×
Ad

ಬೆಂಗಳೂರು: ಗೋಲಿಬಾರ್, ಸಿಎಎ, ಎನ್ಆರ್‌ಸಿ ವಿರೋಧಿಸಿ ಕರಾವಳಿ ಒಕ್ಕೂಟದಿಂದ ಪ್ರತಿಭಟನೆ

Update: 2020-01-13 19:42 IST

ಬೆಂಗಳೂರು, ಜ.13: ನಾವು ಭಾರತೀಯರು, ನಮ್ಮ ಹಕ್ಕುಗಳನ್ನು ಕಸಿಯಲು ಸಾಧ್ಯವಿಲ್ಲ. ಇದನ್ನು ಕೇಂದ್ರ ಸರಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಕೇರಳದ ರಾಜ್ಯಸಭಾ ಸದಸ್ಯ ಬಿನೋಯ್ ವಿಶ್ವಂ ಹೇಳಿದರು.

ಸೋಮವಾರ ನಗರದ ಪುರಭವನ ಮುಂಭಾಗ ಕರಾವಳಿ ಒಕ್ಕೂಟ(ಬೆಂಗಳೂರು) ನೇತೃತ್ವದಲ್ಲಿ ನಡೆದ ಸಿಎಎ, ಎನ್ಆರ್‌ಸಿ, ಎನ್‌ಪಿಆರ್ ಹಾಗೂ ಮಂಗಳೂರು ಗೋಲಿಬಾರ್ ಖಂಡಿಸಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸಂವಿಧಾನದಿಂದ ಎಲ್ಲರೂ ಒಂದಾಗಿದ್ದೇವೆ. ಎಲ್ಲ ವಿಭಾಗಗಳಲ್ಲೂ ತ್ಯಾಗ ಮಾಡಿರುವವರು ಇದ್ದಾರೆ. ಅಲ್ಲದೆ, ದೇಶ ಕಟ್ಟಲು ಎಲ್ಲ ಸಮುದಾಯದವರ ಪಾತ್ರವಿದೆ. ಹೀಗಿರುವ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಲು ಸರಕಾರ ಎನ್‌ಆರ್‌ಸಿ, ಸಿಎಎ ಜಾರಿಗೊಳಿಸಲು ಹೊರಟಿರುವ ಕ್ರಮ ಸರಿಯಲ್ಲ ಎಂದು ಟೀಕಿಸಿದರು.

ಕಾಯ್ದೆ ತಿದ್ದುಪಡಿ ತರುವ ಮೂಲಕ ದೀನ ದಲಿತರು, ತಳ ಸಮುದಾಯದ ಜನರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿ ಮಾಡಿ, ಮತ್ತೆ ಅಧಿಕಾರಕ್ಕೆ ಬರುವುದು ಕೇಂದ್ರದ ತಂತ್ರವಾಗಿದೆ ಎಂದು ವಾಗ್ದಾಳಿ ನಡೆಸಿದ ಅವರು, ಅಸ್ಸಾಂನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದ ಎನ್‌ಆರ್‌ಸಿ ದೋಷಗಳಿಂದ ಕೂಡಿದ್ದು ಎಲ್ಲರಿಗೂ ತಿಳಿದಿದೆ. ಈ ನಡುವೆಯೇ ಇದನ್ನು ಇಡೀ ದೇಶಕ್ಕೆ ವಿಸ್ತರಿಸಲು ಕೇಂದ್ರ ಸರಕಾರ ಮುಂದಾಗಿರುವುದು ದುರದಷ್ಟಕರ ಎಂದರು.

