ಸಿಎಎ ಮೂಲಕ ಮುಸ್ಲಿಮರನ್ನು ದೇಶದಿಂದ ಹೊರ ಹಾಕುವ ಹುನ್ನಾರ: ಎಚ್.ಎಸ್.ದೊರೆಸ್ವಾಮಿ

Update: 2020-01-12 14:52 GMT

ಬೆಂಗಳೂರು, ಜ.12: ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ಪೌರತ್ವ(ತಿದ್ದುಪಡಿ) ಕಾಯ್ದೆಯ ಮೂಲಕ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರನ್ನು ದೇಶದಿಂದ ಹೊರಹಾಕುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದ್ದಾರೆ. 

ನಗರದ ಮಹದೇವಪುರದ ಹೂಡಿ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ವಿಚಾರ ಸಂಕಿರಣ ಹಾಗೂ ಬಿಎಸ್‌ಎಸ್ ಎಲ್ಲ ಧರ್ಮಗಳ ಸೇವಾ ಟ್ರಸ್ಟ್‌ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರ ಸರಕಾರವು ಮುಸ್ಲಿಮರ ವಿರುದ್ಧ ದ್ವೇಷ ಸಾಧನೆಗೆ ಮುಂದಾಗಿದೆ ಎಂದ ಅವರು, ಬಿಜೆಪಿಗೆ ಮತ ಹಾಕದವರನ್ನು ದೇಶದಿಂದಲೇ ತೊಲಗಿಸಬೇಕು ಎಂಬ ಹುನ್ನಾರ ಮಾಡಿದೆ. ಅದಕ್ಕಾಗಿ, ಸಿಎಎ ಮತ್ತು ಎನ್‌ಆರ್‌ಸಿ ಜಾರಿ ಮಾಡುವ ಮೂಲಕ ಮುಸ್ಲಿಮರನ್ನು ಜೈಲಿಗೆ ಹಾಕಲು ಮುಂದಾಗಿದ್ದಾರೆ ಎಂದು ಅಪಾದಿಸಿದರು.

ಜನರನ್ನು ದಿಕ್ಕು ತಪ್ಪಿಸುವುದು ಪ್ರಧಾನಿ ಮೋದಿಗೆ ಬೇಕಾಗಿದೆ. ಹೀಗಾಗಿ, ಜನರು ಎಚ್ಚೆತ್ತಿಕೊಳ್ಳಬೇಕು. ಮುಂದೊಂದು ದಿನ ಭಾರತ ಮತ್ತೊಂದು ಪಾಕಿಸ್ತಾನವಾಗದಂತೆ ತಡೆಯಬೇಕಿದೆ. ಇಲ್ಲಿ ಎಲ್ಲರೂ ಇದ್ದಾರೆ, ಹಿಂದೂಗಳಿಗೆ ಅಷ್ಟೇ ಸೀಮಿತವಾದ ದೇಶ ನಮ್ಮದಲ್ಲ ಎಂದು ಅವರು ಪ್ರತಿಪಾದಿಸಿದರು.

ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ ಹೆಗ್ಡೆ ಮಾತನಾಡಿ, ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ನಾನು ಲೋಕಾಯುಕ್ತರಾಗಿ ಅಧಿಕಾರಕ್ಕೆ ಬಂದ ಬಳಿಕ ಕಂಡುಕೊಂಡೆ. ಅಲ್ಲದೆ, ಅದರ ವಿರುದ್ಧ ಸಾಕಷ್ಟು ಕೆಲಸ ಮಾಡಿದ್ದೇನೆ. ಇಂದಿನ ಸಮಾಜದಲ್ಲಿ ಜೈಲಿಗೆ ಹೋಗಿ ಬಂದವರನ್ನು ಸನ್ಮಾನ ಮಾಡುವ ಪ್ರವೃತ್ತಿ ಬೆಳೆದಿದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವವರ ಸಂಖ್ಯೆ ಅಧಿಕವಾಗಬೇಕಿದೆ ಎಂದರು.

ಮನುಷ್ಯರು ಮಾನವೀಯತೆ ಬೆಳೆಸಿಕೊಳ್ಳಬೇಕು. ಒಳ್ಳೆಯದು ಮಾಡುವುದು ರೂಢಿಸಿಕೊಳ್ಳಬೇಕು ಎಂದ ಅವರು, ಶ್ರೀಮಂತರಾಗಬೇಕು ಎಂಬ ಆಸೆ ಇರುತ್ತದೆ. ಆದರೆ, ಕಾನೂನಿನ ಚೌಕಟ್ಟಿನಲ್ಲಿ ಹಣ ಸಂಪಾದನೆ ಮಾಡುವುದು ಕಂಡುಕೊಳ್ಳಬೇಕು. ತಪ್ಪುಗಳನ್ನು ಪ್ರಶ್ನಿಸುವುದು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಎಸ್‌ಎಸ್ ಸರ್ವಧರ್ಮಗಳ ಟ್ರಸ್ಟ್‌ನ ಅಧ್ಯಕ್ಷ ಡಾ.ಎಚ್.ಎಂ.ರಾಮಚಂದ್ರ, ಕಸಾಪ ಮಹದೇವಪುರ ಅಧ್ಯಕ್ಷ ಡಾ.ಅಜಿತ್, ಶಿವರಾಮ್, ಕಿರಣ್, ಸೈಯದ್ ಅಬ್ದುಲ್ಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News