ಮಕ್ಕಳೊಂದಿಗೆ ಹೊಸವರ್ಷ ಮಾದರಿಗಳಾಗುವ ಬಗೆ

Update: 2020-01-12 07:33 GMT

ಮಕ್ಕಳು ಹಿರಿಯರ ವ್ಯಕ್ತಿತ್ವ ವಿಕಸನಕ್ಕೆ ಮಾರ್ಗವಾಗುತ್ತಾರೆ. ನಿಜ ಹೇಳಬೇಕೆಂದರೆ ಮಕ್ಕಳಿಗೆ ಕಲಿಸುತ್ತೇವೆ ಎಂಬುದು ಒಂದು ನೆಪ. ಆದರೆ ನಿಜವಾಗಿ ನಾವು ಕಲಿಯುತ್ತಿರುತ್ತೇವೆ. ಯಾರಿಗೆ ಪ್ರಕೃತಿ, ಸಮಾಜ, ಪರಿಸರ, ಬದುಕು; ಈ ಎಲ್ಲವೂ ವಿಸ್ಮಯ ಎನಿಸುವುದೋ, ಅವುಗಳಲ್ಲಿ ಹುಡುಕಾಟಗಳನ್ನು ನಡೆಸುತ್ತಾರೋ, ಸಮಯ, ಸಂಪನ್ಮೂಲ, ಜ್ಞಾನ, ವಿಚಾರ, ವಿಜ್ಞಾನಗಳೆಲ್ಲವೂ ಪ್ರಗತಿಪರವಾಗಿರುತ್ತವೆ ಮತ್ತು ಆ ಪ್ರಗತಿಯ ಮುಂದಿನ ತುದಿಯಲ್ಲಿರುವ ನಿತ್ಯ ಹೊಸತಿನ, ಚಿಗುರನ್ನು ಪ್ರಶಂಸಿಸುವ ಮನಸ್ಸಿರುತ್ತದೆಯೋ ಅವರಿಗೆಲ್ಲರಿಗೂ ಮಕ್ಕಳಲ್ಲಿ, ಮಕ್ಕಳ ಚಟುವಟಿಕೆಗಳಲ್ಲಿ, ಅವರ ಕಲಿಕೆಗಳಲ್ಲಿ ಅಪಾರವಾದ ಆಸಕ್ತಿ ಇರುತ್ತದೆ.

ಪ್ರತಿಯೊಂದನ್ನೂ ಮಕ್ಕಳೊಂದಿಗೆ ಸೇರಿಕೊಂಡು ಬೆರಗುಗಣ್ಣಲಿ ನೋಡುವ, ಮೆಚ್ಚುವ, ಆನಂದಿಸುವ ನವಿರಾದ ಸ್ಥಿತಿಯನ್ನು ಹೊಂದುವ ಹಿರಿಯರು ತಮ್ಮಲ್ಲಿರುವ ಮಗುತನವನ್ನೂ ಕಾಪಾಡಿಕೊಳ್ಳುತ್ತಾರೆ. ಅದರಿಂದ ಅವರು ತಮ್ಮ ವಯಸ್ಸಿಗೆ ಮತ್ತು ಮನಸ್ಸಿಗೆ ಎಳೆತನದ ಕಳೆಯನ್ನು ಕೊಟ್ಟುಕೊಂಡಿರುತ್ತಾರೆ. ಕಳೆಯುತ್ತಿರುವ ಆಯುಷ್ಯದಲ್ಲಿ ಉತ್ಸಾಹ ಮತ್ತು ಹುಮ್ಮಸ್ಸನ್ನು ಬೆಳೆದುಕೊಳ್ಳುತ್ತಿರುತ್ತಾರೆ. ಮಗುವಿನ ಸಂಪರ್ಕಕ್ಕೆ ಬಂದಕೂಡಲೇ ಹಿರಿಯರು ಶಿಶುಭಾವವನ್ನು ತಾಳಬೇಕು. ಶಿಶುಗಣ್ಣನ್ನು ಹೊಂದಬೇಕು. ಆಗ ಮಗುವಿನ ಆನಂದವು ನಮ್ಮ ಅನುಭವಕ್ಕೆ ಬರುತ್ತದೆ. ಅದರ ಆತಂಕ, ದಿಗಿಲು ನಮ್ಮ ಅರಿವಿಗೆ ಬರುತ್ತದೆ. ಒಂದು ಸ್ಪಷ್ಟವಾದ ಸಂಕಲ್ಪವನ್ನು ಹಿರಿಯರು ಮಾಡಿಕೊಳ್ಳಲೇ ಬೇಕಾಗಿರುವುದೆಂದರೆ ನಾವು ಯಾವುದೇ ಮಗುವಿನ ಭಯ ಅಥವಾ ಆತಂಕಕ್ಕೆ ಕಾರಣವಾಗಬಾರದು.

