ಸಂಖ್ಯೆಗಳು ಇಲ್ಲದಿದ್ದರೆ ಏನಾಗುತ್ತಿತ್ತು?

Update: 2020-01-12 07:15 GMT

ಶಶಾಂಕ ಹೊಂವರ್ಕ್‌ನ ಭಾಗವಾಗಿ ಮಗ್ಗಿ ಬರೆಯುವಾಗ ಸಂಖ್ಯೆಗಳನ್ನು ಬರೆದು ಬರೆದು ಸುಸ್ತಾಗಿದ್ದ. ಈ ಸಂಖ್ಯೆಗಳನ್ನು ಯಾಕಾದ್ರೂ ಕಂಡುಹಿಡಿದ್ರೋ ಎಂದು ಗೊಣಗಾಡಿದ. ಇವನ ಮಾತು ಕೇಳಿಸಿಕೊಂಡ ತಂದೆ ಏನೋ ಅದು ಗೊಣಗಾಡೋದು?ಎಂದರು. ಏನಿಲ್ಲಪ್ಪ ದಿನವೂ ಇದೇ ಸಂಖ್ಯೆಗಳನ್ನು ಬರೆದು ಬರೆದು ಸಾಕಾಗಿದೆ. ಸಂಖ್ಯೆಗಳು ಇರದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ನೋಡು ಎನ್ನುತ್ತಾ ಮತ್ತೊಂದು ಪ್ರಶ್ನೆ ಹಾಕಿದ. ಪಪ್ಪಾ, ಈ ಸಂಖ್ಯೆಗಳು ಇಲ್ಲದಿದ್ದರೆ ಏನಾಗುತ್ತಿತ್ತು? ಎಂದನು. ಮಗನ ಮಾತಿಗೆ ತಂದೆ ಬೆಚ್ಚಿ ಬಿದ್ದರು. ಇದು ಕೇವಲ ಶಶಾಂಕನ ಪ್ರಶ್ನೆ ಮಾತ್ರವಲ್ಲ. ಸಂಖ್ಯೆಗಳು ಹಾಗೂ ಗಣಿತವನ್ನು ದ್ವೇಷಿಸುವ ಪ್ರತಿಯೊಬ್ಬರೂ ಹೀಗೇ ಹೇಳುತ್ತಾರೆ. ಆದರೆ ನಮ್ಮ ನಿತ್ಯ ಜೀವನದಲ್ಲಿ ಸಂಖ್ಯೆಗಳು ಹಾಗೂ ಗಣಿತದ ಪ್ರಾಮುಖ್ಯತೆ ನಿಜವಾಗಿಯೂ ಅವರಿಗೆ ತಿಳಿದಿಲ್ಲವೆಂಬುದನ್ನು ಗಮನಿಸಬಹುದು.

ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ವಿವಿಧ ಸಂದರ್ಭ ಹಾಗೂ ಸನ್ನಿವೇಶಗಳಲ್ಲಿ ಸಂಖ್ಯೆಗಳನ್ನು ಬಳಸುತ್ತಲೇ ಇರುತ್ತೇವೆ. ಪ್ರತಿ ಘಟನೆಯಲ್ಲೂ ಸಂಖ್ಯೆಗಳು ಹಾಸುಹೊಕ್ಕಾಗಿವೆ. ಯಾವುದೇ ರೀತಿಯಿಂದ ಯೋಚಿಸಿದರೂ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಸಂಖ್ಯೆಗಳನ್ನು ಬಳಸುತ್ತಲೇ ಇದ್ದಾರೆ. ಇಂತಹ ಅಗಾಧ ಬಳಕೆಯುಳ್ಳ ಸಂಖ್ಯೆಗಳು ಇಲ್ಲದೇ ಹೋಗಿದ್ದರೆ ಏನಾಗುತ್ತಿತ್ತು? ಎಂಬ ಪ್ರಶ್ನೆ ಮೂಡದೇ ಇರದು.

ಸಂಖ್ಯೆಗಳು ಇಲ್ಲದೇ ಇದ್ದರೆ ನಮ್ಮ ಜೀವನದಲ್ಲಿ ಎಷ್ಟು ಎಂಬ ಕಲ್ಪನೆಯೇ ಇರುತ್ತಿರಲಿಲ್ಲ. ಎಷ್ಟು ಎಂಬ ಕಲ್ಪನೆ ಮೂಡಿದಾಗಿನಿಂದ ಸಂಖ್ಯೆಗಳು ವ್ಯಕ್ತವಾಗುತ್ತಲೇ ಬಂದಿವೆ. ಸಂಖ್ಯೆಗಳೇ ಇಲ್ಲದಿದ್ದರೆ ನಾವು ಮಾರ್ಕೆಟ್‌ಗೆ ಹೋಗಿ ಸರಕು ಸಾಮಗ್ರಿಗಳನ್ನು ಖರೀದಿಸಲು ಸಾಧ್ಯವಾಗುತ್ತಲೇ ಇರಲಿಲ್ಲ. ಏಕೆಂದರೆ ಸಂಖ್ಯೆಗಳನ್ನು ಬಳಸದೇ ವಸ್ತುಗಳಿಗೆ ಬೆಲೆ ನೀಡಲು ಸಾಧ್ಯವಿಲ್ಲ ಅಲ್ಲವೇ? ಸಂಖ್ಯೆಗಳನ್ನು ಬಳಸುವ ಹಾಗೂ ಕಲಿಯುವ ಮೂಲಕ ಮಕ್ಕಳೂ ಸೇರಿದಂತೆ ಎಲ್ಲಾ ವಯಸ್ಸಿನವರೂ ತಾರ್ಕಿಕ ಕೌಶಲ್ಯವನ್ನಾಗಲೀ, ಸಮಸ್ಯೆ ಪರಿಹಾರ ಸಾಮರ್ಥ್ಯವನ್ನಾಗಲೀ ಬೆಳೆಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಸಂಖ್ಯೆಗಳು ಇಲ್ಲದಿದ್ದರೆ ನಮ್ಮಲ್ಲಿ ಯೋಚನಾ ಲಹರಿಯೇ ಇರುತ್ತಿರಲಿಲ್ಲ. ಕೇವಲ ಪ್ರಾಣಿ ಪಕ್ಷಿಗಳಂತೆ ನಾವು ಬದುಕಬೇಕಾಗುತ್ತಿತ್ತು.

ಸಂಖ್ಯೆಗಳು ಇಲ್ಲದೇ ಇದ್ದರೆ ಇಡೀ ವಿಶ್ವವು ಈಗಿನಷ್ಟು ಅಭಿವೃದ್ಧಿಯತ್ತ ಸಾಗಲು ಸಾಧ್ಯವೇ ಇರಲಿಲ್ಲ. ಪ್ರತಿ ಸಂದರ್ಭದಲ್ಲೂ ನಾವು ಸಮಯದ ಜೊತೆಗೆ ವೇಗವಾಗಿ ಚಲಿಸುತ್ತಿದ್ದೇವೆ. ಈ ಚಲನೆಯನ್ನು ಗಮನಿಸಲು ನಮಗೆ ಸಂಖ್ಯೆಗಳು ಬೇಕೇ ಬೇಕು. ಸಂಖ್ಯೆಗಳು ಇರದಿದ್ದರೆ ನಮ್ಮಲ್ಲಿ ಯಾವುದೇ ರೀತಿಯ ಕಲಿಕೆ ಆಗಲು ಸಾಧ್ಯವೇ ಇರಲಿಲ್ಲ. ಸಂಖ್ಯೆಗಳು ಕೇವಲ ಗಣಿತ ವಿಷಯಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ವಿಷಯದ ಕಲಿಕೆಗೂ ಸಂಖ್ಯೆಗಳು ಬೇಕೇ ಬೇಕು. ಅದರಲ್ಲೂ ವಿಜ್ಞಾನ, ತಂತ್ರಜ್ಞಾನ, ವಾಸ್ತುಶಿಲ್ಪ, ವಾಣಿಜ್ಯೋಧ್ಯಮಗಳಲ್ಲಿ ಸಂಖ್ಯೆಗಳು ಮಹತ್ವದ ಸ್ಥಾನ ಪಡೆದಿವೆ. ಪ್ರತೀ ವಿಷಯದ ಕಲಿಕೆಗೂ ಸಂಖ್ಯೆಗಳು ಅವಶ್ಯವಿರುವಂತೆ ಪ್ರತೀ ವೃತ್ತಿಗೂ ಸಂಖ್ಯೆಗಳು ಬೇಕು. ಸಂಖ್ಯೆಗಳನ್ನು ಬಳಸದೇ ಮಾಡುವ ಯಾವುದೇ ಕೆಲಸ ಈ ಜಗತ್ತಿನಲ್ಲಿ ಇಲ್ಲ. ಕೂಲಿ, ಗುಮಾಸ್ತನಿಂದ ಹಿಡಿದು ಸಾಫ್ಟ್ ವೇರ್‌ನಂತಹ ಕೃತಕ ಬುದ್ದಿವಂತಿಕೆ ಕೆಲಸಕ್ಕೂ ಸಹ ಸಂಖ್ಯೆಗಳು ಬೇಕೇ ಬೇಕು.

