿನಲ್ಲೇ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಲು ನೆರವಾಗುವುದಷ್ಟೆ. ಭಾರತದ ಸಂದರ್ಭದಲ್ಲಿ ಇದು ಅವಶ್ಯವೇ ಆದರೂ, ಸಂಪ್ರದಾಯ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ಮಾನವೀಯ ವೌಲ್ಯಗಳನ್ನೇ ಕಳೆದುಕೊಳ್ಳುತ್ತಿರುವ ಸಮಾಜದಲ್ಲಿ ಇದು ಸಹಕಾರಿಯಾಗುವುದಿಲ್ಲ. ಭಾರತ ಇಂದು ಅಂತಹ ಕಾಲಘಟ್ಟದಲ್ಲಿದೆ. ಭಾರತೀಯ ಸಮಾಜವನ್ನು ಕಾಡುತ್ತಿರುವ ಜಾತಿ ವ್ಯವಸ್ಥೆ, ಅಸ್ಪಶ್ಯತೆ ಮತ್ತು ಸ್ತ್ರೀವಿರೋಧಿ ಧೋರಣೆಯನ್ನು ಯಾವುದೋ ಒಂದು ಮತಧರ್ಮದ ಚೌಕಟ್ಟಿನಲ್ಲಿ ಕುಳಿತು ಅಳಿಸಿ ಹಾಕಲಾಗುವುದಿಲ್ಲ.

ಮಧ್ವ ಮತವನ್ನು ವಿಶ್ವಪಥವೆಂದು ಭಾವಿಸುವ ವಿಶ್ವೇಶತೀರ್ಥರು ಈ ಪ್ರಯತ್ನವನ್ನು ಮಾಡಿರುವ ಹಿನ್ನೆಲೆಯಲ್ಲಿ ಅವರನ್ನು ಕ್ರಾಂತಿಕಾರಿ ಸಂತ, ರಾಷ್ಟ್ರ ಸಂತ, ಯುಗಾಂತರದ ಯತಿ ಎಂದೆಲ್ಲಾ ಬಣ್ಣಿಸಲಾಗುತ್ತಿದೆ. ದಲಿತರ ದೇವಾಲಯ ಪ್ರವೇಶ, ದಲಿತ ಕೇರಿಯಲ್ಲಿ ಪಾದಯಾತ್ರೆ, ಉಡುಪಿ ಮಠದಲ್ಲಿ ಮುಸ್ಲಿಮರಿಗೆ ಭೋಜನಕೂಟ ಇಂತಹ ಸಾಂಕೇತಿಕ ಪ್ರತಿರೋಧಗಳು ನಾಗರಿಕ ಸಮಾಜದಲ್ಲಿ ಸಂಚಲನ ಮೂಡಿಸುವುದು ಸಹಜ. ಕರ್ಮಠ ಬ್ರಾಹ್ಮಣ್ಯದ ಮಠಾಧೀಶರೊಬ್ಬರು ಇಂತಹ ದಿಟ್ಟ ಕ್ರಮಗಳನ್ನು ಕೈಗೊಂಡಾಗ ಸಹಜವಾಗಿಯೇ ಉಘೇಉಘೆೀ ಉಕ್ಕಿಹರಿಯುತ್ತದೆ.

 ಇಂತಹ ದಿಟ್ಟ ನಡೆಯನ್ನು ಸ್ವಾಗತಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಒಂದು ದಲಿತ ಕೇರಿಯಲ್ಲಿನ ಪಾದಯಾತ್ರೆ, ಒಂದು ಭೋಜನ ಕೂಟ, ಒಂದು ದೇವಾಲಯ ಪ್ರವೇಶ ಸಮಾಜದ ಮನಸ್ಥಿತಿಯನ್ನು ಬದಲಿಸುವುದಿಲ್ಲ.ಸಮಾಜ ಸುಧಾರಣೆಯ ನಿಟ್ಟಿನಲ್ಲಿ ಇಂತಹ ಸಾಂಕೇತಿಕ ಪ್ರತಿರೋಧಗಳು ಸಮಾಜದ ಒಂದು ವರ್ಗಕ್ಕೆ ಅಪ್ಯಾಯಮಾನವಾಗಿ ಕಾಣುತ್ತದೆ. ವರ್ಣಾಶ್ರಮ ಧರ್ಮವನ್ನು ನಿರಾಕರಿಸದೆ ಅಸ್ಪಶ್ಯತೆಯ ವಿರುದ್ಧ ಅವಿರತ ಹೋರಾಡಿದ ಗಾಂಧಿ ಇದೇ ತಂತ್ರವನ್ನು ಅನುಸರಿಸಿದ್ದರು. ಈ ಸುಧಾರಣೆಯ ಮಾರ್ಗಗಳಲ್ಲಿ ಸ್ಥಾಪಿತ ವ್ಯವಸ್ಥೆಯನ್ನು ಮತ್ತು ಈ ವ್ಯವಸ್ಥೆ ಪ್ರತಿಪಾದಿಸುವ ಸಮಾಜೋ ಸಾಂಸ್ಕೃತಿಕ ವೌಲ್ಯಗಳನ್ನು ಯಥಾಸ್ಥಿತಿಯಲ್ಲಿ ಕಾಪಾಡುವ ಒಳಸುಳಿ ಇರುವುದನ್ನು ಗಮನಿಸಬೇಕಾಗುತ್ತದೆ.

ವರ್ಷಕ್ಕೆ ಹತ್ತು ಸಾವಿರ ಬಂಧುಗಳನ್ನು ಕಳೆದುಕೊಳ್ಳುತ್ತಿರುವ ಭಾರತದ ಲಕ್ಷಾಂತರ ಸ್ವಚ್ಛತಾ ಕಾರ್ಮಿಕರಿಗೆ ತಲೆಯ ಮೇಲೆ ಮಲ ಹೊರುವ, ಮಲಗುಂಡಿಗಳಲ್ಲಿ ಇಳಿದು ಸ್ವಚ್ಛಗೊಳಿಸುವ ಕಾಯಕದಿಂದ ಮುಕ್ತಿ ನೀಡಲು ಸಾಧ್ಯವಾಗದವರು ಐವರು ಸ್ವಚ್ಛತಾ ಕಾರ್ಮಿಕರ ಪಾದ ಪೂಜೆ ಮಾಡಿದ್ದನ್ನು ನೋಡಿದ್ದೇವೆ. ಇದನ್ನು ಒಂದು ಸಿದ್ಧಸೂತ್ರದ ರೂಪಕ ಎಂದು ಭಾವಿಸಿ, ದಲಿತ ಕೇರಿಯ ಪಾದಯಾತ್ರೆಯನ್ನು ಸಮೀಕರಿಸಿದಾಗ ಮತಧರ್ಮ ಸೂಕ್ಷ್ಮತೆಯ ಅರಿವಾಗುತ್ತದೆ. ನಾವು ನಿಮ್ಮೆಡನಿದ್ದೇವೆ ಎಂಬ ಸಂದೇಶ ಸಾಂಕೇತಿಕವಾದರೆ ನಮ್ಮ ಮತ್ತು ಅವರ ನಡುವಿನ ಅಂತರ ಯಥಾಸ್ಥಿತಿಯಲ್ಲಿರುತ್ತದೆ. ಇಲ್ಲಿ ನಮ್ಮಿಳಗಿನ ತಪ್ಪುಗಳನ್ನು ಒಪ್ಪುವ ಔದಾರ್ಯದ ನೆರಳಲ್ಲೇ ಪಾಪಪ್ರಜ್ಞೆಯನ್ನು ಕಳೆದುಕೊಳ್ಳುವ ಹಪಹಪಿ ಎದ್ದು ಕಾಣುತ್ತದೆ. ಆದರೆ ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ, ಕರ್ಮಠ ಬ್ರಾಹ್ಮಣ್ಯದ ವಿಕೃತಿಗಳು ಇಂದಿಗೂ ಜೀವಂತವಾಗಿರುವ ಹೊತ್ತಿನಲ್ಲಿ ಮಾನವ ಪ್ರಜ್ಞೆಯನ್ನು ಉದ್ದೀಪನಗೊಳಿಸುವುದು ಮುಖ್ಯವಾಗುವುದೇ ಹೊರತು, ವ್ಯಕ್ತಿಗತ ನೆಲೆಯಲ್ಲಿ ಪಾಪಪ್ರಜ್ಞೆಯನ್ನು ತೊಳೆದುಕೊಳ್ಳುವುದಲ್ಲ. ಆದಾಗ್ಯೂ ಇಂತಹ ಸಾಂಕೇತಿಕ ಪಾಪ ನಿವೇದನೆಯ ಕ್ರಮಗಳು ಈ ದೇಶದ ಶೋಷಿತರಿಗೆ ಆಕರ್ಷಣೀಯವಾಗಿ ಕಾಣುತ್ತದೆ. ಅಂಬೇಡ್ಕರ್ ಭಾರತೀಯ ಸಮಾಜದ ಈ ದೌರ್ಬಲ್ಯವನ್ನು ಅರಿತಿದ್ದುದರಿಂದಲೇ ಜಾತಿವಿನಾಶದ ಪಣ ತೊಡುತ್ತಾರೆ. ವೈದಿಕ ಹಿಂದೂಧರ್ಮವನ್ನು ತಿರಸ್ಕರಿಸುತ್ತಾರೆ. ಮಾನವತೆಯನ್ನು ಮೊೆಯುವ ಬೌದ್ಧ ಚಿಂತನೆಯನ್ನು ಅಪ್ಪಿಕೊಳ್ಳುತ್ತಾರೆ. ಕುವೆಂಪು ಪ್ರತಿಪಾದಿಸುವ ವಿಶ್ವಮಾನವತೆ ಮತ್ತು ವೈಚಾರಿಕತೆ ಈ ಮಾರ್ಗದಲ್ಲಿ ಸಾಗುತ್ತದೆ, ಸಾಗಬೇಕಿದೆ.

ದಲಿತ ಸಮುದಾಯವನ್ನು ಅಪ್ಪಿಕೊಳ್ಳುವ ಪಾದಯಾತ್ರೆ, ಪಾದಪೂಜೆಯ ಪ್ರಹಸನಗಳು ದಲಿತರನ್ನು, ಅಸ್ಪಶ್ಯ ಸಮುದಾಯಗಳನ್ನು ಹಿಂದೂ ಧರ್ಮದ ಚೌಕಟ್ಟಿನಲ್ಲೇ ಹಿಡಿದಿಡುವ ರಣತಂತ್ರವಾಗಿರುವುದರಿಂದಲೇ ಊನ ಘಟನೆ ಸಂಸ್ಕೃತಿ ಪರಿಚಾರಕರ ನಿದ್ರಾಭಂಗ ಮಾಡುವುದಿಲ್ಲ. ದಲಿತ ಕೇರಿಗಳ ದಹನ ಮನ ಕಲಕುವುದಿಲ್ಲ. ದಲಿತರ ಮೇಲಿನ ಮಾರಣಾಂತಿಕ ಹಲ್ಲೆಗಳು ಪ್ರಜ್ಞೆಯನ್ನು