×
Ad

ಶಾಲಾ ದಿನಗಳಲ್ಲಿ ನಿಂಬೆಹಣ್ಣು ಮಾರುತ್ತಿದ್ದೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-01-12 17:54 IST

ಬೆಂಗಳೂರು, ಜ.12: ಶಾಲಾ ದಿನಗಳಲ್ಲಿ ಓದಿನ ಜೊತೆಗೆ ವ್ಯಾಪಾರದಲ್ಲೂ ತೊಡಗಿಕೊಂಡು, ತರಕಾರಿ, ನಿಂಬೆಹಣ್ಣು ಮಾರಾಟ ಮಾಡುತ್ತಿದ್ದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನುಡಿದರು.

ರವಿವಾರ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ, ಯುವ ಸಬಲೀಕರಣ ಕೇಂದ್ರಗಳ ಉದ್ಘಾಟನೆ ಹಾಗೂ ಉಚಿತ ಲ್ಯಾಪ್‌ಟಾಪ್ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಬೂಕನಕೆರೆಯ ಪ್ರೌಢಶಾಲೆಯಲ್ಲಿ ಓದುತ್ತಿದ್ದ ವೇಳೆ, ನಿಂಬೆಹಣ್ಣು, ತರಕಾರಿ ಮಾರಾಟ ಮಾಡಿದ್ದೇನೆ. ಈ ಬಗ್ಗೆ ಹೇಳಿಕೊಳ್ಳಲು ನನಗೆ ಹೆಮ್ಮೆಯೂ ಇದ್ದು, ನಾಲ್ಕು ಬಾರಿ ಈ ರಾಜ್ಯದ ಮುಖ್ಯ ಮಂತ್ರಿಯೂ ಆಗಿದ್ದೇನೆ ಎಂದು ಹೇಳಿದರು.

ಈ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಅಚಲ ವಿಶ್ವಾಸವಿದ್ದರೆ ಯಾರು ಏನು ಬೇಕಾದರೂ ಆಗಬಹುದು.ಇದಕ್ಕೆ ನಾನೇ ಉದಾಹರಣೆ ಎಂದ ಅವರು, ನಿಮ್ಮ ತಂದೆ ತಾಯಿಗಳು ನಿಮ್ಮ ಮೇಲೆ ಬಹಳ ನಿರೀಕ್ಷೆಯಿಟ್ಟಿದ್ದಾರೆ. ನಾನು ನಿಮ್ಮ ಕುಟುಂಬದ ಪರಿಸ್ಥಿತಿ ಬಗ್ಗೆ ಮಾತನಾಡಲು ಹೋಗಲ್ಲ. ನೀವು ಮನಸ್ಸು ಮಾಡಿದರೆ ಖಂಡಿತ ನಿಮ್ಮ ಕ್ಷೇತ್ರಗಳಲ್ಲಿ ಸಾಧಿಸಬಹುದು ಎಂದು ಯಡಿಯೂರಪ್ಪ ತಿಳಿಸಿದರು.

ಸ್ವಾಮಿ ವಿವೇಕಾನಂದರ ಬದುಕು, ಜನರ ಬದುಕನ್ನು ಬದಲಿಸಿದೆ. ಇಂದಿನ ಯುವ ಜನತೆ ಅಧುನಿಕ ಅಲೆಯಲ್ಲಿ ಸಿಲುಕಿ ದೇಶದ ಪರಂಪರೆ ಆಚಾರ-ವಿಚಾರ ಮರೆಯುವ ಪರಿಸ್ಥಿತಿ ಬರುತ್ತಿದೆ. ವಿದ್ಯಾರ್ಥಿಗಳು ವಿದೇಶಿ ವ್ಯಾಮೋಹದಿಂದ ಹೊರಗೆ ಬರಬೇಕು ಎಂದು ಅವರು ಹೇಳಿದರು.

ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಅಲ್ಪಸಂಖ್ಯಾತರ ಮತ್ತು ಬಹುಸಂಖ್ಯಾತರ ನಡುವೆ ಗೊಂದಲ, ಅಡೆತಡೆಗಳನ್ನು ನಿವಾರಿಸಬೇಕು. ರಾಜಕೀಯ ಕಾರಣಗಳಿಗಾಗಿ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರ ನಡುವೆ ಅಡೆತಡೆಗಳನ್ನು ಉಂಟು ಮಾಡುತ್ತಿರುವುದು ಸ್ವಾಮಿ ವಿವೇಕಾನಂದರ ಆದರ್ಶಗಳಿಗೆ ವಿರುದ್ಧವಾದ್ದದು ಎಂದು ತಿಳಿಸಿದರು.

ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾಕೃಷ್ಣಮೂರ್ತಿ ಮಾತನಾಡಿ, ಯುವ ಜನತೆಗೆ ಸಾಧನೆಗೆ ಅಳುಕು, ಹಿಂಜರಿಕೆ ಬೇಡ. ಯಾವುದೇ ಗುರಿಯೊಂದಿಗೆ ಮುನ್ನುಗ್ಗಿ, ಆತ್ಮವಿಶ್ವಾಸದಿಂದ ಮುಂದೆ ಸಾಗಿದರೆ ನಾವು ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವೇದಾ ಕಷ್ಣಮೂರ್ತಿ (ಮಹಿಳಾ ಕ್ರಿಕೆಟ್), ವಿವೇಕಾನಂದ ಹಳ್ಳಿಗೆರೆ (ಬೌನ್ಸ್ ಸ್ಕೂಟರ್ ಸಂಸ್ಥಾಪಕ), ರಾಧಾ ವೆಂಕಟೇಶ್ (ಅಂಗವಿಕಲ ಕ್ರೀಡಾಳು), ಪ್ರಣವ್ ವಿಠಲಪತಿ (ಸಾಫ್ಟ್‌ವೇರ್) ಅವರನ್ನು ಸನ್ಮಾನಿಸಲಾಯಿತು.

ಬೆಂಗಳೂರು ರಾಮಝ್ಕಾಷ್ಣ ಮಠದ ಸ್ವಾಮಿ ಮಂಗಲನಾಥಾನಂದಜಿ ಮಹಾರಾಜ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಸೇರಿದಂತೆ ಪ್ರಮುಖರಿದ್ದರು.

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ಸರಕಾರಿ-ಅನುದಾನಿತ ಕಾಲೇಜುಗಳ 1,09,916 ವಿದ್ಯಾರ್ಥಿಗಳಿಗೆ 311 ಕೋಟಿ ರೂ. ವೆಚ್ಚದಲ್ಲಿ ಲ್ಯಾಪ್‌ಟಾಪ್ ವಿತರಣೆಗೆ ಮುಖ್ಯಮಂತ್ರಿ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News