ಗುರುರಾಘವೇಂದ್ರ ಬ್ಯಾಂಕ್ ಮೇಲೆ ಆರ್‌ಬಿಐ ನಿರ್ಬಂಧ ತಾತ್ಕಾಲಿಕ: ಸಂಸದ ತೇಜಸ್ವಿ ಸೂರ್ಯ

Update: 2020-01-14 16:40 GMT

ಬೆಂಗಳೂರು, ಜ.14: ನಗರದ ಬಸವನಗುಡಿಯಲ್ಲಿರುವ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ ಹೇರಿರುವುದು ತಾತ್ಕಾಲಿಕ. ಹೀಗಾಗಿ ಬ್ಯಾಂಕ್‌ನ ಸದಸ್ಯರು ಹಾಗೂ ಠೇವಣಿದಾರರು ಆತಂಕಕ್ಕೆ ಒಳಗಾಗಬೇಕಿಲ್ಲವೆಂದು ಸಂಸದ ತೇಜಸ್ವಿ ಸೂರ್ಯ ಭರವಸೆ ನೀಡಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಗುರು ರಾಘವೇಂದ್ರ ಬ್ಯಾಂಕ್‌ನ ಖಾತೆಯಿಂದ ಹಣ ಪಡೆಯಲು ಆರ್‌ಬಿಐ ನಿರ್ಬಂಧ ಹೇರಿರುವುದರಿಂದ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ. ಇವತ್ತು ಸಹ ಬ್ಯಾಂಕ್ ಮುಂದೆ ಸಾವಿರಾರು ಗ್ರಾಹಕರು ಜಮಾಯಿಸಿದ್ದು, ತಮ್ಮ ಹಣ ತಮಗೆ ಹಿಂದಿರುಗುತ್ತದೆಯೇ, ಇಲ್ಲವೇ ಎಂಬ ಆತಂಕದಲ್ಲಿದ್ದರು.

ಈ ಸಂಬಂಧ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಗ್ರಾಹಕರನ್ನು ಸಮಾಧಾನ ಪಡಿಸಿ, ಯಾರ ಹಣಕ್ಕೂ ಮೋಸ ಆಗುವುದಿಲ್ಲ. ಸ್ವಲ್ಪದಿನ ಸಮಯ ಕೊಡಿ. ಎಲ್ಲವೂ ಸರಿಹೋಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನು ನಿವಾರಣೆ ಮಾಡಲಾಗುತ್ತಿದೆ ಎಂದು ವಿಶ್ವಾಸ ಮೂಡಿಸಲು ಪ್ರಯತ್ನಿಸಿದರು.

ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ವಾರ್ಷಿಕ 2400ಕೋಟಿ ರೂ.ವಹಿವಾಟು ನಡೆಸುತ್ತಿದ್ದು, ಲಾಭದಲ್ಲಿದೆ. ಒಟ್ಟು ಆರು ಶಾಖೆಗಳನ್ನು ಹೊಂದಿರುವ ಬ್ಯಾಂಕ್‌ನಲ್ಲಿ ಸಾವಿರಾರು ಮಂದಿ ಲಕ್ಷಾಂತರ ರೂ.ಠೇವಣಿ ಇಟ್ಟಿದ್ದಾರೆ. ಯಾರಿಗೂ ಮೋಸವಾಗುವುದಿಲ್ಲ. ಎಲ್ಲರ ಹಣ ಸುರಕ್ಷಿತವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ತಿಳಿಸಿದರು.

ಉಳಿತಾಯದ ಹಣವನ್ನು, ನಿವೃತ್ತಿ ನಂತರದ ಜೀವನಕ್ಕಾಗಿ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದೇನೆ. ನಿವೃತ್ತರ ಹಣ ನುಂಗಬೇಡಿ. ಬ್ಯಾಂಕ್ ಮತ್ತು ಆರ್‌ಬಿಐ ಏನು ಬೇಕಾದರೂ ಮಾಡಿಕೊಳ್ಳಲಿ. ನಮ್ಮ ಹಣ ಮರಳಿಸಲಿ ಎಂದು ಠೇವಣಿದಾರರು ಬ್ಯಾಂಕ್ ಅಧ್ಯಕ್ಷರಿಗೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News