ಬಿಬಿಎಂಪಿ ಚುನಾವಣೆಗೆ ಸಿದ್ಧರಾಗಿ: ಜೆಡಿಎಸ್ ಮುಖಂಡರು, ಕಾರ್ಯಕರ್ತರಿಗೆ ದೇವೇಗೌಡ ಸಲಹೆ

Update: 2020-01-12 18:12 GMT

ಬೆಂಗಳೂರು, ಜ.12: ಮುಂಬರುವ ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಆರಂಭಿಸುವಂತೆ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ಸಲಹೆ ನೀಡಿದ್ದಾರೆ.

ರವಿವಾರ ಜೆ.ಪಿ ಭವನದಲ್ಲಿ ನಡೆದ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆ ಯಾವಾಗ ಬೇಕಾದರೂ ಬರಲಿ, ಆದರೆ ಚುನಾವಣೆ ಎದುರಿಸಲು ಪಕ್ಷ ಸಜ್ಜಾಗಿರಬೇಕು ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ತಂದವರು ನಾವು. ಅದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಪಕ್ಷ ಸಂಘಟನೆ ಹೆಚ್ಚಿಸಬೇಕು. ಎಲ್ಲರೂ ಒಗ್ಗೂಡಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಹಾಗೆಯೇ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲು ಮೂರೂವರೆ ವರ್ಷ ಕಾಲಾವಕಾಶವಿದೆ. ಆದರೂ, ಈಗಿನಿಂದಲೇ ಚುನಾವಣೆ ಸಿದ್ಧತೆ ಆರಂಭಿಸುವುದು ಸೂಕ್ತ. ಸದ್ಯಕ್ಕೆ ಚುನಾವಣೆ ಇಲ್ಲ ಎಂದು ಮೈ ಮರೆತು ಕೂರುವುದು ಬೇಡ. ಪಕ್ಷ ಸಂಘಟನೆ ಹಾಗೂ ಚುನಾವಣೆಗೆ ಸಿದ್ಧತೆಯನ್ನು ಜತೆ ಜತೆಯಲ್ಲೇ ಮಾಡಬೇಕು ಎಂದು ಪಕ್ಷದ ಮುಖಂಡರಿಗೆ ಕಿವಿಮಾತು ಹೇಳಿದರು.

ಮಹಿಳಾ ಕಾರ್ಯಕರ್ತರು ಹೋರಾಟ ಹಾಗೂ ಚುನಾವಣೆ ಸಿದ್ಧತೆಯಿಂದ ಹಿಂದೆ ಸರಿಯಬೇಕಿಲ್ಲ. ಕೇರಳದಲ್ಲಿ ಜೆಡಿಎಸ್ ಪಕ್ಷದ ಮಹಿಳಾ ಕಾರ್ಯಕರ್ತೆಯರು ಶಿಸ್ತಿನಿಂದ ಮುಂಬರುವ ವಿಧಾನಸಭೆ ಚುನಾವಣೆ ಸಿದ್ಧತೆ ಆರಂಭಿಸಿದ್ದಾರೆ. ಅವರ ರೀತಿಯಲ್ಲಿಯೇ ಮಹಿಳಾ ಕಾರ್ಯಕರ್ತರು ಮುಂಬರುವ ಚುನಾವಣೆ ಸಿದ್ಧತೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News