ದಿಲ್ಲಿ ವಿಧಾನಸಭೆ ಚುನಾವಣೆ: ಕೇಜ್ರಿವಾಲ್ ಹೊಸದಿಲ್ಲಿ ಕ್ಷೇತ್ರದಿಂದ ಸ್ಪರ್ಧೆ

Update: 2020-01-14 16:08 GMT

ಹೊಸದಿಲ್ಲಿ, ಜ. 14: ಫೆಬ್ರವರಿ 8ರಂದು ನಡೆಯಲಿರುವ ದಿಲ್ಲಿ ವಿಧಾನಸಭೆ ಚುನಾವಣೆಗೆ ದಿಲ್ಲಿಯ ಆಡಳಿತಾರೂಢ ಆಪ್ ಮಂಗಳವಾರ 70 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹೊಸದಿಲ್ಲಿ ವಿಧಾನ ಸಭಾ ಕ್ಷೇತ್ರದಿಂದ ಹಾಗೂ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಪ್ರತಾಪ್‌ಗಂಜ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಆಪ್‌ನ ರಾಜಕೀಯ ವ್ಯವಹಾರಗಳ ಸಮಿತಿ ಹೊಸದಿಲ್ಲಿಯಲ್ಲಿ ತಿಳಿಸಿದೆ.

ವಿಧಾನ ಸಭೆ ಚುನಾವಣೆಯಲ್ಲಿ 46 ಹಾಲಿ ಶಾಸಕರು ಸ್ಪರ್ಧಿಸಲಿದ್ದಾರೆ. ಆದರೆ, 15 ಹಾಲಿ ಶಾಸಕರ ಬದಲಿಗೆ ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಪಕ್ಷದ ಪಟ್ಟಿಯಲ್ಲಿ 8 ಮಹಿಳೆಯರು ಒಳಗೊಂಡಿದ್ದಾರೆ ಎಂದು ರಾಜಕೀಯ ವ್ಯವಹಾರಗಳ ಸಮಿತಿ ತಿಳಿಸಿದೆ.

ಪಕ್ಷದಲ್ಲಿರುವ ಹೊಸ ಮುಖಗಳೆಂದರೆ ಮಾಟಿಯಾ ಮಹಲ್‌ನಿಂದ ಸೊಹೈಬ್ ಇಕ್ಬಾಲ್ (ಕಾಂಗ್ರೆಸ್‌ನ ಮಾಜಿ ಸದಸ್ಯ), ಚಾಂದಿನ ಚೌಕದಿಂದ ಪ್ರಹ್ಲಾದ್ ಸಿಂಗ್ ಸಾಹ್ನಿ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ಕೆಲವು ಲೋಕಸಭಾ ಅಭ್ಯರ್ಥಿಗಳಿಗೆ ಕೂಡ ಪಕ್ಷ ಟಿಕೆಟ್ ನೀಡಿದೆ. ದಿಲೀಪ್ ಪಾಂಡೆ ತಿಮರ್ಪುರದಿಂದ ಸ್ವರ್ಧಿಸಿದರೆ, ಆಟಿಶಿ ಕಲ್ಕಾಜಿಯಿಂದ ಹಾಗೂ ರಾಘವ ಚಾಧಾ ರಾಜೀಂದರ್ ನಗರದಿಂದ ಸ್ಪರ್ಧಿಸಲಿದ್ದಾರೆ.

ದಿಲ್ಲಿ ವಿಧಾನ ಸಭೆಯ ಚುನಾವಣೆ ಫೆಬ್ರವರಿ 8ರಂದು ನಡೆಯಲಿದೆ. ಮತ ಎಣಿಕೆ ಫೆಬ್ರವರಿ 11ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News