ವೈಯಕ್ತಿಕ ಮಹತ್ವಾಕಾಂಕ್ಷೆಯನ್ನರಸುತ್ತಾ....

Update: 2020-01-12 11:35 GMT
ಪಾವ್ಲೋ ಕೊಯ್ಲೋ

ನಮ್ಮ ಮಕ್ಕಳು ನಮ್ಮ ಅನರ್ಘ್ಯ ಸಂಪನ್ಮೂಲವಾಗಿದ್ದಾರೆ. ವರ್ಷಗಳಿಂದೀಚಿಗೆ ನಮ್ಮ ಮಕ್ಕಳ ಗುರಿ, ಕನಸುಗಳು ಮತ್ತು ಅದನ್ನು ಸಾಧಿಸುವ ಛಲದ ಕೊರತೆ ಮತ್ತು ಹೆತ್ತವರು ಹಾಗೂ ಶಿಕ್ಷಕರು ತಮ್ಮ ಮಕ್ಕಳನ್ನು ಪ್ರಜ್ಞಾವಂತರಾಗಬೇಕೆಂಬ ನಿಟ್ಟಿನಲ್ಲಿ ಅವರನ್ನು ಪ್ರೇರೇಪಿಸುವ, ಉತ್ತೇಜಿಸುವ ಕೊರತೆಗಳು ಪ್ರಸ್ತುತವೆನಿಸುತ್ತಿವೆಯೇ ಹೊರತು ಮಕ್ಕಳ ಪ್ರತಿಭೆಗೆ ಯಾವದೇ ಕುಂದುಕೊರತೆಯಿಲ್ಲ. ಆ ಪ್ರತಿಭೆಗಳನ್ನು ನೀರೆರಚಿ ಪೋಶಿಸುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ‘ದಿ ಅಲ್ಕೆಮಿಸ್ಟ್’ ಎಂಬ ಕೃತಿಯಲ್ಲಿ ತನ್ನ ವೈಯಕ್ತಿಕ ಮಹತ್ವಾಕಾಂಕ್ಷೆಯ ಮುನ್ನಡೆಯುವಂತೆ, ಹಲವು ಕಷ್ಟನಷ್ಟಗಳು, ಮಂಕುಮರಳುಗಳಲ್ಲಿ ಮಿಂದೆದ್ದ, ಸೋಲನ್ನು ಗೆಲುವಿನ ಪ್ರತೀಕವಾಗಿಸಿದ ಓರ್ವ ಸಾಹಸ ಹುಡುಗನ ರೋಮಾಂಚನಕಾರಿ ಯಶೋಗಾಥೆಯು, ನಮ್ಮ ಮಕ್ಕಳಿಗೂ ಸದಾ ಪ್ರೇರೇಪಿಸುತ್ತದೆಂಬುದು ನಗ್ನಸತ್ಯವಾಗಿದೆ. ಬ್ರೆಝಿಲ್ ಮೂಲದ ಪೋರ್ಚುಗೀಸ್ ಲೇಖಕ ‘ಪಾವ್ಲೋ ಕೊಯ್ಲೋ’ ಬರೆದ ‘ದಿ ಅಲ್ಕೆಮಿಸ್ಟ್’ ಕಾದಂಬರಿಯು ಜಗತ್ತಿನ ಔನ್ನತ್ಯಮಟ್ಟದಲ್ಲಿರುವ 80ಕ್ಕೂ ಮಿಕ್ಕ ಭಾಷೆಗಳಿಗೆ ಅನುವಾದಗೊಂಡು, ಬರೋಬ್ಬರಿ 190ಕ್ಕೂ ಅಧಿಕ ಪ್ರತಿಗಳನ್ನು ಓದುಗರ ಹಸ್ತಕ್ಕೆ ತಲುಪಿಸುವ ಮುಖಾಂತರ ವಿಶ್ವದಲ್ಲೇ ಅತ್ಯಧಿಕ ಭಾಷೆಗೆ ತರ್ಜುಮೆಗೊಂಡ ಪುಸ್ತಕವೆಂದು ಗಿನ್ನೆಸ್ ದಾಖಲೆಯೊಂದಿಗೆ ಖ್ಯಾತಿವೆತ್ತಿದೆ. ಅಬ್ದುಲ್ ರಹೀಂ ಟೀಕೆಯವರು ಇದನ್ನು ಕನ್ನಡಕ್ಕಿಳಿಸಿದ್ದಾರೆ. ಈ ಕೃತಿಯ ಪ್ರಮುಖವಾಗಿ ಚರ್ಚಿಸಲ್ಪಡುವ ವೈಯಕ್ತಿಕ ಮಹತ್ವಾಕಾಂಕ್ಷೆ, ಅದರ ಅಂಗವಾಗಿದೆ ನಿಗೂಢ ಶಕ್ತಿ. ಮೊದಮೊದಲು ಜನರು ನಕಾರಾತ್ಮಕವಾಗಿ ಕಾಣುವ ಒಂದು ಶಕ್ತಿ, ವಾಸ್ತವದಲ್ಲಿ ಒಬ್ಬಾತ ತನ್ನ ಮಹತ್ವಾಕಾಂಕ್ಷೆಯನ್ನು ಹೇಗೆ ತನ್ನದಾಗಿಸಬೇಕೆಂದು ತೋರಿಸಿಕೊಡುವಲ್ಲಿ ಕೃತಿ ಮುಖಮಾಡಿವೆ. ನಿಗೂಢ ಶಕ್ತಿಯು ಒಬ್ಬಾತನ ಸಂಕಲ್ಪ ಮತ್ತು ಉದ್ದೇಶವನ್ನು ಗುಣಾತ್ಮಕವಾಗಿ ಸಜ್ಜುಗೊಳಿಸುತ್ತೆ. ಯಾರಾದರೊಬ್ಬ ಆತ್ಮಾರ್ಥವಾಗಿ ಏನನ್ನಾದರೂ ಬಯಸಿದರೆ ಆ ಬಯಕೆ ಬ್ರಹ್ಮಾಂಡದ ಆತ್ಮದಲ್ಲಿ ಹುಟ್ಟಿಕೊಂಡು ರೂಪು ಪಡೆಯುತ್ತೆ. ಆ ಬಯಕೆಯೇ ಭೂಮಿಯ ಮೇಲಿರುವ ನೈಜ ಉದ್ದೇಶ ಮತ್ತು ಧ್ಯೇಯವಾಗಿದೆ. ಸ್ವಾತ್ಮವು ಸಂತೋಷದಿಂದ ಪೋಶಿಸಲ್ಪಟ್ಟರೆ ಕೆಲ ಸಮಯ ಅಸೂಯೆ, ಹೊಟ್ಟೆಕಿಚ್ಚ್ಚಿನ ಮೂಲಕ ಅಸಂತೋಷ ವ್ಯಕ್ತಪಡಿಸುತ್ತದೆ. ವೈಯಕ್ತಿಕ ಮಹತ್ವಾಕಾಂಕ್ಷೆಯನ್ನರಸುವುದು ಮಾತ್ರ ನೈಜ ಬಾಧ್ಯತೆಯಾಗಿದೆ. ಈ ಕೃತಿಯಲ್ಲಿನ ಹಲವೆಡೆಯಲ್ಲಿ ಹುಡುಗನ ಪಯಣದಲ್ಲಿ ಸಂದರ್ಶಿಸಿದ ವೃದ್ಧನ ಮಾತುಗಳು ಆವರ್ತಿಸುವುದರಿಂದ ನಮಗೆ ಪ್ರೇರೇಪಣೆಯನ್ನು ಮಾಡುತ್ತದೆ. ನೀನೇನನ್ನಾದರೂ ಆತ್ಮಾರ್ಥವಾಗಿ ಬಯಸಿದರೆ ಅದನ್ನು ಸಾಧಿಸಿ ಕೊಡಲು ಇಡೀ ಬ್ರಹ್ಮಾಂಡವೇ ನಿನ್ನ ಜೊತೆ ಸಂಚು ಹೂಡಿಸಹಕರಿಸುತ್ತದೆ. ಕೊಯ್ಲಾ, ನಾವು ನಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಯನ್ನು ಸಾಧಿಸಬೇಕೆಂದು ಅಗೋಚರ ಶಕ್ತಿಯೊಂದು ಬಯಸುತ್ತದೆ ಮತ್ತು ಅದಕ್ಕಾಗಿ ನಮ್ಮ ಹಸಿವನ್ನು ಯಶಸ್ಸಿನ ರುಚಿಯೊಂದಿಗೆ ತೀಕ್ಷ್ಣಗೊಳಿಸುತ್ತದೆಂದು ಸಲಹೆ ನೀಡುತ್ತಾರೆ. ಕೊಯ್ಲಾ ಈ ಕೃತಿಯಲ್ಲಿ, ವೈಯಕ್ತಿಕ ಮಹತ್ವಾಕಾಂಕ್ಷೆಯನ್ನರಸುವಾಗ ಮತ್ತೊಂದು