ನಿರುದ್ಯೋಗ ಸಮಸ್ಯೆಯಿಂದ ಕಂಗೆಟ್ಟು ದೇಶದಲ್ಲಿ ಪ್ರತೀ ದಿನ 10 ಮಂದಿ ಆತ್ಮಹತ್ಯೆ

Update: 2020-01-12 14:30 GMT

ಬೆಂಗಳೂರು, ಜ.12: ನಿರುದ್ಯೋಗ ಮತ್ತು ಬಡತನದಿಂದ ಕಂಗೆಟ್ಟು ದೇಶದಲ್ಲಿ ಪ್ರತೀ ದಿನ 10 ಮಂದಿ (ಇವರಲ್ಲಿ 9 ಪುರುಷರು) ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಪ್ರತೀ ದಿನ 20 ಮಂದಿ ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಯ ಚಟದಿಂದ ಆತ್ಮಹತ್ಯೆಗೆ ಶರಣಾಗುತ್ತಾರೆ ಎಂದು ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೊ( ಎನ್‌ಸಿಆರ್‌ಬಿ)ದ ವರದಿ ತಿಳಿಸಿದೆ.

2018ರಲ್ಲಿ ಭಾರತದಲ್ಲಿ 1.34 ಲಕ್ಷ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಕಳೆದ ವರ್ಷಕ್ಕಿಂತ 3.6% ಅಧಿಕವಾಗಿದೆ. ನಿರುದ್ಯೋಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲೂ 14% ಹೆಚ್ಚಳವಾಗಿದ್ದು 2,700 ಪ್ರಕರಣ ದಾಖಲಾಗಿದೆ. 2018ರಲ್ಲಿ ಬಡತನದ ಸಮಸ್ಯೆಯಿಂದ ಪ್ರತೀ ದಿನ ಸರಾಸರಿ 3 ಮಂದಿಯಂತೆ 1,202 ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. 2018ರಲ್ಲಿ ಕೌಟುಂಬಿಕ ಸಮಸ್ಯೆಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವವರ ಸಂಖ್ಯೆ 30.4% ಆಗಿದ್ದು ಇದು ಕಳೆದ ವರ್ಷಕ್ಕೆ ಹೋಲಿಸಿದರೆ 4.8% ಹೆಚ್ಚಳವಾಗಿದೆ. ಅನಾರೋಗ್ಯದ ಕಾರಣದಿಂದ 18% ಮಂದಿ, ವೈವಾಹಿಕ ಸಮಸ್ಯೆಯಿಂದ 6.2% ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2014ರಿಂದ 2018ರವರೆಗಿನ ಅವಧಿಯಲ್ಲಿ ನಿರುದ್ಯೋಗ, ಬಡತನ ಮತ್ತು ವ್ಯಸನ(ಚಟ)ದ ಸಮಸ್ಯೆಯಿಂದ ದೇಶದಲ್ಲಿ 45,743 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು ಇವರಲ್ಲಿ 12,373 ಮಂದಿ ನಿರುದ್ಯೋಗದಿಂದ, 6,957 ಮಂದಿ ಬಡತನದ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿರುದ್ಯೋಗದ ಕಾರಣ ಆತ್ಮಹತ್ಯೆ ಮಾಡಿಕೊಂಡವರಲ್ಲಿ 18ರಿಂದ 45 ವರ್ಷದೊಳಗಿನವರು 20%, 45ರಿಂದ 60 ವರ್ಷದೊಳಗಿನವರು 10%. ಇವರಲ್ಲಿ 11%ದಷ್ಟು ಮಹಿಳೆಯರಾಗಿದ್ದಾರೆ. ಬಡತನದ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡವರಲ್ಲಿ 30ರಿಂದ 45 ವರ್ಷದವರ ಪ್ರಮಾಣ ಹೆಚ್ಚಿದ್ದು ಮಹಿಳೆಯರ ಪ್ರಮಾಣ 15% ಆಗಿದೆ. 2018ರಲ್ಲಿ ಮಾದಕ ವಸ್ತು ಮತ್ತು ಸಾರಾಯಿ ಚಟದ ಸಮಸ್ಯೆಯ ಕಾರಣ 7,193 ಮಂದಿ (ಪ್ರತೀ ದಿನ ಒಬ್ಬರು) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ 306 ಮಹಿಳೆಯರು. ಮಾದಕ ವಸ್ತು ಚಟದ ಕಾರಣದಿಂದ ಮೃತಪಟ್ಟವರಲ್ಲಿ 18ರಿಂದ 30 ವರ್ಷದೊಳಗಿನವರ ಸಂಖ್ಯೆ 1,774, 45ರಿಂದ 60 ವರ್ಷದೊಳಗಿನವರ ಸಂಖ್ಯೆ 1,908 ಆಗಿದೆ ಎಂದು ವರದಿ ತಿಳಿಸಿದೆ.

ನಿರುದ್ಯೋಗದ ಸಮಸ್ಯೆ, ಕೆಲಸ ನಷ್ಟವಾಗುವ ಸಮಸ್ಯೆ ಎದುರಾದಾಗ ಮಕ್ಕಳ ಶಿಕ್ಷಣ, ಗೃಹ ಮತ್ತು ವಾಹನ ಸಾಲದ ಮರುಪಾವತಿ ಮತ್ತಿತರ ಆತಂಕದಿಂದ ಕಂಗೆಡುತ್ತಾರೆ. ಇದೇ ರೀತಿ ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರಕದಿದ್ದರೆ ಕುಟುಂಬದ ನಿರ್ವಹಣೆಯ ಸಮಸ್ಯೆ ಎದುರಾಗುತ್ತದೆ. ಮದ್ಯಪಾನ, ಮಾದಕ ವಸ್ತು ಸೇವನೆಯ ಚಟದ ಜೊತೆಗೆ ಖಿನ್ನತೆಯ ಸಮಸ್ಯೆ ಎದುರಾದಾಗ ಆತ್ಮಹತ್ಯಾ ಪ್ರವೃತ್ತಿಗೆ ಕಾರಣವಾಗುತ್ತದೆ ಎಂದು ಬೆಂಗಳೂರು ಮೂಲದ ಮನೋರೋಗ ತಜ್ಞ ಜಗದೀಶ್ ಎ ಹೇಳಿದ್ದಾರೆ.

ಶಿಕ್ಷಣ ಪದ್ಧತಿಯ ಚಿಂತನೆ ಬದಲಾಗಬೇಕು

ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ 1960 ಮತ್ತು 1970ರ ಚಿಂತನೆಯನ್ನೇ ಈಗಲೂ ಪಾಲಿಸುತ್ತಿದ್ದೇವೆ. ಇದು ಬದಲಾಗಬೇಕು. ದೇಶಕ್ಕೆ ಈಗ ಎಂಎಸ್‌ಎಂಇ ವಿವಿಗಳ ಅಗತ್ಯವಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ಜನರ ಬಡತನ ನಿವಾರಣೆಯೂ ಆಗುತ್ತದೆ ಎಂದು ಐಎಂಎಫ್‌ನ ಮಾಜಿ ಹಿರಿಯ ಅರ್ಥಶಾಸ್ತ್ರಜ್ಞ ಪ್ರೊ ಚರಣ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News