×
Ad

ದೇಶದ ಯುವಶಕ್ತಿ ಪೌರತ್ವ ಕಾಯ್ದೆ ವಿರುದ್ಧ ಸಮರ ಸಾರಿದೆ: ಸಸಿಕಾಂತ್ ಸೆಂಥಿಲ್

Update: 2020-01-13 20:20 IST

ಬೆಂಗಳೂರು, ಜ.13: ದೇಶದಲ್ಲಿಂದು ಕೇಂದ್ರ ಸರಕಾರ ಜಾರಿಗೆ ಮಾಡಲು ಮುಂದಾಗಿರುವ ಎನ್‌ಆರ್‌ಸಿ ಹಾಗೂ ಸಿಎಎ ವಿರುದ್ಧ ವಿದ್ಯಾರ್ಥಿ, ಯುವಜನರು ನೇತೃತ್ವ ವಹಿಸಿಕೊಂಡಿದ್ದಾರೆ. ದೇಶದ ಎಲ್ಲ ಯುವಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

ಬೆಂಗಳೂರಿನ ಕೆ.ಆರ್.ಪುರದ ದೀಪಾ ಆಸ್ಪತ್ರೆ ಬಳಿಯ ಮೈದಾನದಲ್ಲಿ ಬೆಂಗಳೂರು ಪೂರ್ವ ತಾಲೂಕು ಪ್ರಗತಿಪರ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಕೇಂದ್ರ ಸರಕಾರದ ಜನ ವಿರೋಧಿ ಪೌರತ್ವ ಕಾಯ್ದೆ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕೆಲವೊಂದಿಷ್ಟು ಬಿಜೆಪಿ ನಾಯಕರು ತಲೆಯಲ್ಲಿ ಒಂದಕ್ಷರ ಇಲ್ಲದವರು ಹೋರಾಟ ಮಾಡುತ್ತಾರೆ ಎಂದು ವ್ಯಂಗ್ಯವಾಡುತ್ತಿದ್ದಾರೆ. ಆದರೆ, ಅವರ ಕಣ್ಣಿಗೆ ಕಾಣುತ್ತಿಲ್ಲವೇ, ಇಂದು ದೇಶದ ವಿದ್ಯಾರ್ಥಿ, ಯುವಜನರೇ ಅಧಿಕ ಸಂಖ್ಯೆಯಲ್ಲಿ ಕೇಂದ್ರ ಜನ ವಿರೋಧಿ ನೀತಿಯ ವಿರುದ್ಧ ಹೋರಾಟಕ್ಕೆ ಧುಮುಕಿರುವುದು. ದೇಶದ ಹತ್ತಾರು ವಿಶ್ವವಿದ್ಯಾಲಯಗಳು ಇಂದು ಇದರ ವಿರುದ್ಧ ಧ್ವನಿ ಎತ್ತಿವೆ ಎಂದು ಅವರು ಪ್ರತಿಪಾದಿಸಿದರು.

ದೇಶದ ಮನಸ್ಸು ಗೊಂದಲದಲ್ಲಿರುವಾಗ ವಿದ್ಯಾರ್ಥಿಗಳು ಪೌರತ್ವ ವಿರುದ್ಧದ ಹೋರಾಟಕ್ಕೆ ಮುನ್ನುಗ್ಗಿದ್ದಾರೆ. ಯುವಜನರು ಅರ್ಥ ಮಾಡಿಕೊಳ್ಳಬೇಕಿದೆ. ಬಿಜೆಪಿಯವರು ಸಂಘಟಿಸುವುದರಲ್ಲಿ ನೂರು ವರ್ಷ ಮುಂದೆ ಹೋಗಿದ್ದಾರೆ. ಬಿಜೆಪಿಯವರಿಗೆ ಬರೀ ಮುಸ್ಲಿಂ ಟಾರ್ಗೆಟ್ ಅಲ್ಲ, ತಳಸಾಮುದಾಯಗಳನ್ನು ಟಾರ್ಗೆಟ್ ಮಾಡಿದ್ದಾರೆ. ಎಪ್ಪತ್ತು ವರ್ಷದ ಹಿಂದಿನ ಮನುವಾದವನ್ನು ಮರು ಜಾರಿಗೆ ಮುಂದಾಗಿದ್ದಾರೆ ಎಂದು ಅವರು ಹೇಳಿದರು.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಭಾರತ ದೇಶವನ್ನು ಒಡೆದು ಹಿಂದುತ್ವವನ್ನು ಪ್ರತಿಪಾದಿಸುವ ಉದ್ದೇಶದಿಂದ ಪೌರತ್ವ ಕಾಯ್ದೆ ಜಾರಿ ಮಾಡಲು ಕೇಂದ್ರ ಹೊರಟಿದೆ. ಸಂವಿಧಾನ ರಚನೆಯಾದಾಗ ಶೇ.14 ರಷ್ಟಿದ್ದ ಮುಸ್ಲಿಮರು, ಈಗ ಶೇ.17 ರಷ್ಟಿದ್ದಾರೆ. ಅಂದು ಗಾಂಧೀಯವರ ಸ್ವಾತಂತ್ರ ಸಂಗ್ರಾಮದಲ್ಲಿ ಮುಸ್ಲಿಮ್ ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ಹಿಂದೂ ಮುಸ್ಲಿಮ್ ಸಂಧಾನದಂತೆ ಭಾರತ ಅಸ್ತಿತ್ವ ಪಡೆದಿದೆ. ನಾವೆಲ್ಲರೂ ಭಾರತೀಯರೆ. ಹುಟ್ಟುವಾಗ ಭಾರತೀಯರಾಗಿ ಹುಟ್ಟಿ, ಸಾಯುವಾಗಲೂ ಭಾರತೀಯರಾಗಿಯೇ ಸಾಯುತ್ತೇವೆ. ಧರ್ಮದ ಆಧಾರದಲ್ಲಿ ವಿಭಜಿಸಲು ನಾವು ಬಿಡುವುದಿಲ್ಲ ಎಂದರು.

