ಕೃಷಿ ಜಮೀನಿನಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2020-01-14 17:49 GMT

ಬೆಂಗಳೂರು, ಜ.14: ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಹಿರೇನಂದಿ ಗ್ರಾಮದಲ್ಲಿರುವ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಯನ್ನು ಕೃಷಿ ಜಮೀನಿನಲ್ಲಿ ನಿರ್ಮಾಣ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ಪ್ರಕಾಶ್‌ ಕುಮಾರ್ ನಾಯ್ಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಗೋಕಾಕ್ ತಾಲೂಕಿನ ಹಿರೇನಂದಿ ಗ್ರಾಮದಲ್ಲಿ ರೈತರಿಂದ 426 ಎಕರೆ ಕೃಷಿ ಜಮೀನನ್ನು ನೇರವಾಗಿ ಪಡೆದುಕೊಂಡಿದ್ದಾರೆ. ಇದು ಕರ್ನಾಟಕ ಭೂ ಸುಧಾರಣೆ ಕಾಯಿದೆಗೆ ವಿರುದ್ಧವಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವ ಬಗ್ಗೆ ತೀರ್ಮಾನವಾಗಬೇಕು. ಆ ಬಳಿಕ ಕಾರ್ಖಾನೆಯನ್ನು ನಿರ್ಮಾಣ ಮಾಡಬೇಕು. ಆದರೆ, ಕಾನೂನನ್ನು ಉಲ್ಲಂಘಿಸಿ ಕಾರ್ಖಾನೆ ನಿರ್ಮಾಣ ಮಾಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಐಡಿಬಿಐ, ಎಸ್‌ಬಿಐ ಸೇರಿ ಇತರೆ ಬ್ಯಾಂಕ್‌ಗಳಿಂದ 500 ಕೋಟಿ ರೂ.ಸಾಲವನ್ನು ಪಡೆದಿದ್ದಾರೆ. ಅಲ್ಲದೆ, ಸಾಲವನ್ನು ವಾಪಸ್ ನೀಡಲಾಗದೆ ಕಾರ್ಖಾನೆಯ ನಿರ್ದೇಶಕರೂ ಅನರ್ಹರಾಗಿದ್ದಾರೆ. ಹೀಗಾಗಿ, ವ್ಯವಸ್ಥಾಪನಾ ಕಮಿಟಿಯನ್ನು ರಚಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರ, ಆರ್‌ಬಿಐ, ಬೆಳಗಾವಿ ಜಿಲ್ಲಾಧಿಕಾರಿ, ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಫೆ.26ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News