ಸಾಮಾಜಿಕ ಚಿಂತಕ ಮಹೇಂದ್ರ ಕುಮಾರ್ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಪ್ರಕ್ರಿಯೆ ಅನ್ನು ಮುಂದಿಟ್ಟುಕೊಂಡು, ಶೀಘ್ರವಾಗಿ ಬ್ರಾಹ್ಮಣ್ಯ ಸ್ಥಾಪಿಸಿ, ನೂರು ವರ್ಷಗಳ ಹಳೆಯ ದಬ್ಬಾಳಿಕೆ ಪದ್ಧತಿ ಜಾರಿಗೆ ಬಹುದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.

ಮುಸ್ಲಿಮ್ ಮತ್ತು ಪಾಕಿಸ್ತಾನವನ್ನು ವಿರೋಧ ಮಾಡುವುದನ್ನೇ ಕೆಲವರು ದೇಶಭಕ್ತಿ ಎಂದು ಭಾವಿಸಿಕೊಂಡಿದ್ದಾರೆ ಎಂದ ಅವರು, ಹಿಂದೂ ಸಮಾಜ ಕಟ್ಟಲು ಯಾವುದೇ ಕೆಲಸ ಮಾಡಲ್ಲ. ದಲಿತರ ಮೇಲೆ ಅಮಾನೀಯವಾದ ಕೃತ್ಯ ನಡೆದರೂ ಒಮ್ಮೆಯೂ ಧ್ವನಿಗೂಡಿಸುವುದಿಲ್ಲ. ಆರೆಸ್ಸೆಸ್ ಸಹ ದಲಿತರಿಗಾಗಿ ಬೀದಿಗಿಳಿದು ಹೋರಾಟ ನಡೆಸಿಲ್ಲ. ಹಾಗಾಗಿ, ಹುಸಿ ಹಿಂದುತ್ವದಿಂದ ಯುವ ಜನರು ಹೊರಬರಬೇಕು ಎಂದು ಅವರು ತಿಳಿಸಿದರು.

ಹೋರಾಟಗಾರ್ತಿ ಭವ್ಯಾ ನರಸಿಂಹಮೂರ್ತಿ ಮಾತನಾಡಿ, ಯಾರು ಸಹ ಪೌರತ್ವ ಸಾಬೀತುಪಡಿಸುವ ಅಗತ್ಯತೆ ಇಲ್ಲ. ಅಲ್ಲದೆ, ಸಿಎಎ ವಿರೋಧ ಮಾಡಿದಕ್ಕೆ ಇದುವರೆಗೂ 30 ಮಂದಿ ಸಾವನ್ನಪ್ಪಿದ್ದಾರೆ. ಇನ್ನು, ಇದು ಪೂರ್ಣ ಪ್ರಮಾಣದಲ್ಲಿ ಜಾರಿಯಾದರೆ ಎಷ್ಟು ಜನರು ತಮ್ಮ ಪ್ರಾಣ ನೀಡಬೇಕಾಗಬಹುದೋ ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ನ್ಯಾಯವಾದಿ ಕೆ.ಎನ್.ಜಗದೀಶ್ ಕುಮಾರ್, ಕರಾವಳಿ ಒಕ್ಕೂಟ(ಬೆಂಗಳೂರು) ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಸೇರಿದಂತೆ ಚಿಂತಕರು, ಸಮಾನ ಮಾನಸ್ಕರ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.

‘ಭಯೋತ್ಪದಕರು ಬರುತ್ತಾರೆ’

ಸಿಎಎಯಿಂದ ದೇಶದ ಭದ್ರತೆ ಮೇಲೂ ಗಂಭೀರ ಪರಿಣಾಮ ಬೀರಲಿದ್ದು, ಮುಂದಿನ ದಿನಗಳಲ್ಲಿ ಭಯೋತ್ಪಾದಕರು ತಾವು ಹಿಂದೂಗಳೆಂದು ದಾಖಲೆ ಸೃಷ್ಟಿಸಿ ದೇಶಕ್ಕೆ ನುಗ್ಗಿ ಬರುವ ದಿನಗಳು ದೂರ ಇಲ್ಲ ಎಂದು ಮಹೇಂದ್ರ ಕುಮಾರ್ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News