ಜನರ ಸಮಸ್ಯೆ ರಾಜಕಾರಣಿಗಳಿಗೆ ಆಶ್ವಾಸನೆಗೆ ಸೀಮಿತ: ಮಾಜಿ ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು, ಜ.12: ಇಂದಿನ ರಾಜಕಾರಣಿಗಳಿಗೆ ಸಂಸತ್ತು ಪ್ರವೇಶಿಸಿದ ನಂತರ ಅವರ ಆದ್ಯತಾ ವಿಷಯಗಳೇ ಬೇರೆಯಾಗುತ್ತಿವೆ. ಅವರು ಜನರ ಸಮಸ್ಯೆಗಳನ್ನು ಆಶ್ವಾಸನೆಗೆ ಮಾತ್ರ ಸೀಮಿತಗೊಳಿಸುತ್ತಾರೆಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ರವಿವಾರ ಗಾಂಧಿ ಭವನದಲ್ಲಿ ಎಂ.ಎಸ್.ಕೃಷ್ಣನ್ ಸ್ಮರಣ ಸಂಸ್ಥೆ, ಕೆಂಬಾವುಟ ವಾರಪತ್ರಿಕೆ ಹಾಗೂ ನವಕರ್ನಾಟಕ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಬಿ.ವಿ.ಕಕ್ಕಿಲ್ಲಾಯ ನೂರರ ನೆನಪು ಸಂಭ್ರಮದಲ್ಲಿ ಆಯೋಜಿಸಿದ್ದ ಪುಸ್ತಕಗಳ ಲೋಕಾರ್ಪಣೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆಗೆ ನಿಂತಾಗ ಜನರ ಜೀವನ ಮಟ್ಟವನ್ನು ಸುಧಾರಿಸುತ್ತೇವೆ ಎಂದು ಆಶ್ವಾಸನೆ ನೀಡುವವರು. ಅಧಿಕಾರ ಚುಕ್ಕಾಣಿ ಹಿಡಿದ ಮೇಲೆ ಅದನ್ನು ಭರವಸೆಯಾಗಿಯೇ ಉಳಿಸುತ್ತಿದ್ದಾರೆ ಎಂದು ವಿಷಾದಿಸಿದರು.
ಈಗಿನ ರಾಜಕಾರಣಿಗಳಿಗೆ ಜನರ ಜೀವನ ಗುಣಮಟ್ಟ ಸುಧಾರಿಸುವುದು, ಜೆಡಿಪಿ ಹೆಚ್ಚಳ, ಉದ್ಯೋಗ ಹೆಚ್ಚಳ, ಸಾರ್ವಜನಿಕ ವಲಯವನ್ನು ಅಭಿವೃದ್ಧಿಪಡಿಸುವುದು ಮುಂತಾದವುಗಳ ಬಗ್ಗೆ ಗಮನಹರಿಸಲು ಆಗುವುದಿಲ್ಲ. ಆದರೆ, ಜನರಿಗೆ ಅಗತ್ಯವಲ್ಲದ ಹಾಗೂ ಜನರನ್ನು ಮತ್ತಷ್ಟು ಸಮಸ್ಯೆಗಳಿಗೆ ಸಿಲುಕಿಸುವಂತಹ ತಲಾಖ್, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಎನ್‌ಆರ್‌ಸಿ ಇಂತಹ ಕಾನೂನುಗಳನ್ನು ಜಾರಿಗೊಳಿಸುವುದಕ್ಕೆ ಉತ್ಸುಕರಾಗಿದ್ದಾರೆಂದು ಅವರು ಕಿಡಿಕಾರಿದರು.
ರಾಜಕಾರಣಿಯೊಬ್ಬ ಎರಡು ಬಾರಿ ಚುನಾವಣೆಯಲ್ಲಿ ಗೆದ್ದರೆ ಸೋಲಿಲ್ಲದ ಸರದಾರ, ಜನನಾಯಕ ಎಂಬೆಲ್ಲಾ ಬಿರುದು ನೀಡುತ್ತಾರೆ. ಆದರೆ, ಯಾವ ನಾಯಕನಿಗೂ ಬದ್ಧತೆ ಇಲ್ಲ. ರಾಜಕೀಯ ಬದ್ಧತೆಯಿಂದ ಸಭೆಯನ್ನು ಪ್ರವೇಶ ಮಾಡಿ, ಅದೇ ಸೈದ್ಧಾಂತಿಕ ನೆಲಗಟ್ಟಿನಲ್ಲಿ ನಿರ್ಭಯವಾಗಿ, ಯಾವುದೇ ಅಂಗಿಲ್ಲದೆ ಮಾತನಾಡಲು ಬಹಳ ಯೋಗ್ಯತೆ ಬೇಕು ಎಂದು ಅವರು ಹೇಳಿದರು.