ಏಕೆಂದರೆ ಯಾವುದೇ ಮಗುವು ತಾನು ಅಸಹಾಯಕವೆಂದು ಭಯಪಡುವಂತಹ ಸ್ಥಿತಿಯನ್ನು ಊಹಿಸಿಕೊಳ್ಳಿ. ಅದಕ್ಕೆ ದೈಹಿಕವಾಗಿ ಎದುರಿಸುವಂತಹ ಶಕ್ತಿ ಇರುವುದಿಲ್ಲ. ಜನ, ಧನ ಅಥವಾ ಇನ್ನಾವುದೇ ಲೌಕಿಕ ಬಲಗಳಿರುವುದಿಲ್ಲ. ಇನ್ನು ಕುಟುಂಬ ಬಡತನದಲ್ಲಿದ್ದು, ತಂದೆ ತಾಯಿ ಕೂಲಿ ಕಾರ್ಮಿಕರೋ ಮತ್ತೇನೋ ಆಗಿದ್ದಾರೆಂದರೆ ಮುಗಿದೇ ಹೋಯಿತು. ಆ ಮಗುವಿನ ದಿಗಿಲಿನ ಮನಸ್ಥಿತಿ ಆಗ ನೀವು ಊಹಿಸಿಕೊಳ್ಳುವುದಿರಲಿ, ಅದರ ಛಾಯೆಯಲ್ಲಿಯೇ ಬೆಳೆಬೆಳೆಯುತ್ತಾ ಅದರ ವ್ಯಕ್ತಿತ್ವ ಯಾವ ರೀತಿಯಲ್ಲಿ ವಿಕಾಸವಾಗುವುದು ಎಂಬುದನ್ನು ಊಹಿಸಿಕೊಂಡರೆ ಅನೇಕ ಸೂಕ್ಷ್ಮದೃಷ್ಟಿ ದೊರೆಯುತ್ತದೆ. ಮನಸ್ಸಿನ, ಭಾವನೆಗಳ ಮತ್ತು ವರ್ತನೆಗಳ ವಿಷಯದಲ್ಲಿ ಸೂಕ್ಷ್ಮವಾಗಿ ಊಹಿಸುವ ರೂಢಿ ಹಿರಿಯರಿಗೆ ಇರಬೇಕು. ಇದು ಮಕ್ಕಳ ವ್ಯಕ್ತಿತ್ವ ವಿಕಸನದ ವಿಷಯದಲ್ಲಿ ದೂರದೃಷ್ಟಿ ಹೊಂದಲು ಸಾಧ್ಯವಾಗುತ್ತದೆ. ಅಂತಹವರೇ ಮಕ್ಕಳಿಗೆ ಮಾದರಿಗಳಾಗಲು ಸಾಧ್ಯ.

1. ಏಕೆಂದರೆ ಅವರಿಗೆ ಮಕ್ಕಳ ಜೊತೆಗೆ ಸಂವಹನ ಮಾಡುವ ಬೇಕಾದ ಶಬ್ದ ಸಂಪತ್ತಿರುತ್ತದೆ.

2. ಮಕ್ಕಳಿಗೆ ಅವರು ಹೆದರಿಸುವುದಿಲ್ಲ. ಒರಟು ವ್ಯಕ್ತಿತ್ವ, ಆತಂಕ ಮೂಡಿಸುವ ವರ್ತನೆಗಳು, ಅರ್ಥವಾಗದ ಅಥವಾ ಅನಿರೀಕ್ಷಿತ ಪ್ರತಿಕ್ರಿಯೆಗಳು ಇರುವುದಿಲ್ಲ.

3. ಇದನ್ನು ಮಾಡಲೇಬೇಕು, ಇದನ್ನು ಮಾಡಲೇಬಾರದು ಎಂಬ ನಿರ್ಬಂಧಗಳ ಬೋಧನೆಗಳು, ಭಾಷಣಗಳು, ಪ್ರವಚನಗಳಿರುವುದಿಲ್ಲ. ನೀನು ಮಾಡಬೇಡ ಎನ್ನುವ ಬದಲು ನಾವು ಮಾಡದಿರೋಣ ಎಂಬ ಮಾದರಿ ಇರುತ್ತದೆ.

4. ಸಮಯದಲ್ಲಿ ಸಹಾಯ ಮತ್ತು ಕೆಲಸದಲ್ಲಿ ಸಹಕಾರ ಮಾಡುವ ಗುಣವಿರುತ್ತದೆ.

5. ಖಂಡನೆ ನಿಂದನೆಗಳು ಇರುವುದಿಲ್ಲ.

6. ತಪ್ಪನ್ನು ವೈಯಕ್ತಿಕವಾಗಿ ಮತ್ತು ಗುಟ್ಟಾಗಿ ಹೇಳುವರು. ಮೆಚ್ಚುಗೆಯನ್ನು ಹೇಳುವಾಗ ಟಾಂ ಟಾಂ ಹೊಡೆಯುವರು.

7. ಮತ್ತೊಬ್ಬರಿಗೆ ಹೋಲಿಸುವುದಿಲ್ಲ. ಹೋಲಿಸಿ ಖಂಡಿಸುವುದನ್ನಂತೂ ಎಂದಿಗೂ ಮಾಡುವುದಿಲ್ಲ.

8. ಸಣ್ಣಪುಟ್ಟ ಸುಳ್ಳು ಹೇಳಿ ಬೈಗುಳ ಅಥವಾ ಹೊಡೆತ ತಪ್ಪಿಸುವ ಹಿರಿಯರಂತೂ ಮಕ್ಕಳಿಗೆ ಆರಾಧ್ಯ ಮಾದರಿಗಳಾಗಿಬಿಡುತ್ತಾರೆ. ತಮ್ಮ ಹಿರಿತನದ ಹಕ್ಕು ಚಲಾಯಿಸಿ, ಅಥವಾ ಅಧಿಕಾರ ಉಪಯೋಗಿಸಿ ಮಕ್ಕಳ ಪರವಾಗಿರುವವರು ಯಾವಾಗಲೂ ಮಕ್ಕಳ ಮಿತ್ರರಾಗಿಯೇ ಉಳಿಯುತ್ತಾರೆ.

9. ಪರೀಕ್ಷಿಸುವ ರೀತಿಯಲ್ಲಿ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ತುಂಬುವವರು ಮಕ್ಕಳಲ್ಲಿ ಮುಜುಗರ, ನಾಚಿಕೆ, ಸಂಕೋಚ, ಅವಮಾನಗಳನ್ನು ತುಂಬಿ ಮಕ್ಕಳಿಂದ ಅಪಕರ್ಶನಕ್ಕೊಳಗಾಗುತ್ತಾರೆ. ವಿಷಯ ಹೀಗಿದೆಯಂತೆ ಎಂದು ತಮಗೆ ತಿಳಿದ ಅಚ್ಚರಿಗಳನ್ನು, ಬೆರಗುಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾ ಜ್ಞಾನವನ್ನು ನೀಡುವವರು ಮಕ್ಕಳಿಗೆ ಆಕರ್ಷಣೆಯಾಗಿರುತ್ತಾರೆ.

10. ಅಹಂಕಾರ ಮತ್ತು ಅಧಿಕಾರ ಇಲ್ಲದೇ ಸಂತೋಷ ನೀಡುತ್ತಾ ಇರುವ ಹಿರಿಯರು ಮಕ್ಕಳಿಗೆ ಸದಾ ಮಾದರಿ.

ಸಂಕಲ್ಪ ಮಾಡೋಣ

ಈ ಹಿಂದೆ ಹೇಗೆಲ್ಲಾ ವರ್ತಿಸಿದ್ದೆವೋ, ಭಾವಿಸಿದ್ದೆವೋ, ಅವೆಲ್ಲಾ ಹೇಗೆಲ್ಲಾ ಮಕ್ಕಳ ಮೇಲೆ ಪರಿಣಾಮ ಬೀರಿದ್ದವೋ; ಆದರೆ ಇನ್ನು ಮುಂದೆ, ಈ ಕ್ಷಣದಿಂದ ನಾನು ಯಾವುದೇ ಮಗುವಿನೊಂದಿಗೆ ಹೇಗೆ ವರ್ತಿಸುತ್ತೇನೆ, ಹೇಗೆ ಭಾವಿಸುತ್ತೇನೆ, ಏನು ವಿಚಾರ ಮಾಡುತ್ತೇನೆ ಎಂಬುದರ ಬಗ್ಗೆ ದೊಡ್ಡವರಾದವರು ಖಂಡಿತ ಸಂಕಲ್ಪ ಮಾಡಬೇಕು. ಒಂದು ವಿಷಯ ಸ್ಪಷ್ಟವಾಗಿರಲಿ. ಮಕ್ಕಳೆಂಬುದು ನಮಗೆ ಇದ್ದು, ನಾವು ಪೋಷಕರಾಗಿರಲೇ ಬೇಕೆಂದಿಲ್ಲ. ನಾವು ಶಿಕ್ಷಕರಾಗಿದ್ದರೆ ಮಾತ್ರ ಮಗುವಿನ ಮನೋವಿಜ್ಞಾನ ತಿಳಿದಿರಬೇಕೆಂದಿಲ್ಲ. ಈಗ ನಮ್ಮ ಮಕ್ಕಳು ಸಣ್ಣವರಾಗಿ ಉಳಿದಿಲ್ಲ, ದೊಡ್ಡವರಾಗಿಬಿಟ್ಟಿದ್ದಾರೆಂದೇನಲ್ಲ. ವೈಯಕ್ತಿಕವಾಗಿ ನಮಗೆ ಮಕ್ಕಳ ಸಂಪರ್ಕವಿರದಿದ್ದರೂ, ಸಾಮೀಪ್ಯವಿರದಿದ್ದರೂ ಸಮಾಜದಲ್ಲಿ ನಾವು ಮಕ್ಕಳನ್ನು ಸಂಧಿಸುತ್ತಲೇ ಇರುತ್ತೇವೆ. ನಾವು ಅರಿತಿರುವ ವಿಷಯಗಳನ್ನು ಪ್ರಯೋಗಿಸುವ ಅವಕಾಶಗಳು ದೊರೆಯುತ್ತಿರುತ್ತವೆ. ಮಕ್ಕಳ ಪೋಷಕರೊಂದಿಗೆ ಅಥವಾ ಶಿಕ್ಷಕರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ಎಲ್ಲವೂ ಮಕ್ಕಳ ಒಳಿತಿಗಾಗಿ ಮತ್ತು ಈಗಿನ ಹಾಗೂ ಮುಂದಿನ ಸಮಾಜದ ಸ್ವಾಸ್ಥಕ್ಕಾಗಿ.