ಸಂಖ್ಯೆಗಳು ಇಲ್ಲದಿದ್ದರೆ ಜನ್ಮದಿನಾಂಕ, ಜನ್ಮಸಮಯಗಳು ಅಪ್ರಸ್ತುತ ಎನಿಸುತ್ತಿದ್ದವು. ದಿನ, ವಾರ, ತಿಂಗಳು, ವರ್ಷಗಳ ಲೆಕ್ಕಾಚಾರಕ್ಕೆ ಸಂಖ್ಯೆಗಳು ಬೇಕೇ ಬೇಕು. ಸಂಖ್ಯೆಗಳಿಲ್ಲದಿದ್ದರೆ, ವಿಜ್ಞಾನ ಆವಿಷ್ಕಾರಗಳು ನಡೆಯುತ್ತಲೇ ಇರಲಿಲ್ಲ. ಏಕೆಂದರೆ ಪ್ರತಿಯೊಂದು ಸಂಶೋಧನೆಯೂ ಗಣಿತದ ಸಂಖ್ಯಾ ಲೆಕ್ಕಾಚಾರದ ಆಧಾರದ ಮೇಲೆ ನಡೆಯುತ್ತದೆ. ಗಣಿತದ ಆಧಾರವಿಲ್ಲದ ಸಂಶೋಧನೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ.

ಸಂಖ್ಯೆಗಳು ಇಲ್ಲದಿದ್ದರೆ, ಅಡುಗೆ ಮಾಡಲು ಸಾಧ್ಯವಿರಲಿಲ್ಲ. ಆಹಾರ ತಿನ್ನಲು ಸಾಧ್ಯವಿರಲಿಲ್ಲ. ಮಾರುಕಟ್ಟೆಯಲ್ಲಿ ಯಾವುದೇ ವಸ್ತುಗಳನ್ನು ಕೊಳ್ಳಲು ಸಾಧ್ಯವೇ ಇರಲಿಲ್ಲ. ಏಕೆಂದರೆ ಮಾರುಕಟ್ಟೆಯ ಪ್ರತಿ ಸಂಗತಿಯೂ ಅಳತೆ ಮತ್ತು ತೂಕವನ್ನು ಅವಲಂಬಿಸಿದೆ. ತೂಕ ಮತ್ತು ಅಳತೆಗೆ ಸಂಖ್ಯೆಗಳು ಬೇಕೇ ಬೇಕು. ಸಂಖ್ಯೆಗಳಿಲ್ಲದಿದ್ದರೆ ಮನೆ ನಿರ್ಮಾಣ ಸಾಧ್ಯವಿರಲಿಲ್ಲ. ಮಾನವ ಸಂಘ ಜೀವಿಯಾಗಿರುವುದಕ್ಕೆ ಕಾರಣವೇ ಸಂಖ್ಯೆಗಳು ಎನ್ನಬಹುದು. ಎಣಿಕೆ ಇಲ್ಲದೇ ಹೋದರೆ ಎಷ್ಟು ಜನ ವಾಸವಾಗಿದ್ದೇವೆ ಎಂಬುದು ತಿಳಿಯುತ್ತಲೇ ಇರಲಿಲ್ಲ.

