ಬೆಂಗಳೂರು: ಸಂಘಪರಿವಾರದ ಕೆಂಗಣ್ಣಿಗೆ ಗುರಿಯಾದ ಅಂಗಡಿ ಶಟರ್ ಗಳ ಮೇಲಿನ ಸಿಎಎ ವಿರೋಧಿ ಬರಹ

Update: 2020-01-14 13:11 GMT

ಬೆಂಗಳೂರು, ಜ.14: ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಪ್ರಕ್ರಿಯೆ ವಿರೋಧಿಸಿ ಕೆಲ ಗ್ರಾಫಿಟಿ (ಗೀಚುಬರಹ) ಕಲಾವಿದವರು ನಗರದ ಅಂಗಡಿ ಶಟರ್‌ಗಳ ಮೇಲೆ ಚಿತ್ರ, ಬರಹಗಳನ್ನು ಬರೆದು ಆಕ್ರೋಶ ವ್ಯಕ್ತಪಡಿಸಿದರೆ, ಮತ್ತೊಂದು ಕಡೆ ಕೆಲ ಬರವಣಿಗೆಗಳು ವಿವಾದಕ್ಕೆ ಎಡೆ ಮಾಡಿದೆ.

ಇಲ್ಲಿನ ಚರ್ಚ್‌ಸ್ಟ್ರೀಟ್ ಬೀದಿಯಲ್ಲಿ ಮಂಗಳವಾರ ಬೆಳಗಿನ ಜಾವ ಗ್ರಾಫಿಟಿ (ಗೀಚುಬರಹ) ಕಲಾವಿದವರು, ಐದಕ್ಕೂ ಹೆಚ್ಚಿನ ಅಂಗಡಿ ಶಟರ್‌ಗಳ ಹಾಗೂ ಗೋಡೆಗಳ ಮೇಲೆ ನೋ ಸಿಎಎ, ಎನ್‌ಆರ್‌ಸಿ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಿ ಎಂದು ಗ್ರಾಫಿಟಿ ಆರ್ಟ್‌ನಲ್ಲಿ ಬರದಿದ್ದರು.

ಸ್ವಯಂ ಪ್ರೇರಿತ ದೂರು ದಾಖಲು: ಕೆಲ ಅಂಗಡಿಗಳ ಬಾಗಿಲು ಮೇಲೆ ಫ್ರೀ ಕಾಶ್ಮೀರ ಎಂದು ಬರೆಯಲಾಗಿತ್ತು. ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಕಬ್ಬನ್‌ ಪಾರ್ಕ್ ಠಾಣಾ ಪೊಲೀಸರು, ಆ ಬರಹಗಳನ್ನು ಅಳಿಸಿದ್ದಾರೆ. ಇನ್ನು, ಬರಹಗಳಿಗೆ ಸಂಬಂಧಪಟ್ಟಂತೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ಬೆಳಗ್ಗೆ 3 ಗಂಟೆ ಸುಮಾರಿಗೆ ಇಬ್ಬರು ಯುವಕರು ಈ ಬರಹಗಳನ್ನು ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಚರ್ಚೆ: ಗೋಡೆ ಮೇಲಿನ ಬರಹ ಕುರಿತ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಂತಹ ಬರಹಗಳ ಮೂಲಕ ಸಿಎಎ ಸಂವಿಧಾನ ವಿರೋಧಿಯಾಗಿದ್ದು, ಈ ಬಗ್ಗೆ ಕೆಲವರು ವಿನೂತನವಾಗಿ ಜಾಗೃತಿ ವ್ಯಕ್ತಪಡಿಸುವ ಜೊತೆಗೆ, ಸರಕಾರದ ವಿರುದ್ಧ ಧ್ವನಿಗೂಡಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.

ಸಂಘಪರಿವಾರದ ವಿರುದ್ಧ ಆಕ್ರೋಶ?
ಸಿಎಎ, ಎನ್‌ಆರ್‌ಸಿ ವಿರುದ್ಧದ ಬರಹಗಳ ಮೇಲೆ ಕೇಸರಿ ಬಣ್ಣ ಬಳಿದು, ಸಿಎಎ ಬೆಂಬಲಿಸಿ ಎಂದು ಬರಹಗಳನ್ನು ಬರೆದ ಸಂಘಪರಿವಾರದ ಕಾರ್ಯಕರ್ತರ ಮೇಲೆ ಕೆಲ ಅಂಗಡಿ ಮಾಲಕರು ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಇಲ್ಲಿನ ಚರ್ಚ್‌ಸ್ಟ್ರೀಟ್ ಮೇಲಿನ ಅಂಗಡಿ ಶಟರ್‌ಗಳ ಮೇಲಿನ ಬರಹಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಬಜರಂಗದಳದ ಕಾರ್ಯಕರ್ತರು, ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ, ಎರಡು ಅಂಗಡಿಗಳ ಬಾಗಿಲಿಗೆ ಕೇಸರಿ ಬಣ್ಣ ಬಳಿದರು. ಈ ವೇಳೆ ಪೊಲೀಸರು ವಿರೋಧಿಸಿದ್ದು, ಬರೆಯದಂತೆ ತಡೆದಿದ್ದಾರೆ.

ತಪ್ಪೇನು?

ಬಜರಂಗದಳದ ಕಾರ್ಯಕರ್ತರು ಅಂಗಡಿಗಳ ಬಾಗಿಲಿಗೆ ಕೇಸರಿ ಬಣ್ಣ ಬಳಿದಿರುವುದಕ್ಕೆ ಪ್ರಶ್ನಿಸಿದ ಅಪರಿಚಿತ ವ್ಯಕ್ತಿಯೊರ್ವ, ನೋ ಸಿಎಎ, ಎನ್‌ಆರ್‌ಸಿ ಎಂದು ಬರೆದರೆ ತಪ್ಪೇನು, ಇದು ಕಾನೂನು ವಿರೋಧಿಯೇ ಎಂದು ಏರು ಧ್ವನಿಯಲ್ಲಿಯೇ ಬಜರಂಗದಳದ ಕಾರ್ಯಕರ್ತರನ್ನು ಪ್ರಶ್ನಿಸಿ ವಾಗ್ವಾದಕ್ಕಿಳಿದ ಪ್ರಸಂಗ ಜರುಗಿತು.

ಸ್ವಯಂ ಪ್ರೇರಿತ ಪ್ರಕರಣ
ಅಂಗಡಿಯ ಶಟರ್ ಮೇಲೆ ವಿವಾದಿತ ಬರಹಗಳ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಲ್ಲದೆ, ಇತ್ತೀಚಿಗಷ್ಟೇ, ಅವಹೇಳನಕಾರಿ ಬರವಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದೇವೆ.
-ಚೇತನ್ ಸಿಂಗ್ ರಾಥೋಡ್, ಡಿಸಿಪಿ, ಕೇಂದ್ರ ವಿಭಾಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News