ಗಮನಹರಿಸಬೇಕಾದ ವಿಷಯವನ್ನು ತೆರೆದಿಡುತ್ತಾರೆ. ಸಾಧನೆಯ ಅಂತಿಮ ಫಲ ಪ್ರಾಪ್ತವಾಗುವವರೆಗೂ ನಾವು ಆ ಕಾರ್ಯದಿಂದ ವಿಮುಖನಾಗಬಾರದು. ಕೃತಿಯ ಒಂದೆಡೆಯಲ್ಲಿ ನಾವು ಒಂದು ವಿಷಯದಲ್ಲಿ ಮಾತ್ರವೇ ವ್ಯವಹರಿಸಬೇಕೇ ಹೊರತು ಬೇರಾವ ವಿಷಯಗಳಿಗೂ ಮಹತ್ವ ಕೊಡಬಾರದು. ಹಾಗೆಯೇ ಏನೇ ಬರಲಿ ತನ್ನ ವೈಯುಕ್ತಿಕ ಮಹತ್ವಾಕಾಂಕ್ಷೆಯಿಂದ ಯಾವತ್ತೂ ದೂರ ಓಡಿ ಹೋಗಕೂಡದು, ನಾವು ಯಾವತ್ತೂ ನಷ್ಟಹೊಂದಿದರಲ್ಲೇ ಮುಳುಗಬಾರದು. ಇದ್ದುದರಲ್ಲಿ ತೃಪ್ತಿಪಟ್ಟು ತನಗೆ ತಾನೇ ಆತ್ಮಶ್ವಾಸವನ್ನು ಬಿಗಿದಿಟ್ಟರೆ ಮಾತ್ರವೇ ಗುರಿ ತಲುಪಲು ಸಾಧ್ಯವಾಗಿದೆಂದು ಎಚ್ಚರಿಸುತ್ತಾರೆ. ಯಾರಾದರೊಬ್ಬ ತನ್ನ ವೈಯಕ್ತಿಕ ಮಹತ್ವಾಕಾಂಕ್ಷೆಯ ಸಿದ್ಧಿಗೆ ಹತ್ತಿರವಾದಷ್ಟು ಆ ವೈಯುಕ್ತಿಕ ಮಹತ್ವಾಕಾಂಕ್ಷೆಯೇ ಅವನ ಅಸ್ತಿತ್ವದ ಮುಖ್ಯ ಮತ್ತು ನಿಜವಾದ ಧ್ಯೇಯವಾಗಿ ಬಿಡುತ್ತದೆಂದು ಕೃತಿಯು ಸ್ಪಷ್ಟವಾಗಿ ನುಡಿಯುತ್ತೆ. ಬನ್ನಿ, ಓದಿದ ಕಥೆಯನ್ನು ಸಣ್ಣ ಪ್ರಮಾಣದಲ್ಲಿ ಅರಿಯೋಣ, ಲೇಖಕ ಪಾವ್ಲೋ ಬರೆದ ದಿ ಅಲ್ಕೆಮಿಸ್ಟ್ ಕೇವಲ ಕಥೆಯಾಗಿಕಾಣದೆ ಓದುಗನ ನಿರೀಕ್ಷೆಗಳೆಲ್ಲವೂ ಮೇಳೈಸಿಕೊಂಡಿವೆ. ತನ್ನ ವೈಯಕ್ತಿಕ ಮಹತ್ವ್ವಾಕಾಂಕ್ಷೆಯನ್ನರಸುತ್ತಾ ಹೊರಟ ಸ್ಪೇನ್ ದೇಶದ ಆಂಡಾಲೂಸಿಯಾದ ಸಾಂಟಿಯಾಗೋ ಎಂಬ ಕುರುಬ ಹುಡುಗನೊಬ್ಬನ ಸಾಹಸ, ಧೈರ್ಯತುಂಬಿದ ಪ್ರಯಾಣದಲ್ಲುಂಟಾಗುವ ಅನುಭವದ ಸಾರವೇ ಈ ಕಾದಂಬರಿಯ ಕಥಾವಸ್ತು. ಹುಡುಗನ ತಂದೆಯು ಮಗ ಪಾದ್ರಿಯಾಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾನೆ. ಇದಕ್ಕೆ ತದ್ವಿರುದ್ಧವಾಗಿ ಲೋಕ ಸಂಚಾರಿಯಾಗಿ ಸರ್ವ ನಾಡನ್ನು ಸುತ್ತಿ ಜ್ಞಾನದಾಹವನ್ನು