ಸಂಖ್ಯೆಗಳಿಲ್ಲದಿದ್ದರೆ ನಾವು ಒಂದುಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸಲು ಸಾರಿಗೆ ವ್ಯವಸ್ಥೆ ಇರುತ್ತಿರಲಿಲ್ಲ. ಸಾರಿಗೆ ವ್ಯವಸ್ಥೆಯು ದೂರವನ್ನು ಅವಲಂಬಿಸಿದೆ. ದೂರದ ಅಳತೆ ಹಾಗೂ ಅದರ ವೆಚ್ಚದ ಲೆಕ್ಕಾಚಾರಕ್ಕೆ ಸಂಖ್ಯೆಗಳು ಅವಶ್ಯಕ. ಸಂಖ್ಯೆಗಳು ಇಲ್ಲದಿದ್ದರೆ ಕಟ್ಟಡಗಳು, ಸೇತುವೆಗಳನ್ನು ನಿರ್ಮಿಸಲು ಸಾಧ್ಯವೇ ಇರಲಿಲ್ಲ. ದೇವಸ್ಥಾನ, ಚರ್ಚು, ಮಸೀದಿ, ಬಸದಿ, ಇಗರ್ಜಿಗಳನ್ನು ಕಟ್ಟಲು ಆಗುತ್ತಲೇ ಇರಲಿಲ್ಲ. ಸಂಖ್ಯೆಗಳು ಹಾಗೂ ಗಣಿತದ ಲೆಕ್ಕಾಚಾರವಿಲ್ಲದ ಬದುಕು ಕಣ್ಣುಮುಚ್ಚಿಕೊಂಡು ಕಲಾ ವಸ್ತು ಸಂಗ್ರಹಾಲಯದಲ್ಲಿ ನಡೆದಂತಾಗುತ್ತದೆ. ಗಣಿತ ಇಡೀ ಜಗತ್ತಿನ ಸಾರ್ವತ್ರಿಕ ಭಾಷೆ. ಗಣಿತದ ಸಮೀಕರಣ ಬಳಸಿ ಒಬ್ಬ ವಿಜ್ಞಾನಿ ಬಳಸಿದ ತತ್ವವನ್ನು ಜಗತ್ತಿನ ಇನ್ನೊಂದು ಮೂಲೆಯ ಮತ್ತೊಬ್ಬ ವಿಜ್ಞಾನಿ ಅದನ್ನು ಅರ್ಥೈಸಿಕೊಳ್ಳಲು ಗಣಿತ ಹಾಗೂ ಸಂಖ್ಯೆಗಳು ಸಹಾಯ ಮಾಡುತ್ತವೆ. ಏಕೆಂದರೆ ಗಣಿತ ಏಕಸೂತ್ರೀಯ ತತ್ವವನ್ನು ಹೊಂದಿದೆ. 2+2=4 ಇದು ಜಗತ್ತಿನ ಎಲ್ಲಾ ಭಾಷೆಯಲ್ಲೂ ಒಂದೇ ರೀತಿಯಾಗಿ ಬಳಸಲ್ಪಡುತ್ತದೆ. ಹಾಗಾಗಿ ಗಣಿತ ಇಡೀ ಜಗತ್ತಿನ ಸಾರ್ವತ್ರಿಕ ಭಾಷೆ ಎಂದರೆ ತಪ್ಪಲ್ಲ. ಸಂಖ್ಯೆಗಳು ಇರದಿದ್ದರೆ ನಾವು ಮೈಗೆ ಬಟ್ಟೆ ಹಾಕಿಕೊಳ್ಳಲು ಆಗುತ್ತಿರಲಿಲ್ಲ. ಸಂಖ್ಯೆ ಬಳಕೆ ಇಲ್ಲದೆ ಕೃಷಿ ಇಲ್ಲ, ಕೃಷಿ ಇಲ್ಲದೇ ಬಟ್ಟೆ ಇಲ್ಲ. ಸಂಖ್ಯೆ ಇಲ್ಲದಿದ್ದರೆ ಕಾಲಿಗೆ ಚಪ್ಪಲಿಯಾಗಲೀ, ಮುಖಕ್ಕೆ ಸೌಂದರ್ಯ ವರ್ಧಕಗಳನ್ನಾಗಲೀ ತಯಾರಿಸಲು ಆಗುತ್ತಲೇ ಇರಲಿಲ್ಲ.

ಸಂಖ್ಯೆಗಳು ಇರದಿದ್ದರೆ ಮೊಬೈಲ್ ಹಾಗೂ ಮೊಬೈಲ್ ಸಂಖ್ಯೆಯ ಅವಶ್ಯಕತೆಯೇ ಇರುತ್ತಿರಲಿಲ್ಲ. ಫೇಸ್‌ಬುಕ್, ವಾಟ್ಸ್‌ಆ್ಯಪ್, ಟ್ವಿಟರ್, ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳು ಜನ್ಮ ತಳೆಯುತ್ತಲೇ ಇರಲಿಲ್ಲ. ಸಂಖ್ಯೆಗಳು ಇರದೇ ಇದ್ದರೆ ಜಗತ್ತಿನಲ್ಲಿ ಶ್ರೀಮಂತರು ಹಾಗೂ ಬಡವರು ಎಂಬ ಕಲ್ಪನೆಯೇ ಇರುತ್ತಿರಲಿಲ್ಲ. ಸಂಖ್ಯೆಗಳಿಲ್ಲದಿದ್ದರೆ ಉತ್ತೀರ್ಣ, ಅನುತ್ತೀರ್ಣದ ಪ್ರಸಂಗವೇ ಬರುತ್ತಿರಲಿಲ್ಲ. ಸಂಖ್ಯೆಗಳು ಇಲ್ಲದಿದ್ದರೆ ಬಹುಶಃ ಜಗತ್ತಿನಲ್ಲಿ ಯಾವುದೇ ಭಾಷೆ ಉಗಮವಾಗುತ್ತಿರಲಿಲ್ಲ.

ಗಣಿತ ಹಾಗೂ ಸಂಖ್ಯೆಗಳು ಎಲ್ಲಡೆ ಇವೆ. ಜೇನುನೊಣದ ಗೂಡು, ಮರದ ದಿಮ್ಮಿ, ಹೂವು ಹಾಗೂ ಎಲೆಗಳ ರಚನೆ, ಗುಡ್ಡ, ಬೆಟ್ಟ, ನದಿ, ಕಣಿವೆ, ಕಾಡು, ಹೀಗೆ ಎಲ್ಲೆಡೆ ಸಂಖ್ಯೆಗಳು ಹಾಗೂ ಗಣಿತದ ತತ್ವಗಳು ಅಡಕವಾಗಿವೆ. ಇವುಗಳು ಇಲ್ಲದೇ ನಮ್ಮ ಬದುಕೇ ಇಲ್ಲ.

ಸಂಖ್ಯೆಗಳಿಲ್ಲದೇ ಹೋಗಿದ್ದರೆ ಜೀವನದಲ್ಲಿ ಗೆಳೆಯರ ಸಂಕಲನವಾಗಲೀ, ದುರ್ಗುಣಗಳ ವ್ಯವಕಲನವಾಗಲೀ, ದುಡಿಮೆಯ ಗುಣಾಕಾರವಾಗಲೀ, ಶ್ರಮದ ಭಾಗಾಕಾರಗಲೀ ಇರುತ್ತಲೇ ಇರಲಿಲ್ಲ. ಆಗ ಬದುಕು ಬರಡಾಗುತಿತ್ತು. ಅಲ್ಲವೇ?

Writer - ಆರ್.ಬಿ. ಗುರುಬಸವರಾಜ

contributor

Editor - ಆರ್.ಬಿ. ಗುರುಬಸವರಾಜ

contributor

Similar News