ಬೋವಿ ಸಮುದಾಯದ ಸಮಾರಂಭಕ್ಕೆ ಜನಪ್ರತಿನಿಧಿಗಳು ಬರುವುದಿಲ್ಲ: ಡಾ.ಎಚ್.ರವಿ ಮಾಕಳಿ

Update: 2020-01-14 16:22 GMT

ಬೆಂಗಳೂರು, ಜ.14: ಬೋವಿ ಜನಾಂಗದ ಕಾರ್ಯಕ್ರಮಗಳಿಗೆ ರಾಜಕಾರಣಿಗಳು ಬರುವುದಿಲ್ಲ. ಆದರೆ, ಓಟು ಕೇಳಲು ಮಾತ್ರ ಮನೆಮುಂದೆ ಇರುತ್ತಾರೆಂದು ಬೋವಿ ಸಮಾಜದ ಕಾರ್ಯಾಧ್ಯಕ್ಷ ಡಾ.ಎಚ್.ರವಿ ಮಾಕಳಿ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನಪ್ರತಿನಿಧಿಗಳು ಚುನಾವಣಾ ಸಂದರ್ಭದಲ್ಲಿ ಸಾಕಷ್ಟು ಆಶ್ವಾಸನೆ ನೀಡಿ ಮತ ಪಡೆಯುತ್ತಾರೆ. ಆದರೆ, ಯಾವುದನ್ನು ಈಡೇರಿಸುವುದಿಲ್ಲ. ಕನಿಷ್ಟ ಸಮುದಾಯದ ಸಮಾರಂಭಗಳಲ್ಲಿ ಭಾಗವಹಿಸಿ ನಮ್ಮ ಸಮಸ್ಯೆಗಳೇನೆಂಬುದನ್ನು ಕೇಳುವಷ್ಟು ಕಾಳಜಿ ಇಲ್ಲವಾಗಿದೆ ಎಂದು ವಿಷಾದಿಸಿದರು.

ನಾಡನ್ನು ಕಟ್ಟುವಲ್ಲಿ ಬೋವಿ ಸಮುದಾಯ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದೆ. ಅಣೆಕಟ್ಟುಗಳಿಂದ ಹಿಡಿದು ಸರಕಾರಿ ಬಂಗಲೆಗಳನ್ನು ಕಟ್ಟುವಲ್ಲಿ ಸಮುದಾಯದ ಮಂದಿ ಬೆವರು ಹರಿಸಿದ್ದಾರೆ. ಆದರೆ, ಇವರಿಗೆ ಸರಕಾರದ ಸವಲತ್ತುಗಳು ಮಾತ್ರ ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರ ಬೋವಿ ಜನಾಂಗಕ್ಕೆ ಕೊಡಬೇಕಾದ ಸವಲತ್ತುಗಳನ್ನು ಕೊಟ್ಟಿಲ್ಲ. ಇದು ಬೋವಿ ಜನಾಂಗದ ದೌರ್ಭಾಗ್ಯವೇ ಸರಿ. ನಮ್ಮ ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಸಬೇಕಾದ ನಮ್ಮ ಸಮುದಾಯದ ಜನಪ್ರತಿನಿಧಿಗಳೇ ಸಮಾರಂಭಕ್ಕೆ ಹಾಜರಾಗುವುದಿಲ್ಲವೆಂದರೆ, ಇವತ್ತಿಗೂ ಬೋವಿ ಸಮುದಾಯ ಯಾವ ಸ್ಥಿತಿಯಲ್ಲಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ವಿಷಾದಿಸಿದರು.

ಸಾಹಿತಿ ಕರಿದುರುಗ ಮಾತನಾಡಿ, ದೆಹಲಿಯ ಸಂಸತ್, ಕೋಟೆ ಕೊತ್ತಲಗಳನ್ನು, ಚರ್ಚ್, ಮಸೀದಿ, ದೇವಾಲಯ, ರಸ್ತೆಗಳನ್ನು ನಿರ್ಮಿಸಿದವರು ಬೋವಿ ಸಮುದಾಯವಾಗಿದೆ. ಹೀಗಾಗಿ ಸಮುದಾಯದ ಮುಕುಟಪ್ರಾಯವಾಗಿರುವ ಶರಣ ಸಿದ್ದರಾಮೇಶ್ವರರ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗ ಸ್ಥಾಪನೆಯಾಗಬೇಕೆಂದು ಅವರು ಒತ್ತಾಯಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರಂಗಪ್ಪ ಮಾತನಾಡಿ, ಶಿವಶರಣರು ತಮ್ಮ ಅನುಭವ, ಚಿಂತನೆಗಳನ್ನು ವಚನಗಳ ಮೂಲಕ ಜನತೆಯಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಅವಿರತ ಶ್ರಮಿಸಿದ್ದಾರೆ. ಶಿವಶರಣ ಸಿದ್ದರಾಮೇಶ್ವರ ಕೇವಲ ವಚನಗಳಿಗೆ ಸೀಮಿತವಾಗದೆ ಬಾವಿಗಳನ್ನು ತೋಡಿಸುವ, ದಾಸೋಹಗಳನ್ನು ಏರ್ಪಡಿಸುವ ಮೂಲಕ ಜನಪರ ಕೆಲಸದಲ್ಲಿ ನಿರತರಾದವರೆಂದು ಅವರು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಶಿವಯೋಗಿ ಸಂಸ್ಥಾನ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿಯ ಕಾರ್ಯದರ್ಶಿ ಆರ್.ಆರ್.ಜನ್ನು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮನೆ, ಮಠ ಕಟ್ಟಿದವರು ಒಳ್ಳೆಯ ಮನಸನ್ನು ಕಟ್ಟಿಕೊಳ್ಳಬೇಕಿದೆ. ಧರ್ಮದ ಹೆಸರಿನಲ್ಲಿ ನಡೆಯುವ ಎಲ್ಲ ರೀತಿಯ ವೌಢ್ಯದ ವಿರುದ್ಧ ಹೋರಾಟ ಮಾಡಿದವರು ನಮ್ಮ ಶರಣರು. ಅವರ ಮಾರ್ಗದಲ್ಲಿ ನಡೆಯುವ ಮೂಲಕ ವೈಜ್ಞಾನಿಕ ಧರ್ಮದ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ.

-ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಿವಯೋಗಿ ಸಂಸ್ಥಾನ ಮಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News