ಬೆಂಗಳೂರು: ಜೆಎನ್‌ಯು, ಜೆಎನ್‌ಸಿ ಮೇಲಿನ ದಾಳಿ ಖಂಡಿಸಿ ಬೀದಿಗಿಳಿದ ವಿದ್ಯಾರ್ಥಿಗಳು

Update: 2020-01-13 13:28 GMT

ಬೆಂಗಳೂರು, ಜ.13: ಹಿಂದೂ-ಮುಸ್ಲಿಂ ಶತ್ರುಗಳಲ್ಲ. ನಮ್ಮಲ್ಲಿ ಯಾವ ಧರ್ಮದ ರಕ್ತವೂ ಅಲ್ಲ, ಮಾನವ ರಕ್ತವೆಲ್ಲವೂ ಕೆಂಪೇ ಎಂದು ಘೋಷಣೆ ಕೂಗುವ ಮೂಲಕ ವಿದ್ಯಾರ್ಥಿಗಳು ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ನಿರಂತರವಾಗಿ ಹೋರಾಟ ಮಾಡುವ ಎಚ್ಚರಿಕೆ ನೀಡಿದರು. 

ಸೋಮವಾರ ಸ್ವಾತಂತ್ರ ಉದ್ಯಾನವನದಲ್ಲಿ ಎನ್‌ಎಸ್‌ಯುಐ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಜೆಎನ್‌ಯು, ಜೆಎನ್‌ಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡಿಸಿ, ಧ್ವಜ ಹೊತ್ತು ಏಕತಾ ನಡಿಗೆ ನಡೆಸುವ ಮೂಲಕ ಪ್ರತಿಭಟನೆ ಮಾಡಿದರು. ಆಳುವ ಸರಕಾರವೇ ವಿದ್ಯಾರ್ಥಿಗಳ ಮೇಲಿನ ದಾಳಿಗಳನ್ನು ಸಮರ್ಥಿಸಿಕೊಳ್ಳುತ್ತಿರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯ ಲಕ್ಷಣವಲ್ಲವೆಂದು ಆತಂಕ ವ್ಯಕ್ತಪಡಿಸಿದರು.

ಜೆಎನ್‌ಯು ವಿದ್ಯಾರ್ಥಿಗಳು ಶುಲ್ಕ ಹೆಚ್ಚಳ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಂತಿಯುತವಾಗಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟ ದೇಶದ ಜನತೆಯನ್ನು ಆಕರ್ಷಿಸಿದ್ದು, ವಿದ್ಯಾರ್ಥಿಗಳ ಪರವಾದ ವಾತಾವರಣ ನಿರ್ಮಾಣವಾಗುತ್ತಿತ್ತು. ಇದನ್ನು ಸಹಿಸದ ಎಬಿವಿಪಿ ಗೂಂಡಾಗಳು ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್ ಸೇರಿದಂತೆ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪ್ರಾಧ್ಯಾಪಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಇದನ್ನು ದೇಶದ ವಿದ್ಯಾರ್ಥಿ ಸಮುದಾಯ ಸಹಿಸುವುದಿಲ್ಲವೆಂದು ಪ್ರತಿಭಟನಾನಿರತರು ಎಚ್ಚರಿಕೆ ನೀಡಿದರು.

ಆರೆಸ್ಸೆಸ್ ನೇತೃತ್ವದ ಎಬಿವಿಪಿ ಗೂಂಡಾಪಡೆ ಮಾರಕಾಸ್ತ್ರಗಳ ಸಮೇತ ವಿಶ್ವವಿದ್ಯಾಲಯದ ಒಳಗೆ ಪ್ರವೇಶಿಸಿದೆ. ಇದನ್ನು ಪೊಲೀಸರು ನೋಡಿದರು ಮೌನವಹಿಸಿರುವುದು, ಕೃತ್ಯವು ಪೂರ್ವನಿಯೋಜಿತವಾಗಿ ನಡೆದಿದೆ ಎಂಬುದಕ್ಕೆ ಪ್ರಬಲವಾದ ಸಾಕ್ಷಿಯಾಗಿದೆ. ಹೆಣ್ಣು ಮಕ್ಕಳ ಕೊಠಡಿಗಳಿಗೆ ನುಗ್ಗಿ ಮಾರಕಾಸ್ತ್ರಗಳಿಂದ ಮನಬಂದಂತೆ ಥಳಿಸಿರುವುದು ಬಿಜೆಪಿಯ ಸಂಸ್ಕೃತಿಯನ್ನು ದೇಶದ ಮುಂದೆ ತೆರೆದಿಟ್ಟಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಎನ್‌ಎಸ್‌ಯುಐ ಅಧ್ಯಕ್ಷ ಎಚ್.ಎಸ್.ಮಂಜುನಾಥ್ ಮಾತನಾಡಿ, ಜೆಎನ್‌ಯುನಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಶಿಕ್ಷಣ ಸಿಗುತ್ತಿದೆ. ಅದರಲ್ಲಿ ಬಡವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದಾರೆ. ಇದನ್ನು ಸಹಿಸದ ಕೇಂದ್ರ ಸರಕಾರ ವಿಶ್ವವಿದ್ಯಾಲಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರಕಾರ ದೇಶದ ಜನರ ಮೇಲೆ ಬಲವಂತವಾಗಿ ತನ್ನ ನೀತಿಗಳನ್ನು ಹೇರಿಕೆ ಮಾಡುತ್ತಿದೆ. ಇದನ್ನು ವಿರೋಧಿಸಿ ವಿದ್ಯಾರ್ಥಿಗಳಿಂದು ಬೀದಿಗೆ ಇಳಿದಿದ್ದಾರೆ. ಇದನ್ನು ಸಹಿಸದೇ ವಿದ್ಯಾರ್ಥಿಗಳ ಮೇಲೆ ದಾಳಿಗೆ ಮುಂದಾಗಿದೆ. ಮೊನ್ನೆ ಜಾಮಿಯಾ ವಿಶ್ವವಿದ್ಯಾಲಯ, ಇಂದು ಜೆಎನ್‌ಯು, ನಾಳೆ ಎಲ್ಲಿ ಬೇಕಾದರೂ ಇಂತಹ ಕೃತ್ಯ ಮರುಕಳಿಸಬಹುದು. ಇದು ಅತ್ಯಂತ ಹೇಯ ಕೆಲಸ ಎಂದು ಅವರು ವಾಗ್ದಾಳಿ ನಡೆಸಿದರು.

ಈ ವೇಳೆ ಈ ದೇಶ ನಮ್ಮದು, ಇಲ್ಲಿ ಕೋಮುವಾದ ನಡೆಯದು ಎಂದು ಕೂಗುತ್ತಾ ಜಾಥಾದಲ್ಲಿ ಸಾಗಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಎಸ್.ಎ.ಹುಸೇನ್, ರಾಜ್ಯ ಸಂಚಾಲಕ ಕೆ.ಎನ್.ಮುನೀಂದ್ರ ಸೇರಿದಂತೆ ಎನ್‌ಎಸ್‌ಯುಐ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News