ತೀರಿಸಬೇಕೆಂಬ ಇರಾದೆ ಮಗನದ್ದಾಗಿದೆ. ಲೋಕಸಂಚಾರಿಯಾಗಲು ಶ್ರೀಮಂತರಿಗೆ ಮಾತ್ರ ಸಾಧ್ಯವೆಂದು ಮನಗಂಡು ಕೊನೆಗೆ ಕುರುಬನಾದರೆ ಮಾತ್ರವೇ ಸಂಚಾರಿಯಾಗಲು ಸಾಧ್ಯವೆಂಬಂತೆ ಪಿತೃನುಡಿಯನ್ನು ಅಂಗೀಕರಿಸುತ್ತಾನೆ. ಪರಿಣಾಮಕಾರಿಯಾಗಿ ತಂದೆಯು ಪಿತ್ರಾರ್ಜಿತ ಸೊತ್ತಾದ ಚಿನ್ನದ ನಾಣ್ಯ ಹಾಗೂ ಪುಟ್ಟ ಥೈಲಿಯನ್ನು ನೀಡಿ ತನ್ನತನವನ್ನು ತೀರಿಸಿ ಬೀಳ್ಕೊಡುತ್ತಾನೆ. ಕುರಿಮಂದೆಯೊಂದಿಗೆ ಹುಡುಗನ ದಿನಚರಿ ಆರಂಭಿಸುವ ಮುಖಾಂತರ ಕೋಯ್ಲಾ ಕಥೆಯನ್ನಾರಂಭಿಸಿ ಹುಡುಗ ತಾನು ಕಂಡ ಸ್ವಪ್ನದಂತೆ ಗುಪ್ತನಿಧಿಯನ್ನು ಶೋಧಿಸುವಸಲುವಾಗಿ ಗೀಝಾದ ಪಿರುಡ್ ತಲುಪಿ ಪುನಃ ಅದೇ ಸ್ಥಳಕ್ಕೆ ಹಿಂದಿರುಗುವ ರೋಮಾಂಚನಕಾರಿ ಅನುಭವವಾಗಿದೆ ಈ ಕಾದಂಬರಿ. ಹುಡುಗ ಸಾಂಟಿಯಾಗೋ ಕುರಿಮಂದೆಯ ಜೊತೆಗೆ ಕತ್ತಲಾವರಿಸಿದಾಗ ಸಮೀಪದ ಪಾಳುಬಿದ್ದ ಇಗರ್ಜಿಯ ಆವರಣದಲ್ಲಿದ್ದ ಅಂಜೂರದ ಬೃಹತ್ ಮರದಡಿಯಲ್ಲಿ ಕಳೆಯುವುದೆಂದು ಖಚಿತಪಡಿಸಿ ಕುರಿಯನ್ನು ಮಂದೆಯಿಂದ ಪಲಾಯನ ಮಾಡಲು ಅಸಾಧ್ಯವಾಗುವ ರೀತಿಯಲ್ಲಿ ಹಲಗೆ ತುಂಡುಗಳನ್ನಿಟ್ಟು ಬಧ್ರಪಡಿಸಿ ನಿದ್ದೆಗೆ ಜಾರುತ್ತಾನೆ. ಹೀಗಿರುವಾಗ ಗುಪ್ತನಿಧಿಯೊಂದು ಈಜಿಪ್ಟಿನಲ್ಲಿದೆಯೆಂದು ಕನಸು ಬಿದ್ದಿದ್ದೇ ತಡ ಸಿಕ್ಕಸಿಕ್ಕವರಲ್ಲಿ ವ್ಯಾಖ್ಯಾನವನ್ನರಸುತ್ತಾ ಸಾಗುತ್ತಾನೆ. ಹುಡುಗನಿಗೆ ಮತ್ತೆಲ್ಲ ಉದ್ದೇಶಗಳು, ವ್ಯವಹಾರಗಳೆಲ್ಲವೂ ನಗಣ್ಯವಾಗಿ ಮನಗಂಡು ನಿಧಿಶೋಧನೆಗಾಗಿ ಊರೂರನ್ನು ಅಲೆಯುವುದೇ ಈ ಕಾದಂಬರಿಯ ಸಾರ. ಹುಡುಗ ಮತ್ತೊಂದೂರಿಗೆ ತಲುಪುವಾಗ ತನ್ನ ಕೈಯಲ್ಲಿದ್ದ ಪುಸ್ತಕವನ್ನು ತಿರುವಿಯಾಗಿರುತ್ತಿತ್ತು. ಪುನಃ ವಿನಿಮಯಮಾಡುವುದೇ ಮುಖ್ಯ ದಿನಚರಿ. ವಿನಿಮಯಿಸುವಾಗ ದೊಡ್ಡ ಪುಸ್ತಕವನ್ನು ಖರೀದಿಸುತ್ತಿದ್ದ, ಅದೇ ರಾತ್ರಿ ತಲೆದಿಂಬಾಗುತ್ತಿತ್ತು. ಪರಿಣಾಮಕಾರಿಯಾಗಿ ಜ್ಞಾನವು ವರ್ಧಿಸುತ್ತಿತ್ತೆಂದು ಕೊಯ್ಲೆ ಸ್ಪಷ್ಟವಾಗಿ ವಿವರಿಸಿದ್ದಾರೆ. ತರುವಾಯ ಮೊರೊಕೊ ದೇಶದ ಟಾನ್ಜಿಯರ್ ತಲುಪಿ ಅಲ್ಲಿರುವ ಅನೇಕರ ಸ್ನೇಹ ಸಂಪಾದಿಸಿ ಉಪದೇಶವನ್ನು ಸ್ವೀಕರಿಸುತ್ತಿದ್ದ. ಹುಡುಗ ಟಾನ್ಜಿಯರ್‌ನಲ್ಲಿ ಓರ್ವನ ಸ್ನೇಹ ಸಂಪಾದಿಸುತ್ತಾನೆ. ಪರಿಣಾಮವಾಗಿ ಆತ ಮಂಕು ಮರುಳುಮಾಡಿ ಹುಡುಗನೊಂದಿದ್ದ 60 ಕುರಿಗಳನ್ನು ವಶಪಡಿಸಿಕೊಂಡು ಹೋಗುತ್ತಾನೆ. ಹುಡುಗನ ಜೀವನ ಸಂಪೂರ್ಣ ಈಗ ಆತನ ಹತೋಟಿಯಲ್ಲಿತ್ತು. ಮಾತನಾಡಲೂ ಭಾಷೆಯೂ ತಿಳಿಯದ ಅಪರಿಚಿತ ನಾಡಿನಲ್ಲಿ, ಎಲ್ಲವನ್ನೂ ಕಳಕೊಂಡು ಭಿಕಾರಿಯಾಗಿದ್ದ. ಆತ ಈಗ ಕುರುಬನೂ ಅಲ್ಲ, ಪುಡಿ ಕಾಸಿನ ಒಡೆಯನೂ ಅಲ್ಲ. ಆದರೂ ಯಾವುದಕ್ಕೂ ಕುಸಿಯದೆ ಆತ್ಮವಿಶ್ವಾಸದಿಂದ ಮೇಲೆದ್ದುಕೊಂಡು, ನಾನಿನ್ನು ಜಾಣಯಾಗಬೇಕೆಂದು ತನಗೆ ತಾನೇ ತಿಳಿಹೇಳಿ ತೃಪ್ತಿ ಪಟ್ಟುಕೊಂಡು ಓರ್ವ ಸ್ಫಟಿಕ ಗಾಜಿನ ಅಂಗಡಿಯಲ್ಲಿ ಸೇರಿಕೊಂಡು ನಿಶ್ಚಲಸ್ಥಿತಿಯಿಂದ ಹಲವು ನವೀನತೆಗಳೊಂದಿಗೆ ವ್ಯಾಪಾರವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ದು ಸಂಪತ್ತನ್ನು ಕಿಸೆ ಸೇರಿಸಿಕೊಂಡು ಪುನಃ ಪಯಣವನ್ನು ಮುಂದುವರಿಸುವಲ್ಲಿ ಸಫಲನಾಗುತ್ತಾನೆಂದು ಕೊಯ್ಲಾ ತೆರೆದಿಡುತ್ತಾರೆ. ಅಲ್ಲಿಂದ ದುರ್ಗಮ ಸಹಾರಾ ಮರುಭೂಮಿಯಲ್ಲಿ ಗುಪ್ತನಿಧಿಯನ್ನು ಮನಸ್ಸಿನಲ್ಲಿಟ್ಟು ಯಾವ ಬಿಸಿಲನ್ನೂ ಲೆಕ್ಕಿಸದೆ ಕೊನೆಗೆ ಈಜಿಪ್ಟನ್ನು ಕೇಂದ್ರವಾಗಿಸಿ ಕೈರೋ ಸಮೀಪದ ಅಲ್-ಫಯ್ಯೂಮ್ ಓಯಸಿಸ್‌ನಲ್ಲಿ ಆಂಗ್ಲರನ ಸಹಾಯಸ್ತದಿಂದ ರಸವಾದಿಯನ್ನು