ಬೆಂಗಳೂರು: ಸಿಎಎ, ಎನ್‌ಆರ್‌ಸಿ ವಿರುದ್ಧ ಕರಾವಳಿ ಒಕ್ಕೂಟದಿಂದ ಜ.13ರಂದು ಬೃಹತ್ ಪ್ರತಿಭಟನೆ

Update: 2020-01-12 18:22 GMT

ಬೆಂಗಳೂರು, ಜ. 12: ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ವಿರೋಧಿಸಿ ಕರಾವಳಿ ಒಕ್ಕೂಟದ ವತಿಯಿಂದ ನಾಳೆ(ಜ.13) ಬೆಂಗಳೂರಿನ ಪುರಭವನದ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ದೇಶವು ಆರ್ಥಿಕ ಸಂಕಷ್ಟದಲ್ಲಿರುವಾಗ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಕೇಂದ್ರ ಸರಕಾರ ಇಂತಹ ಕರಾಳ ಕಾನೂನಿನ ಮೊರೆ ಹೋಗಿದೆ. ಆ ಮೂಲಕ ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸಲು, ಜನರ ನಡುವೆ ಭಿನ್ನತೆ ಸೃಷ್ಟಿಸಲು ಮುಂದಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಆರೋಪಿಸಿದ್ದಾರೆ.

ಈ ಕಾನೂನನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ಅತ್ಯಂತ ಅಮಾನುಷವಾಗಿ ವರ್ತಿಸಿದ್ದಾರೆ. ಈ ಎಲ್ಲ ಅಂಶಗಳನ್ನು ಮುಂದಿಟ್ಟು ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿ ಭಾಗದ ಜನರ ಸಂಘಟನೆಯಾದ ಕರಾವಳಿ ಒಕ್ಕೂಟದಡಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಾಳೆ (ಜ.13)ಮಧ್ಯಾಹ್ನ 2.30ಕ್ಕೆ ಆರಂಭಗೊಳ್ಳುವ ಈ ಪ್ರತಿಭಟನೆಯಲ್ಲಿ ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಭವ್ಯಾ ನರಸಿಂಹ ಮೂರ್ತಿ, ಮಹೇಂದ್ರ ಕುಮಾರ್, ಸಂಪತ್ ಸುಬ್ಬಯ್ಯ, ಜಿ.ಎ. ಬಾವಾ, ನಿಕೇತ್ ರಾಜ್ ಮೌರ್ಯ, ಜಗದೀಶ್ ಮಹದೇವ್, ಕೃಷ್ಣಯ್ಯ, ನಟ, ಚೇತನ್ ಅಹಿಂಸಾ ಒಕ್ಕೂಟದ ಅಧ್ಯಕ್ಷ ಅಬೂಬಕರ್ ಎಚ್. ಸೇರಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News