ಡಿಕೆಶಿ ಕೃಪಾಕಟಾಕ್ಷದಿಂದ ದಾಖಲೆ ತಿದ್ದುವ ಕೆಲಸ ನಡೆಯುತ್ತಿದೆ: ಸಚಿವ ಆರ್.ಅಶೋಕ್ ಆರೋಪ

Update: 2020-01-13 12:17 GMT

ಡಿ.ಕೆ ಶಿವಕುಮಾರ್ ಕನಕಪುರ ಶಾಸಕರು, ಕನಕಪುರ ಅವರಿಗೆ ಸಂಬಂಧಿಸಿಲ್ಲ

ಬೆಂಗಳೂರು, ಜ. 13: ಕನಕಪುರ ಕ್ಷೇತ್ರದ ಹಾರೋಬೆಲೆ ಸಮೀಪದ ಕಪಾಲ ಬೆಟ್ಟದಲ್ಲಿ ಏಸು ಪುತ್ಥಳಿ ನಿರ್ಮಾಣ ಸಂಬಂಧದ ದಾಖಲೆಗಳನ್ನು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕೃಪಾಕಟಾಕ್ಷದಿಂದ ದಾಖಲೆಗಳನ್ನೇ ತಿದ್ದಲಾಗುತ್ತದೆ. ಆದರೆ, ಇದೆಲ್ಲ ನಡೆಯುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಸಿದ್ದಾರೆ.

ಸೋಮವಾರ ಪದ್ಮನಾಭನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೂಲ ದಾಖಲೆಗಳಿಂದ ಸತ್ಯ ಗೊತ್ತಾಗಲಿದೆ. ಏಸು ಪ್ರತಿಮೆ ನಿರ್ಮಾಣ ಸಂಬಂಧ ವರದಿ ನಿರೀಕ್ಷೆಯಲ್ಲಿದ್ದು, ಆ ಬಳಿಕ ಸರಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು. ಏಸು ಪ್ರತಿಮೆ ಸ್ಥಾಪನೆ ಪ್ರಕರಣದ ವರದಿ ಬರುತ್ತಿದ್ದಂತೆ ಸರಕಾರ ದಿಟ್ಟ ಕ್ರಮ ಕೈಗೊಳ್ಳುತ್ತದೆ. ಅದೇ ರೀತಿ ರಾಮನಗರ ಜಿಲ್ಲೆಯ ಮುನೇಶ್ವರ ಬೆಟ್ಟದಲ್ಲಿಯೂ ಅಕ್ರಮವಾಗಿ ಶಿಲುಬೆ ನಿರ್ಮಾಣ ಮಾಡಿದವರ ವಿರುದ್ಧ ಕ್ರಮ ಖಚಿತ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಕನಕಪುರ ಕ್ಷೇತ್ರದ ಶಾಸಕರು ಅಷ್ಟೇ. ಕನಕಪುರ ಅವರಿಗೆ ಸಂಬಂಧಿಸಿಲ್ಲ. ನಾವು ಯಾವುದೇ ಗಲಾಟೆ ಮಾಡುವುದಿಲ್ಲ. ಗಲಾಟೆ ಮಾಡಿಸುವವರು ಶಿವಕುಮಾರ್. ಹೀಗಾಗಿ ಪ್ರಚೋದನೆ ಮಾಡುವುದು ಬೇಡ ಎಂದು ತಿರುಗೇಟು ನೀಡಿದರು.

ನಮಗೆ ಯಾವ ಧರ್ಮವೂ ವಿರೋಧಿಯಲ್ಲ. ಮೊದಲಿಗೆ ನಮ್ಮ ಧರ್ಮವನ್ನು ಪೂಜಿಸಿ ಬಳಿಕ ಅನ್ಯ ಧರ್ಮವನ್ನು ಆರಾಧಿಸೋಣ ಎಂದ ಅವರು, ರಾಜ್ಯ ಸರಕಾರದ ಸೂಚನೆ, ಕಾನೂನು ಉಲ್ಲಂಘಿಸಿರುವ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News