ಕದಡುವುದಿಲ್ಲ. ಹಾಗಾಗಿಯೇ ಮುಸ್ಲಿಮರೊಂದಿಗೆ ಇಫ್ತಾರ್ ಭೋಜನ ಸವಿಯುವ ಪೇಜಾವರರಿಗೆ ಬಾಬರಿ ಮಸೀದಿಯ ಧ್ವಂಸದ ನಂತರ ನಡೆದ ಹತ್ಯೆಗಳು ನಗಣ್ಯ ಎನಿಸಿಬಿಟ್ಟಿತು. ಗುಜರಾತ್ ದಂಗೆಯಲ್ಲಿ ಅಸಂಖ್ಯಾತ ಅಮಾಯಕ ಜೀವಗಳ ಹರಣ ಅನಿವಾರ್ಯವೆನಿಸಿಬಿಟ್ಟಿತು. ಮನುಜ ಸ್ಪರ್ಶವನ್ನೇ ಬಯಸದ ಮನಸುಗಳು ನೆಲಸ್ಪರ್ಶದ ಮೂಲಕ ಅಸ್ಪಶ್ಯತೆಯನ್ನು ಹೋಗಲಾಡಿಸುವುದಾದರೂ ಹೇಗೆ ? ಹಾಗೊಮ್ಮೆ ಮನುಜ ಸ್ಪರ್ಶವನ್ನು ಬಯಸುವುದೇ ಆದರೆ ನೆಲ ಸ್ಪರ್ಶದ ಅವಶ್ಯಕತೆಯೇ ಉದ್ಭವಿಸುವುದಿಲ್ಲ ಅಲ್ಲವೇ? ಈ ಪ್ರಶ್ನೆ ನಮ್ಮನ್ನು ಕಾಡಲೇಬೇಕಿದೆ. ಜಾತಿ ವ್ಯವಸ್ಥೆಯ ಕ್ರೌರ್ಯ ಅಡಗಿರುವುದು ಸ್ಥಾವರಗಳಿಗಿಂತಲೂ ಹೆಚ್ಚಾಗಿ ಜಂಗಮ ಸ್ವರೂಪಿ ಮನಸುಗಳಲ್ಲಿ ಅಲ್ಲವೇ? ಈ ಮನಸುಗಳನ್ನು ಸರಿಪಡಿಸಬೇಕೆಂದರೆ ಕ್ರೌರ್ಯದಿಂದ ಮುಕ್ತರಾಗಬೇಕು. ಈ ಕ್ರೌರ್ಯವನ್ನು ಸಮಾಜದ ಎಲ್ಲ ಸ್ತರಗಳಲ್ಲೂ ತೊಡೆದುಹಾಕುವ ದೃಢ ಸಂಕಲ್ಪ ನಮ್ಮದಾಗಬೇಕು. ಇದು ಪಾದಸ್ಪರ್ಶ ಅಥವಾ ಪಾದಗಳ ನೆಲಸ್ಪರ್ಶದಿಂದಾಗುವ ಕೆಲಸವಲ್ಲ. ಅಸ್ಪಶ್ಯರನ್ನು ಸ್ಪರ್ಶಿಸುವುದಕ್ಕೂ ಅಸ್ಪಶ್ಯತೆಯನ್ನು ತೊಡೆದುಹಾಕುವುದಕ್ಕೂ ಅಪಾರ ಅಂತರವಿದೆ. ದೈಹಿಕ ಸ್ಪರ್ಶ ಆ ಕ್ಷಣದ ಪಾಪ ನಿವೇದನೆಯಾಗಿ ಮರುಕ್ಷಣದಲ್ಲೇ ನಿಷಕ್ರೆಿಯವಾಗಿಬಿಡುತ್ತದೆ. ಬೌದ್ಧಿಕ ಸ್ಪರ್ಶ ಶಾಶ್ವತವಾಗಿ ಮನದಾಳದಲ್ಲಿ ನೆಲೆಯೂರುತ್ತದೆ. ಈ ಬೌದ್ಧಿಕ ಸ್ಪರ್ಶವನ್ನು ಸಾಧಿಸಬೇಕೆಂದರೆ ವೈಜ್ಞಾನಿಕ ಮನೋಧರ್ಮ ಮತ್ತು ವೈಚಾರಿಕ ಚಿಂತನೆ ಅತ್ಯಗತ್ಯ. ಕರ್ಮಠ ವಿಧಿವಿಧಾನಗಳನ್ನು ಅನುಸರಿಸುತ್ತಲೇ ಬೌದ್ಧಿಕ ಸ್ಪರ್ಶದ ಅನುಭಾವಕ್ಕಾಗಿ ಹಾತೊರೆಯುವುದು ಹೊಳೆಯಲ್ಲಿ ಹುಣಿಸೆ ತೊಳೆದಂತಾಗುತ್ತದೆ. ಬಾರತಕ್ಕೆ ಇಂದು ಬೇಕಿರುವುದು ಈ ಬೌದ್ಧಿಕ ಸ್ಪರ್ಶದ ಅನುಭಾವ. ಭಾರತದಲ್ಲಿ ಇಂದು ಕೊರತೆ ಇರುವುದು ಈ ಬೌದ್ಧಿಕ ಸ್ಪರ್ಶದ ಮನಸ್ಥಿತಿ. ಈ ಮನಸ್ಥಿತಿಯನ್ನು ಸರಿಪಡಿಸಲು ಬೇಕಿರುವುದು ವಿಚಾರಕ್ರಾಂತಿಯೇ ಹೊರತು ಸಾಂಕೇತಿಕ ಪ್ರತಿರೋಧದ ಪಾಪನಿವೇದನೆಗಳಲ್ಲ. ಡಾ.ಬಿ.ಆರ್. ಅಂಬೇಡ್ಕರ್ ಕನಸಿನ, ಜಾತಿ ಪ್ರಜ್ಞೆ ಇಲ್ಲದ ಸಮ ಸಮಾಜದ ನಿರ್ಮಾಣಕ್ಕಾಗಿ, ಕುವೆಂಪು ಕನಸಿನ ವಿಶ್ವಮಾನವತೆಯ ಸಮಾಜದ ನಿರ್ಮಾಣಕ್ಕಾಗಿ ವೈಚಾರಿಕ ನೆಲೆಯ ವೈಜ್ಞಾನಿಕ ಮನೋಧರ್ಮ ಮುಖ್ಯವಾಗುತ್ತದೆ. ಯಾವುದೇ ಒಂದು ಮತಧಾರ್ಮಿಕ ಚೌಕಟ್ಟಿನಲ್ಲಿದ್ದರೂ ಈ ಮನೋಧರ್ಮ ದಕ್ಕುವುದು ಸಾಧ್ಯವಿಲ್ಲ. ಏಕೆಂದರೆ ಮತಧರ್ಮಗಳ ಆಚರಣೆಗಳಲ್ಲಿ, ವಿಧಿವಿಧಾನಗಳಲ್ಲಿ, ಆರಾಧನಾ ಸಂಸ್ಕೃತಿಯಲ್ಲಿ ಮಾನವನ ಅಭಿವ್ಯಕ್ತಿ ಯಾವುದೋ ಒಂದು ಸೂತ್ರದಲ್ಲಿ ಬಂಧಿಯಾಗಿರುತ್ತದೆ. ಬದಲಾವಣೆಗೂ ಪರಿವರ್ತನೆಗೂ ವ್ಯತ್ಯಾಸ ಇರುವಂತೆಯೇ ಸುಧಾರಣೆಗೂ ಕ್ರಾಂತಿಗೂ ವ್ಯತ್ಯಾಸ ಇರುತ್ತದೆ ಎನ್ನುವುದನ್ನು ನಮ್ಮ ಸಮಾಜ ಗ್ರಹಿಸಬೇಕಿದೆ. ಸ್ಥಾಪಿತ ವ್ಯವಸ್ಥೆಯನ್ನು ಸರಿಪಡಿಸಬೇಕೆಂದರೆ ಕ್ರಾಂತಿಕಾರಿ ಹೆಜ್ಜೆಗಳು ಮುಖ್ಯವಾಗುತ್ತವೆ. ಸುಧಾರಣಾ ಕ್ರಮಗಳು ತಾತ್ಕಾಲಿಕ ಶಮನವಾಗಿ ಅಂತ್ಯವಾಗುತ್ತವೆ. ಭಾರತದ ಸಂದರ್ಭದಲ್ಲಿ ಜಾತಿ ಪ್ರಜ್ಞೆ ಮತ್ತು ಶ್ರೇಷ್ಠತೆಯ ಅಹಮಿಕೆ ಇಂದಿಗೂ ಜೀವಂತವಾಗಿ, ಸಕ್ರಿಯವಾಗಿ, ಆಕ್ರಮಣಕಾರಿಯಾಗಿ ಗುಪ್ತವಾಹಿನಿಯಂತೆ ಪ್ರವಹಿಸುತ್ತಿರುವುದರಿಂದ ಯಾವುದೇ ಸುಧಾರಣಾ ಕ್ರಮಗಳು ಮನಸ್ಥಿತಿಯನ್ನು ಪರಿವರ್ತಿಸಲಾಗುವುದಿಲ್ಲ. ದಿಟ್ಟ ಕ್ರಾಂತಿಕಾರಿ ಹೆ್ಜೆಯಿಂದ ಮಾತ್ರವೇ ಮನಸ್ಥಿತಿ ಬದಲಾಗಲು ಸಾಧ್ಯ. ಈ ಬೌದ್ಧಿಕ ಕ್ರಾಂತಿಯಿಂದ ಮಾತ್ರವೇ ಮಹಿಳೆಯರು ದೌರ್ಜನ್ಯದಿಂದ , ದಲಿತರು ಅಸ್ಪಶ್ಯತೆಯ ಕ್ರೌರ್ಯದಿಂದ, ಅವಕಾಶವಂಚಿತರು ಶೋಷಣೆಯಿಂದ, ಅಲ್ಪಸಂಖ್ಯಾತರು ಕೋಮು ವಿಷಜ್ವಾಲೆಯಿಂದ ಮುಕ್ತರಾಗಲು ಸಾಧ್ಯ. ಈ ಬೌದ್ಧಿಕ ಕ್ರಾಂತಿಗೆ ಕುವೆಂಪು ಅವರ ಮನುಜ ಮತ ವಿಶ್ವ ಪಥ ವೈಚಾರಿಕತೆಯ ಹೆದ್ದಾರಿಯನ್ನು ನಿರ್ಮಿಸಲು ನೆರವಾಗುತ್ತದೆ. ವಿಶ್ವೇಶ ತೀರ್ಥರ ಮಧ್ವ ಮತ ಮನುಜ ಪಥ ಈ ಹೆದ್ದಾರಿಯ ನಡುವೆಯೇ ಕವಲು ಹಾದಿಗಳನ್ನು ನಿರ್ಮಿಸಿ ದಿಗಂತವನ್ನು ಮರೆಮಾಚುತ್ತದೆ.

 ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರಿ ಚಲಿಸಬೇಕಾದ ಮನುಕುಲ ಇಂದು ಗುಡಿ, ಚರ್ಚು, ಮಸೀದಿಗಳ ಬಿಟ್ಟು ಬಂದು ವೈಚಾರಿಕತೆಯ ನೆಲೆಯಲ್ಲಿ ತನ್ನ ಸಾರ್ಥಕತೆಯನ್ನು ಕಂಡುಕೊಳ್ಳಬೇಕಿದೆ. ಈ ಅಂಶವನ್ನು ಕನ್ನಡ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಕನ್ನಡದ ಮನಸುಗಳು ಅರಿತಿದ್ದಲ್ಲಿ ಡಿಸೆಂಬರ್ 29ರಂದು ಟಿ.ವಿ. ಪರದೆಗಳಿಂದ ಕುವೆಂಪು ಸಂಪೂರ್ಣ ಮರೆಯಾಗುತ್ತಿರಲಿಲ್ಲ.

Writer - ನಾ ದಿವಾಕರ

contributor

Editor - ನಾ ದಿವಾಕರ

contributor

Similar News