ಸಾರ್ವಜನಿಕ ಸ್ಥಳಗಳಲ್ಲಿ ಬೃಹತ್ ಗಾತ್ರದ ಕನ್ನಡಿ ಅಳವಡಿಸಲಿರುವ ಬಿಬಿಎಂಪಿ: ಕಾರಣ ಏನು ಗೊತ್ತೇ ?

Update: 2020-01-13 16:51 GMT

ಬೆಂಗಳೂರು, ಜ.13: ಬಿಬಿಎಂಪಿಯು ನಗರದ ಐದು ಕಡೆ ಬೃಹತ್ ಗಾತ್ರದ ಕನ್ನಡಿ ಅಳವಡಿಸುವ ಮೂಲಕ ಸಾರ್ವಜನಿಕ ಪ್ರದೇಶಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಡೆಗಟ್ಟಲು ಮುಂದಾಗಿದೆ.

ಸ್ವಚ್ಛ ಸರ್ವೇಕ್ಷಣ-2020 ಕ್ಯಾಂಪೇನ್ ಭಾಗವಾಗಿ ಇದನ್ನು ಕೈಗೆತ್ತಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡುವ ಪ್ರದೇಶಗಳಲ್ಲೇ ಕನ್ನಡಿ ಅಳವಡಿಸಲಾಗಿದ್ದು, ಸುಮಾರು 50 ಸಾವಿರ ವೆಚ್ಚದಲ್ಲಿ ನಗರದ ಸುಮಾರು ಐದು ಸ್ಥಳಗಳಾದ ಕೆ.ಆರ್.ಮಾರ್ಕೆಟ್, ಇಎಸ್‌ಐ ಆಸ್ಪತ್ರೆ ಇಂದಿರಾನಗರ, ಕೊಕೊನೆಟ್ ಗ್ರೋವ್ ಚರ್ಚ್ ಸ್ಟ್ರೀಟ್, ಜ್ಯೋತಿ ನಿವಾಸ ಕಾಲೇಜು ಕೋರಮಂಗಲ, ಕ್ವೀನ್ಸ್ ಸರ್ಕಲ್ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ 8*4 ಅಡಿ ಗಾತ್ರದ ಬೃಹತ್ ಕನ್ನಡಿಗಳನ್ನು ಹಾಕಲಾಗಿದೆ. ಅಲ್ಲದೇ, ಈ ಪ್ರದೇಶಗಳಲ್ಲಿ ಸಿಸಿ ಟಿವಿಗಳನ್ನು ಕೂಡ ಅಳವಡಿಸಲಾಗಿದ್ದು, ಆ ಮೂಲಕ ಅಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ದಂಡ ವಿಧಿಸಲು ಬಂಧಿಸಲು ಪೊಲೀಸರಿಗೆ ನೆರವಾಗಲಿದೆ.

ಜನರು ಸಾರ್ವಜನಿಕ ಪ್ರದೇಶಗಳಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಆ ಪ್ರದೇಶಗಳಲ್ಲಿ ಓಡಾಡೋಕೆ ಆಗುವುದಿಲ್ಲ ಮತ್ತು ಅದರಿಂದ ನಗರದ ಸೌಂದರ್ಯ ಕೆಡುತ್ತದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಈ ನಿರ್ಧಾರ ಕೈಗೊಳ್ಳಲಾಗಿದ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.

8*4 ಅಡಿ ಗಾತ್ರದ ಬೃಹತ್ ಕನ್ನಡಿಯಿಂದ ಬಯಲು ಮೂತ್ರ ವಿಸರ್ಜನೆ ತಡೆಯುವುದು ಮಾತ್ರವಲ್ಲದೇ, ಅದರಲ್ಲಿ ಬಿಬಿಎಂಪಿ ಲೋಗೋ ಮತ್ತು ಕ್ಯೂಆರ್ ಕೋಡ್ ಅಳವಡಿಸಲಾಗಿದೆ ಅದನ್ನು ಮೊಬೈಲ್ ಆ್ಯಪ್ ಮೂಲಕ ಸ್ಕಾನ್ ಮಾಡಿದಾಗ ಅಲ್ಲೇ ಹತ್ತಿರದಲ್ಲಿರುವ ಶೌಚಾಲಯವನ್ನು ತೋರಿಸುತ್ತದೆ ಎಂದು ವಿವರಿಸಿದರು.

ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 419 ರೆಗ್ಯುಲರ್ ಸಾರ್ವಜನಿಕ ಶೌಚಾಲಯಗಳನ್ನು ಹೊಂದಿದ್ದು, 162 ಇ-ಟಾಯ್ಲೆಂಟ್‌ಗಳನ್ನು ಹೊಂದಿದೆ. ಇನ್ನೂ 65 ಇ-ಟಾಯ್ಲೆಟ್‌ಗಳ ಅಳವಡಿಸಲಾಗುವುದು

-ಬಿ.ಎಚ್ ಅನಿಲ್ ಕುಮಾರ್, ಬಿಬಿಎಂಪಿ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News