ಸಾರ್ವಜನಿಕ ಜೀವನ, ಚುನಾವಣೆ ಪ್ರವೇಶಿಸಿ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಜೀವನ ನಡೆಸುವುದು ತುಂಬಾ ಕಷ್ಟವಾದುದು. ಅಂತಹ ಜೀವನವನ್ನು ಬಿ.ವಿ.ಕಕ್ಕಿಲ್ಲಾಯ ಅವರು ಬದುಕಿ ತೋರಿದ್ದಾರೆ. ಜೊತೆಗೆ ಭಾಷಾ ಪ್ರಭುದ್ಧತೆ ಅತ್ಯುತ್ತಮವಾಗಿದ್ದು, ಇದನ್ನು ಜನರ ಒಳಿತಿಗಾಗಿ ಯಾವ ರೀತಿ ಬಳಸಬೇಕು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಅವರು ಸ್ಮರಿಸಿದರು.
ಸಮಾರಂಭದಲ್ಲಿ ಬಿ.ವಿ.ಕಕ್ಕಿಲ್ಲಾಯ ಅವರ ಬಿ.ವಿ.ಕಕ್ಕಿಲ್ಲಾಯ ಇನ್ ಪಾರ್ಲಿಮೆಂಟ್, ಮನುಷ್ಯನ ಮಹಾಯಾನ, ಕರ್ನಾಟಕ ವಿಧಾನಸಭೆಯಲ್ಲಿ ಎಂಬ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೆಂಬಾವುಟ ಪ್ರಕಶಕ ಸಾತಿ ಸುಂದರೇಶ್, ಎಂ.ಎಸ್.ಕೃಷ್ಣನ್ ಸ್ಮರಣ ಸಂಸ್ಥೆಯ ಅಧ್ಯಕ್ಷೆ ವಸುಂಧರಾ ಭೂಪತಿ, ಚಿಂತಕ ಬಿ.ಶ್ರೀನಿವಾಸ ಕಕ್ಕಿಲ್ಲಾಯ, ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ಸಿದ್ಧನಗೌಡ ಪಾಟೀಲ ಸೇರಿದಂತೆ ಮತ್ತಿತರರಿದ್ದರು.
‘ದೇಶದ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಬಾಯಿ ಪಟೇಲರು ದೇಶಕ್ಕೆ ಸ್ವಾತಂತ್ರಸಿಕ್ಕ ಪ್ರಾರಂಭದಲ್ಲಿ ವಿವಿಧ ಪ್ರಾಂತ್ಯಗಳಾಗಿ ಚದುರಿಹೋಗಿದ್ದ ಭಾರತವನ್ನು ತಮ್ಮ ಅವಿರತ ಪರಿಶ್ರಮದಿಂದಾಗಿ ಒಟ್ಟುಗೂಡಿಸಿದರು. ಆದರೆ, ಈಗಿನ ಗೃಹ ಮಂತ್ರಿ ಅಮಿತ್ ಶಾ ಕಾರ್ಯಯೋಜನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ದೇಶದ ಒಕ್ಕೂಟ ವ್ಯವಸ್ಥೆಯನ್ನು ಒಡೆಯುವುದಕ್ಕೆ ಎಲ್ಲ ರೀತಿಯ ತಯಾರಿ ಮಾಡಕೊಂಡಿದ್ದಾರೆ ಎಂದೆನಿಸುತ್ತದೆ. ಸಿಎಎ ಕಾಯ್ದೆಯಿಂದ ಕೇವಲ ಮುಸ್ಲಿಮರಿಗೆ ಮಾತ್ರ ತೊಂದರೆಯುಂಟಾಗುವುದಿಲ್ಲ. ಎಲ್ಲ ಜನತೆಗೂ ಅನ್ವಯಿಸುತ್ತದೆ. ಹೀಗಾಗಿ ಇದರ ಬಗ್ಗೆ ತಿಳಿದ ಯುವಜನತೆ ಬೀದಿಗಿಳಿದಿದ್ದಾರೆ. ಅನೇಕ ವರ್ಷಗಳ ನಂತರ ಇಷ್ಟು ಪ್ರಮಾಣದಲ್ಲಿ ಬೀದಿಗಿಳಿದಿರುವುದು ಇದೇ ಮೊದಲು’
-ರಮೇಶ್ ಕುಮಾರ್, ಮಾಜಿ ಸ್ಪೀಕರ್