ವಸತಿ ಯೋಜನೆ; ಗುಣಮಟ್ಟ ಪರಿಶೀಲನೆಗೆ ಜಾಗೃತಿ ದಳ- ಸಚಿವ ವಿ.ಸೋಮಣ್ಣ

Update: 2020-01-14 18:12 GMT

ಬೆಂಗಳೂರು, ಜ.14: ವಸತಿ ಯೋಜನೆ ಹೆಸರಿನಲ್ಲಿ ಅಕ್ರಮ ತಡೆಗಟ್ಟಲು, ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಇನ್ನು ಮುಂದೆ ಆಧಾರ್ ಮತ್ತು ಪಡಿತರ ಚೀಟಿಯನ್ನು ಕಡ್ಡಾಯ ಮಾಡಲಾಗುವುದು. ಅಲ್ಲದೆ, ಮನೆ ಗುಣಮಟ್ಟ ಪರಿಶೀಲನೆಗೆ ಜಾಗೃತ ದಳ ರಚನೆ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅನರ್ಹ ಫಲಾನುಭವಿಗಳು ವಸತಿ ಯೋಜನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಸ್ಥಗಿತಗೊಳಿಸಿದ್ದು, ಪರಿಶೀಲನೆ ಬಳಿಕ ಹಣ ನೀಡಲಾಗುವುದು ಎಂದರು.

ಬೆಸ್ಕಾಂ ಮಾದರಿಯಲ್ಲೆ ವಸತಿ ಇಲಾಖೆಯಲ್ಲಿಯೂ ಜಾಗೃತ ದಳ ರಚನೆ ಮಾಡಲಿದ್ದು, ವಸತಿ ಯೋಜನೆಗಳನ್ನು ಅರ್ಹ ಬಡವರಿಗೆ ನೀಡುವ ದೃಷ್ಟಿಯಿಂದ ಹಾಗೂ ಇಲಾಖೆಯಲ್ಲಿ ಪಾರದರ್ಶಕತೆ ತರಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಜೂನ್ ಒಳಗೆ ಪೂರ್ಣ: ವಸತಿ ಇಲಾಖೆಯಿಂದ 14 ಲಕ್ಷ ಮನೆಗಳ ಪೈಕಿ 5 ಲಕ್ಷ ಮನೆಗಳು ಪೂರ್ಣಗೊಂಡಿವೆ. ಉಳಿದ 9 ಲಕ್ಷ ಮನೆಗಳ ಪೈಕಿ 49,697 ಮನೆಗಳಲ್ಲಿ 27,489 ಮನೆಗಳನ್ನು ಪರಿಶೀಲನೆ ನಡೆಸಿದ್ದು, 26,193 ಮನೆಗಳು ಅರ್ಹ ಫಲಾನುಭವಿಗಳು ಎಂದು ಗೊತ್ತಾಗಿದೆ. ಉಳಿದ 1,296 ಮನೆಗಳನ್ನು ಅನರ್ಹರಿಗೆ ಮಂಜೂರಾಗಿದ್ದು ಬಯಲಾಗಿದೆ. 3,500 ಕೋಟಿ ರೂ.ವೆಚ್ಚದಲ್ಲಿ ಉಳಿದೆಲ್ಲ ಮನೆಗಳನ್ನು 2020ರ ಜೂನ್ ಒಳಗೆ ಪೂರ್ಣಗೊಳಿಸಲಾಗುವುದು ಎಂದರು.

ಮೂರು ವರ್ಷಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಗ್ರಾಮೀಣ ಪ್ರದೇಶದ ಬಡವರಿಗೆ 6 ಲಕ್ಷ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದ ಅವರು, ಮಹಾನಗರ ಪಾಲಿಕೆ ಮತ್ತು ನಗರ ಪ್ರದೇಶದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಅನುದಾನ ಹೆಚ್ಚಳ: ವಸತಿ ಯೋಜನೆಯಡಿ ಮನೆ ನಿರ್ಮಿಸಲು ನೀಡುತ್ತಿರುವ ಅನುದಾನವನ್ನು 1.20ಲಕ್ಷ ರೂ.ನಿಂದ 2ಲಕ್ಷ ರೂ.ಗಳಿಗೆ ಹೆಚ್ಚಿಸಲು ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದೆಂದ ಅವರು, ಅಂಬೇಡ್ಕರ್ ನಿವಾಸ್ ಹೊರತುಪಡಿಸಿ, ಬಸವ, ಅರಸು, ವಾಜಪೇಯಿ ಹೆಸರಿನ ವಸತಿ ಯೋಜನೆಗಳನ್ನು ಒಂದೇ ಸೂರಿನಡಿ ತರಲಾಗುವುದು ಎಂದರು.