ಮೋದಿ, ಅಮಿತ್ ಶಾ ದೇಶದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ದೇಶ ಬದಲಾವಣೆ ಆಗಲು ಯಾವುದೇ ಧರ್ಮದ ಭೇದ-ಭಾವವಿಲ್ಲದೆ ಎಲ್ಲರೂ ಒಂದಾಗಬೇಕು. ಹಿಂದುತ್ವದ ಹೆಸರಿನಲ್ಲಿ ದೇಶವನ್ನು ಒಡೆದಾಳುವ ನೀತಿಯನ್ನು ಮೋದಿ-ಶಾ ಅನುಸರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎದುರಾಗುವ 2024 ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ ಎಂದು ಅವರು ಹೇಳಿದರು.

ದೇಶದಲ್ಲಿ ಹಿಂದೂಗಳು ಮುಸ್ಲಿಮರು ಅಣ್ಣ-ತಮ್ಮಂದಿರಂತೆ ಇದ್ದೇವೆ. ಈ ದೇಶದಲ್ಲಿರುವ ಸಮನ್ವಯತೆ ಬೇರೆ ಯಾವುದೇ ದೇಶಗಳಲ್ಲಿ ಕಾಣುವುದಿಲ್ಲ. ಸ್ವಾಮಿ ವಿವೇಕಾನಂದರು ಅಮೆರಿಕಾದ ಚಿಕಾಗೊದಲ್ಲಿ ಮಾಡಿದ ಭಾಷಣದಂತೆ ಭಾರತ ದೇಶ ಎಲ್ಲರಿಗೂ ಆಶ್ರಯ ಕೊಟ್ಟಿದೆ. ಭಾರತ ಶಾಂತಿಯ ತೋಟ ಎಂದು ಮನವರಿಕೆ ಮಾಡಲಾಗಿದೆ. ಆದರೆ ಮೋದಿ-ಶಾ ಧರ್ಮಗಳನ್ನು ಒಡೆದು ನಾಗರಿಕತೆ ನಾಶ ಮಾಡುತ್ತಿದ್ದಾರೆ ಎಂದು ಅವರು ಆಕ್ಷೇಪಿಸಿದರು.

ಕಾರ್ಯಕ್ರಮದಲ್ಲಿ ಜಮಿಯತುಲ್ ಉಲಮಾ ಎ ಕರ್ನಾಟಕ ರಾಜ್ಯ ಅಧ್ಯಕ್ಷ ಮುಫ್ತಿ ಇಫ್ತೆಕಾರ್ ಅಹಮದ್ ಸಾಬ್, ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಕೆ.ನೀಲಾ, ಗೌರಮ್ಮ, ಸಿಪಿಎಂ ಪಕ್ಷದ ನಾಯಕ ಕೆ.ಎನ್. ಉಮೇಶ್, ಇಮಾಮ್ ಒ ಖತೀಬ್ ಜಾಮಿಯಾ ಹಜರತ್ ಬಿಲಾಲ್ ಮೌಲಾನಾ ಮಹಮದ್ ಝಲ್ಪೇಕಾರ್ ಅಹಮದ್, ಭವ್ಯ ನರಸಿಂಹಮೂರ್ತಿ, ಚಿಂತಕ ನಿಕೇತ್ ರಾಜ್ ಮೌರ್ಯ ಸೇರಿದಂತೆ ಹಲವರಿದ್ದರು.

ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಗೆ ನಾವು ಭಾರತೀಯರು ಎಂದು ಸಾಬೀತುಪಡಿಸಿಕೊಳ್ಳಲು ಜನರು ನೀಡಬೇಕಾದ ದಾಖಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದರೆ ಬಿಜೆಪಿಯನ್ನು ಬೆಂಬಲಿಸುವವರೇ ಅವರ ವಿರುದ್ಧ ತಿರುಗಿಬೀಳಲಿದ್ದಾರೆ. ಹೀಗಾಗಿ, ಈ ಪೌರತ್ವದ ಬಗ್ಗೆ ಪ್ರತಿಯೊಬ್ಬರೂ ಚಿಂತಿಸಬೇಕಾದ ಅವಶ್ಯಕತೆ ಇದೆ. ಚುನಾವಣೆ ಸಮಯದಲ್ಲಿ ಬಿಜೆಪಿಯವರಿಗೆ ಮತ ಹಾಕಿ ದೇಶವನ್ನು ಅವರ ಕೈಗೆ ಕೊಟ್ಟಿದ್ದೇವೆ. ವಿವೇಕಾನಂದ ಭಾರತ ಹಾಗೂ ಆರೆಸ್ಸೆಸ್‌ನ ಭಾರತ ವ್ಯತ್ಯಾಸವಿದೆ. ಮಸೀದಿ, ನಮಾಝ್ ಮಾಡೋದು ಇದ್ದೆ ಇರುತ್ತದೆ. ಆದರೆ, ಈಗ ದೇಶಕ್ಕೆ ಗಂಡಾಂತರ ಬಂದಿದೆ. ಅದಕ್ಕಾಗಿ ಹೋರಾಡಬೇಕು. ಕುರಾನ್ ಕೂಡ ದೇಶದ ಬಗ್ಗೆ ಹೇಳಿದೆ.

-ಮಹೇಂದ್ರ ಕುಮಾರ್, ಸಾಮಾಜಿಕ ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News