ಪುರಸಭೆ ಸದಸ್ಯನ ಕೊಲೆ ಪ್ರಕರಣ: ರೌಡಿಗಳಿಬ್ಬರಿಗೆ ಗುಂಡೇಟು, ಬಂಧನ

Update: 2020-01-13 15:13 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.13: ಶಿಡ್ಲಘಟ್ಟ ಪುರಸಭೆ ಸದಸ್ಯ ವೆಂಕಟರಾಮಣ್ಣ ಕೊಲೆ ಪ್ರಕರಣ ಸಂಬಂಧ ಇಬ್ಬರು ರೌಡಿಗಳ ಕಾಲಿಗೆ ಸಿಸಿಬಿ ಪೊಲೀಸರು ಪಿಸ್ತೂಲಿನಿಂದ ಗುಂಡು ಹೊಡೆದು ಬಂಧಿಸಿದ್ದಾರೆ.

ಸತೀಶ(29), ಮತ್ತು ಹಂದಿ ಮಹೇಶ(32) ಗುಂಡೇಟಿನಿಂದ ಗಾಯವಾಗಿರುವ ರೌಡಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಕೋರಮಂಗಲ ಮತ್ತು ಶಿಡ್ಲಘಟ್ಟ ಪೊಲೀಸ್ ಠಾಣೆಗಳ ರೌಡಿಶೀಟರ್ ಪಟ್ಟಿಯಲ್ಲಿ ಸತೀಶನ ಹೆಸರಿದೆ. ಈತನ ವಿರುದ್ಧ ಕೊಲೆ, ಹಲ್ಲೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಶಿಡ್ಲಘಟ್ಟ ಠಾಣೆಯ ರೌಡಿಶೀಟರ್ ಆಗಿರುವ ಹಂದಿ ಮಹೇಶ ಮೇಲೆಯೂ ಕೂಡಾ ಹಲವು ಪ್ರಕರಣಗಳಿವೆ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ಶಿಡ್ಲಘಟ್ಟ ಠಾಣಾ ವ್ಯಾಪ್ತಿಯಲ್ಲಿ 2016ರಲ್ಲಿ ನಡೆದ ನಗರಸಭೆ ಸದಸ್ಯ ವೆಂಕಟರಮಣ ಅವರ ಕೊಲೆ, ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ತರಕಾರಿ ಮಹೇಶ್ ಕೊಲೆ ಪ್ರಕರಣದಲ್ಲಿ ಇವರಿಬ್ಬರೂ ಆರೋಪಿಗಳಾಗಿದ್ದಾರೆ. ಅಲ್ಲದೆ, ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ 2011ರಲ್ಲಿ ಮಿಲ್ ಮಂಜನ ಮೇಲೆ ಹಲ್ಲೆ, ಹೊಸೂರು ಠಾಣಾ ವ್ಯಾಪ್ತಿಯಲ್ಲಿ 2014ರಲ್ಲಿ ಕಾವಲ್ ವಿಜಿ ಕೊಲೆ ಪ್ರಕರಣದಲ್ಲೂ ಸತೀಶ ಆರೋಪಿ ಎಂದು ಪೊಲೀಸರು ತಿಳಿಸಿದರು.

ಇಬ್ಬರೂ ತಲೆಮರೆಸಿಕೊಂಡಿದ್ದು ಬಂಧನಕ್ಕಾಗಿ ವಾರಂಟ್ ಹೊರಡಿಸಲಾಗಿತ್ತು. ಇಬ್ಬರೂ ತಮಿಳುನಾಡಿನ ಬಾಗಲೂರಿನಲ್ಲಿ ಅಡಗಿಕೊಂಡಿದ್ದರು. ರವಿವಾರ ರಾತ್ರಿ ಬಿಟಿಎಂ ಕೆರೆಯ ಬಳಿ ಜೊತೆಯಲ್ಲಿರುವ ಮಾಹಿತಿ ಸಿಕ್ಕಿದ ತಕ್ಷಣ ಅಲ್ಲಿಗೆ ತೆರಳಿದ್ದ ಸಿಸಿಬಿ ಇನ್‌ಸ್ಪೆಕ್ಟರ್ ಪುನೀತ್ ಮತ್ತು ಕೇಶವಮೂರ್ತಿ ನೇತೃತ್ವದ ಪೊಲೀಸರ ತಂಡ ಇಬ್ಬರನ್ನೂ ಬಂಧಿಸಲು ಕಾರ್ಯಾಚರಣೆಗಿಳಿದಿತ್ತು.

ಈ ವೇಳೆ ಆರೋಪಿಗಳು ಪೊಲೀಸ್ ಪೇದೆ ಹನುಮೇಶ ಮೇಲೆ ಚಾಕುವಿನಿಂದ ಇರಿದು ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಆತ್ಮರಕ್ಷಣೆಗಾಗಿ ರೌಡಿಗಳ ಕಾಲಿಗೆ ಗುಂಡು ಹಾರಿಸಲಾಗಿದೆ. ಗಾಯಗೊಂಡ ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಿಂದ ಕಾರು ಜಪ್ತಿ ಮಾಡಿ, ತನಿಖೆ ಮುಂದು ವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News