 ಕೆಲವು ಸಂಕಲ್ಪಗಳನ್ನು ನಾವು ಮಾಡಿಕೊಳ್ಳಬೇಕು.

1. ಯಾವುದೇ ಮಗುವನ್ನೂ ಒರಟಾಗಿ, ತುಚ್ಛವಾಗಿ ಮತ್ತು ಕೀಳಾಗಿ ಕಾಣುವುದಿಲ್ಲ.

2. ಅಧಿಕಾರ ಮತ್ತು ದರ್ಪದಿಂದ ಮಾತಾಡಿಸುವುದಿಲ್ಲ. ಅನಗತ್ಯವಾಗಿ ತನ್ನ ಕೆಲಸವನ್ನು ಮಾಡಿಸಿಕೊಳ್ಳುವುದಿಲ್ಲ.

3. ಮಕ್ಕಳು ತಪ್ಪುಮಾಡಿದಾಗ ಕ್ರೂರವಾಗಿ ಮತ್ತು ಆಘಾತ ಹುಟ್ಟಿಸುವಂತಹ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ. ಶಾಂತಚಿತ್ತವಾಗಿ ಕೇಳುವ, ವಿಚಾರಿಸುವ ಮತ್ತು ಪರಿಹಾರ ಕಂಡುಕೊಳ್ಳುವ ರೀತಿಯಲ್ಲಿಯೇ ಮಾತಾಡಬೇಕು.

4. ಚಾಡಿ ಮಾತುಗಳನ್ನು ಕೇಳುವುದಿಲ್ಲ ಮತ್ತು ಯಾವುದೇ ಮಗುವಿನ ಬಗ್ಗೆ ಅವರ ಶಿಕ್ಷಕರ ಮತ್ತು ಪೋಷಕರ ಬಳಿ ಶಿಕ್ಷೆ ಕೊಡಿಸುವ ಸಲುವಾಗಿ ಚಾಡಿ ಹೇಳುವುದಿಲ್ಲ. ಔಪಚಾರಿಕ ಶಿಕ್ಷಣಕ್ಕಿಂತ ಅನೌಪಚಾರಿಕ ಶಿಕ್ಷಣ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

5. ಯಾವುದೇ ಮಗುವನ್ನೂ ಅನುಕಂಪದಿಂದಲೂ, ಸಹಾನೂಭೂತಿಯಿಂದಲೂ ಕಾಣುವುದು.

6. ಯಾವುದೇ ಮಗುವನ್ನೂ ಇನ್ನಾವುದೇ ವಗುವಿನೊಂದಿಗೆ ಹೋಲಿಸಿ ತೆಗಳುವುದಿಲ್ಲ. ಮಗುವಿನ ಅರಿಮೆಯನ್ನು, ಆತ್ಮಾಭಿಮಾನವನ್ನು ಕುಗ್ಗಿಸುವುದಿಲ್ಲ.

7. ಮಗುವಿಗೆ ಬೋಧನೆಗಳನ್ನು ಮಾಡದೇ ವೌಲ್ಯಗಳ ಮಾದರಿಯಾಗಿ ನಿಲ್ಲುವುದು.

8. ಮಗುವನ್ನು ಗೌರವಿಸುವುದು ಮತ್ತು ಗೌರವವನ್ನು ನಿರೀಕ್ಷಿಸದಿರುವುದು. ಹೀಗೆ ಹಲವು ರೀತಿಗಳಲ್ಲಿ ನಾವು ಮಕ್ಕಳ ಜೊತೆ ಸಂವಹಿಸಲು ಮಾನಸಿಕವಾಗಿ ಸಿದ್ಧವಾಗಬೇಕು. ನಮ್ಮ ವ್ಯಕ್ತಿತ್ವದಲ್ಲಿಯೇ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News