ಸಂಧಿಸುತ್ತಾನೆ. ರಸವಿದ್ಯೆಯೆಂದರೆ ಮೇರು ಮಟ್ಟದ ಆವಿಷ್ಕಾರ ಮತ್ತು ಅನ್ವೇಷಣೆಗಳಾಗಿವೆ. ಇದೇ ವಿದ್ಯೆಯನ್ನು ಹುಡುಗ ಸ್ವಂತ ಆತ್ಮಕ್ಕೆ ಅತ್ಯಂತ ಕಠಿಣ ಪರಿಶ್ರಮದ ಮುಖಾಂತರ ರಸವಾದಿ ಸ್ನೇಹಿತನಿಂದ ಬಹಳ ಶ್ರದ್ಧೆಯಿಟ್ಟು ಕರತಲಾಮಕ ಮಾಡಿದ್ದ. ಈ ರಸಾಯನಶಾಸ್ತ್ರವು ಆಧುನಿಕ ಯುಗದಲ್ಲಿ ಪ್ರಮುಖವೆನಿಸಿವೆ. ಶಕುನ, ಧರ್ಮ, ರಹಸ್ಯ ಸಂಕೇತಗಳು ಮತ್ತು ತತ್ವಶಾಸ್ತ್ರಕ್ಕೆ ಕೊಂಡೊಯ್ಯುವುದರಲ್ಲಿ ಎರಡು ಮಾತಿಲ್ಲ. ಇನ್ನೂ ಅನೇಕ ರಸವಿದ್ಯೆಯ ಪರವಾದ ವಿಷಯವನ್ನು ಕೃತಿಯಲ್ಲಿ ಕೊಯ್ಲೆ ಓದುಗನಿಗೆ ತಕ್ಕುದಾದ ಸ್ಥಳದಲ್ಲಿ ವಿವರಿಸುತ್ತಾರೆ. ಅದೇ ಓಯಸಿಸ್‌ನಲ್ಲಿ ಹುಡುಗ ಸುಂದರಿಯೊಬ್ಬಳನ್ನು ಪ್ರೀತಿಸುತ್ತಾನೆ. ಕೊನೆಯ ಸಮಯದಲ್ಲಿ ಅವಳನ್ನು ಬಿಟ್ಟು ಹೊರಡುವಾಗ ಆ ಹುಡುಗಿ ಹೇಳುವ ಮಾತುಗಳು ಅದೆಷ್ಟೋ ಹೊಸಕತೆಯನ್ನು ಹೇಳುವ ಹಾಗೆ ಅಕ್ಷರಶಃ ಭಾಸವಾಗುತ್ತದೆ. ನಾವು ಮರುಭೂಮಿಯ ಹೆಣ್ಣುಗಳು, ನಮ್ಮನ್ನು ಅಗಲಿ ಹೊರಡುವ ಬಹುತೇಕ ಪುರುಷರು ಹಿಂದಿರುವುದಿಲ್ಲ. ನಮಗೆ ಅದು ಅಭ್ಯಾಸವಾಗಿದೆ. ಇಷ್ಟರವರೆಗೆ ಆಸೆಯ ಕಣ್ಣುಗಳಿಂದ ನೋಡಿದ ನಾನು ಇನ್ನು ಮುಂದೆ ನಿರೀಕ್ಷೆಯ ಕಣ್ಣುಗಳಿಂದ ನೋಡುವೆ. ನಾನು ಮರುಭೂಮಿಯ ಹೆಣ್ಣು: ನಿಜ, ಆದರೆ ನಾನು ಹೆಣ್ಣೇ... ಎಂದು ಹುಡುಗ ಕಿವಿಯೊಳಗೆ ತುರುಕಿ ಗೀಝಾದ ಪಿರುಡುಗಳ ಬಳಿ ತಲುಪಿ ತಾನು ಸ್ವಪ್ನದಲ್ಲಿ ಕಂಡ ಗುಪ್ತನಿಧಿಯಲ್ಲಿರುವ ಸ್ಥಳವನ್ನು ಜೀವಾತ್ಮದ ಮುಖಾಂತರ ಅನ್ವೇಶಿಸಿ ಅಗೆಯುವಾಗ ಬುಡಕಟ್ಟು ಯುದ್ಧ ಸಂತ್ರಸ್ತರ ನಡುವೆ ಹಲವು ಮಾತಿನ ಚಕಮಕಿ ನಡೆಯುತ್ತದೆ. ಕೊನೆಗೆ ನನಗೂ ಪಾಳುಬಿದ್ದ ಇಗರ್ಜಿಯ ಉಗ್ರಾಣದ ಅವಶೇಷಗಳ ನಡುವೆ ಒಂದು ಅಂಜೂರದ ಮರದ ಬುಡವನ್ನು ಅಗೆದರೆ ಅಲ್ಲಿ ಗುಪ್ತನಿಧಿ ಇದೆಯೆಂದು ನನಗೂ ಕನಸು ಬಿದ್ದಿತ್ತು, ಆದರೆ ಆ ಕನಸನ್ನು ನಂಬಿ ಇಡೀ ಮರುಭೂಮಿಯನ್ನು ದಾಟುವಷ್ಟು ನಾನು ಮೂರ್ಖನಾಗಿರಲಿಲ್ಲ ಎಂದು ಹೇಳಿ ಅದೃಶ್ಯರಾದರು. ಪುನಃ ಗುಪ್ತನಿಧಿಯ ಒತ್ತಾಶೆಯಿಂದ ಆ ಸ್ಥಳಕ್ಕೆ ಮರಳಿದಾಗ ಕುರಿಮಂದೆಯ ಬದಲು ಹಾರೆಯೊಂದಿತ್ತು. ಅದನ್ನು ಉಪಯೋಗಿಸಿ ಅಗೆದಾಗ ಯಾವುದೋ ಗಟ್ಟಿವಸ್ತುಗೆ ತಾಗಿತು. ತರುವಾಯ ಸೂಕ್ಷ್ಮವಾಗಿ ದರ್ಶಿಸಿದಾಗ ಅಮೂಲ್ಯ ಹರಳು, ರತ್ನಾಭರಣಗಳು ಮುಂತಾದ ಹತ್ತು ಹಲವು ಸಂಪತ್ತಿನ ಭಂಡಾರವೇ ಅವನ ಮುಂದಿತ್ತು. ಈ ಕಾದಂಬರಿಯಲ್ಲಿ ಒಟ್ಟಾರೆಯಾಗಿ ಹೇಳುವುದಾದರೆ ನಮ್ಮ ಗುರಿಗಳು, ಉದ್ದೇಶಗಳು ಕಾಲಡಿಯಲ್ಲೇ ಇರುತ್ತದೆಯೇ ಹೊರತು ಬೇರೆಡೆಯಲ್ಲ. ಪುನಃ ಕಾಲಡಿಗೆ ಹಿಂದಿರುಗುವಾಗ ಅಲ್ಪಸ್ವಲ್ಪ ಜ್ಞಾನದಾಹವನ್ನು ನೀಗಿಸುತ್ತೇವೆ. ಅದಕ್ಕೆ ಪರಿಶ್ರಮಿಸಬೇಕು. ಪರಿಣಾಮಕಾರಿಯಾಗಿ ಫಲ ಲಭಿಸಿಯೇ ತೀರುವುದರಲ್ಲಿ ಸಂಶಯವಿಲ್ಲ.

 ಕೊಯ್ಲ ಅತ್ಯಂತ ಸುಂದರವಾಗಿ ಮನಮುಟ್ಟುವಂತೆ ಮನೋಜ್ಞವಾಗಿ ಕತೆಯನ್ನು ಹೆಣೆದಿದ್ದಾರೆ. ಇದರ ಪ್ರಾರಂಭದಲ್ಲಿ ಓದುಗನಿಗೆ ಸಿಹಿಯೆನಿಸದಿದ್ದರೂ ಓದುತ್ತಾ ಹೋದಂತೆ ಕೃತಿಯಲ್ಲಿ ತಾನೂ ಒಂದು ಪಾತ್ರಧಾರಿಯಾಗಿ ಲೀನವಾಗುವಂತೆ ಭಾಸವಾಗುತ್ತದೆ. ‘ದಿ ಅಲ್ಕೆಮಿಸ್ಟ್’ನ ಒಟ್ಟು ಸಾರವೇ ಬದುಕಿನಲ್ಲಿ ಏಳುಬೀಳುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಏಕೆಂದರೆ, ಏಳುಬೀಳುಗಳು ಶಾಪವಲ್ಲ, ವರ. ಕೊಯ್ಲ್‌ರವರ ಕೃತಿಯನ್ನು ಆಳವಾಗಿ ಯೋಚಿಸುವಾಗ ಒಂದು ಅಪ್ರತಿಮ ಜೀವನ ಸಂದೇಶವನ್ನು ಸಾರುವುದರೊಂದಿಗೆ ಒಬ್ಬಾತನನ್ನು ಆಧ್ಯಾತ್ಮಿಕವಾಗಿ ಗಾಢವಾಗಿ ಚಿಂತಿಸುವ ಜೊತೆಗೆ ಹೊಸ ಬದುಕನ್ನು ತೆರೆದು ಕೊಟ್ಟಂತಿವೆ. ಏಕದೇವ ಶ್ವಾಸವನ್ನು ಬಹುಶಃ ಈ ಕೃತಿಯಲ್ಲದೆ ಇಷ್ಟು ಪರಿಣಾಮಕಾರಿಯಾಗಿ ಬೇರೆ ಯಾವ ಕೃತಿಯೂ ವ್ಯಕ್ತಪಡಿಸಿರಲಿಲ್ಲ. ಸರ್ವವೂ ಅವನ ನಿಯಂತ್ರಣಕ್ಕೊಳಪಟ್ಟದ್ದು ಮಾತ್ರವಲ್ಲದೆ ಪ್ರತಿಯೊಂದಕ್ಕೂ ಜೀವಾತ್ಮನೊಡನೆ ಹೆಣೆಯಲ್ಪಟ್ಟ ಒಂದು ಅವಳಿ ಆತ್ಮವಿದೆ. ಸೃಷ್ಟಿಯ ಸೃಷ್ಟಿಗಳಲ್ಲಿ ಯಾವುದೂ ನಿಕೃಷ್ಟವಲ್ಲ. ನಾವು ನಮ್ಮಲ್ಲಿರುವುದನ್ನು ಕಳೆದುಕೊಳ್ಳವ ಬಗ್ಗೆ ಯಾವಾಗಲೂ ಭಯಭೀತರಾಗುತ್ತೇವೆ. ಅದು ನಮ್ಮ ಸೊತ್ತು, ಬದುಕು ಅಥವಾ ಆಸ್ತಿಯಾಗಿರಬಹುದು. ಆದರೆ ನಮ್ಮ ಬದುಕಿನ ಕಥೆ ಮತ್ತು ಜಗತ್ತಿನ ಇತಿಹಾಸ ಎರಡೂ ಒಂದೇ ಕೈಯಿಂದ ಬರೆಯಲ್ಪಟ್ಟಿದೆ(ಮಕ್ತುಬ್) ಎಂಬುದನ್ನು ನಾವು ಅರಿತ ದಿನದಂದು ಆ ಆತಂಕ ಇಂಗಿಹೋಗುತ್ತದೆ. ತಮ್ಮ ವೈಯುಕ್ತಿಕ ಮಹತ್ವಾಕಾಂಕ್ಷೆ ಸಾಧಿಸುವ ಕೊನೆಯಲ್ಲಿ ವಿಶ್ವದ ಎಲ್ಲರೂ ಆ ಮಹಾನ್ ಸುಳ್ಳು ನಂಬಿಕೆಯನ್ನು ನಂಬುತ್ತಾರೆ ಎಂಬ ವಾಕ್ಯದಿಂದ ಕೊನೆಗೊಳ್ಳುತ್ತದೆ.ಆದರೆ ಆ ಮಹಾನ್ ಸುಳ್ಳು ಯಾವುದೆಂದು ತಿಳಿಯಬೇಕಿದ್ದರೆ ಈ ಕೃತಿಯ ಕರ್ತೃ ಕೊಯ್ಲಾರವರ ಮಾತುಗಳಿಂದಲೇ ಆ ವಾಂಛೆಯನ್ನು ಅರ್ಥೈಸಿಕೊಳ್ಳಿ. ಒಬ್ಬಾತನ ಚಿಂತನವನ್ನು ರಸವಾದಿಯು ಆಧ್ಯಾತಿಕವಾಗಿ ಮೇರು ಮಟ್ಟಕ್ಕೆ ಕೊಂಡೊಯ್ಯವುದರಲ್ಲಿ ಎರಡು ಮಾತಿಲ್ಲ. ನೀವೂ ಚಿಂತಿಸಿ, ನಿಮ್ಮವರಿಗೂ ತಿಳಿಹೇಳಿ ಮೇರು ಮಟ್ಟದಲ್ಲಿ ಚಿಂತಿಸಲು ಅವಕಾಶಕ್ಕೆ ಎಡೆಮಾಡಿಕೊಡಲು ಮರೆಯದಿರಿ... ನಿಜಕ್ಕೂ ಪ್ರಸ್ತುತವೆನಿಸಿದ ಕೃತಿ ಇದು.

Writer - ಎಂ.ಅಶ್ರಫ್ ನಾವೂರು

contributor

Editor - ಎಂ.ಅಶ್ರಫ್ ನಾವೂರು

contributor

Similar News