ಐಇಸಿ ಹಣ ದುರ್ಬಳಕೆ: ಕೊಳಗೇರಿ ಪ್ರದೇಶದ ಜನರಿಗೆ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಸಂಬಂಧ ಕೇಂದ್ರದ ಐಇಸಿ(ಮಾಹಿತಿ, ಶಿಕ್ಷಣ ಮತ್ತು ಸಂವಹನ) ಯೋಜನೆಯಡಿ ಹಣ ದುರ್ಬಳಕೆ ಮಾಡಿಕೊಂಡಿರುವ ಸ್ವಯಂ ಸೇವಾ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಿ.ಸೋಮಣ್ಣ ತಿಳಿಸಿದರು.

ಕೊಳಗೇರಿ ಪ್ರದೇಶದ ಉದ್ಯೋಗಾಕಾಕ್ಷಿಗಳಿಗೆ ಐಎಎಸ್ ಐಪಿಎಸ್ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿದ್ದೇವೆ ಎಂದು 2018-19 ಹಾಗೂ 2019-20ರಲ್ಲಿ ಒಟ್ಟು 3.50 ಕೋಟಿ ರೂ.ಗಳಷ್ಟು ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ.

ಸಾಧನ ಎಂಬ ಸ್ವಯಂ ಸೇವಾ ಸಂಸ್ಥೆ ಸೇರಿದಂತೆ ಆರೇಳು ಸಂಸ್ಥೆಗಳ ಕೇಂದ್ರ ಸರಕಾರದಿಂದ ಬರುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವುದು ಬಯಲಾಗಿದೆ. ಹೀಗಾಗಿ ಪ್ರಸ್ತುತ ಸಾಲಿನಲ್ಲಿ ಈ ಯೋಜನೆ ಸ್ಥಗಿತಗೊಳಿಸಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಲು ನಿರ್ದೆಶನ ನೀಡಲಾಗಿದೆ ಎಂದರು.

ಸಿಎಂ ವಸತಿ: ಬೆಂಗಳೂರು ನಗರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಹಿಂದಿನ ಸರಕಾರದಲ್ಲಿ ರೂಪಿಸಿದ್ದ ಸಿಎಂ ವಸತಿ ಯೋಜನೆಯಡಿ 1 ಲಕ್ಷ ಮನೆ ನಿರ್ಮಾಣಕ್ಕೆ ಈಗಾಗಲೇ 1 ಸಾವಿರ ಎಕರೆ ಭೂಮಿ ಒದಗಿಸಲಾಗಿದೆ. ಅಲ್ಲದೆ, ವಾರ್ಷಿಕ 75 ಸಾವಿರ ರೂ.ಗಳಿದ್ದ ಆದಾಯದ ಮಿತಿಯನ್ನು 3 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಸಮರೋಪಾದಿಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ತ್ವರಿತಗತಿಯಲ್ಲಿ ಬಹುಮಹಡಿ ವಸತಿ ಸೌಲಭ್ಯ ಕಲ್ಪಿಸುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.

ವಸತಿ ವಿಜಿಲ್: ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಹಾಗೂ ವಸತಿ ಯೋಜನೆಗಳ ದುರ್ಬಳಕೆ ತಡೆಗಟ್ಟಲು ‘ವಸತಿ ವಿಜಿಲ್ ಆ್ಯಪ್’ ಬಿಡುಗಡೆ ಮಾಡಲಾಗಿದೆ ಎಂದ ಸೋಮಣ್ಣ, ವಸತಿ ವಿಜಿಲ್ ಆ್ಯಪ್ ಇಲಾಖೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News