ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ರಿಷಿಕೇಶ್ 15 ದಿನ ಪೊಲೀಸ್ ವಶಕ್ಕೆ

Update: 2020-01-13 15:44 GMT

ಬೆಂಗಳೂರು, ಜ.13: ಪತ್ರಕರ್ತೆ ಹಾಗೂ ಲೇಖಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ರಿಷಿಕೇಶ್ ದೇವ್ಡೇಕರ್(44)ನನ್ನು ನಗರದ 1ನೆ ಸಿಸಿಎಚ್ ಕೋರ್ಟ್ 15 ದಿನಗಳ ಕಾಲ ಹೆಚ್ಚಿನ ವಿಚಾರಣೆಗೆ ಎಸ್‌ಐಟಿ ವಶಕ್ಕೆ ನೀಡಿ ಆದೇಶಿಸಿದೆ.

ಸೋಮವಾರ ಎಸ್‌ಐಟಿ ಪೊಲೀಸರು ಆರೋಪಿ ರಿಷಿಕೇಶ್ ದೇವ್ಡೇಕರ್‌ನನ್ನು ಕೋರ್ಟ್ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿತ್ತು.

ನ್ಯಾಯಾಲಯ 15 ದಿನಗಳ ಕಾಲ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿತು. ಜಾರ್ಖಂಡನ ಧನ್‌ಬಾದ್ ಜಿಲ್ಲೆಯ ಕತರಾಸ್‌ನಲ್ಲಿನ ನಿವಾಸದಲ್ಲಿ ರಿಷಿಕೇಶ್ ದೇವ್ಡೇಕರ್ ಬಂಧಿಸಲಾಗಿತ್ತು. ಮನೆ ಬಿಟ್ಟು ಬಂದಿರುವುದಾಗಿ ಹೇಳಿ ಅಲ್ಲಿನ ಪೆಟ್ರೋಲ್ ಬಂಕ್‌ನಲ್ಲಿ ರಿಷಿಕೇಶ್ ಕೆಲಸ ಗಿಟ್ಟಿಸಿಕೊಂಡಿದ್ದ. ರಿಷಿಕೇಶ್ ದೇವ್ಡೇಕರ್, ಗೌರಿ ಲಂಕೇಶ್ ಹತ್ಯೆ ಪ್ರಕರಣದ 18ನೆ ಆರೋಪಿ. ಚಾರ್ಜ್ ಶೀಟ್‌ನಲ್ಲಿ ಆರೋಪಿ ಹೆಸರು ಉಲ್ಲೇಖಿಸಿದ್ದ ಎಸ್‌ಐಟಿ ಪೊಲೀಸರು ಎರಡು ವರ್ಷಗಳಿಂದ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದರು.

ರಿಷಿಕೇಶ್ ದೇವ್ಡೇಕರ್ ಮಹಾರಾಷ್ಟ್ರ ಮೂಲದವನು. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆ ಬಂಧನವಾದ ಬಳಿಕ ಈತ ಜಾರ್ಖಂಡ್‌ಗೆ ಪರಾರಿಯಾಗಿದ್ದ. ಅಲ್ಲಿನ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.

ಗೌರಿ ಲಂಕೇಶ್ ಹತ್ಯೆ ಮಾಡಿದ ಪಿಸ್ತೂಲ್ ನಾಶ ಪಡಿಸುವಲ್ಲಿ ಆರೋಪಿ ಪ್ರಮುಖ ಪಾತ್ರ ವಹಿಸಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. 2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್‌ರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News