ಬೆಂಗಳೂರು: ಫ್ರೀಡಂ ಪಾರ್ಕ್‌ನಲ್ಲಿ ಜ.16ರಿಂದ 'ಖಾದಿ ಉತ್ಸವ-2020'

Update: 2020-01-14 18:21 GMT

ಬೆಂಗಳೂರು, ಜ.14: ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಉತ್ಸವ ಜ.16ರಿಂದ ಒಂದು ತಿಂಗಳು ಕಾಲ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿದೆ.

ಮಂಗಳವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯವಿಭವ ಸ್ವಾಮಿ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಈ ಖಾದಿ ಉತ್ಸವ ಆಯೋಜನೆ ಮಾಡಲಾಗಿದೆ ಎಂದರು.

ಈ ಬಾರಿ ಉತ್ಸವದಲ್ಲಿ ನಗರ ಮತ್ತು ಗ್ರಾಮೋದ್ಯೋಗ ಘಟಕಗಳಿಂದ ಒಟ್ಟು 200 ಮಳಿಗೆಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ. ದೇಶದ ವಿವಿಧ ರಾಜ್ಯಗಳಿಂದ ವಿವಿಧ ಗ್ರಾಮೋದ್ಯೋಗ ಘಟಕಗಳು, ರಾಜ್ಯದ ಬಹುತೇಕ ಜಿಲ್ಲೆಗಳ ಗ್ರಾಮೋದ್ಯೋಗ ಘಟಕಗಳು ಮಳಿಗೆಗಳನ್ನು ಹಾಕಿವೆ ಎಂದು ಮಾಹಿತಿ ನೀಡಿದರು.

ಆನ್‌ಲೈನ್: ಉತ್ಸವಕ್ಕೆ ಮಳಿಗೆ ಹಾಕಲು ಆನ್‌ಲೈನ್‌ನಲ್ಲಿ ಅರ್ಜಿ ಕರೆಯಲಾಗಿತ್ತು. 48 ಗಂಟೆಯೊಳಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಅನ್‌ಲೈನ್‌ನಲ್ಲಿ ಪೇಮೆಂಟ್ ಕೂಡಾ ಆಗಿದೆ. ಇದು ಖಾದಿ ಉತ್ಸವದ ಜನಪ್ರಿಯತೆಗೆ ಸಾಕ್ಷಿ ಎಂದು ತಿಳಿಸಿದರು.

ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟ ಜ.16ರಿಂದ ಫೆಬ್ರವರಿ 14ರ ವರೆಗೆ ನಡೆಯುವ ಖಾದಿ ಉತ್ಸವ ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಉದ್ಘಾಟನೆ ಮಾಡಲಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಡಾ. ಪಾಟೀಲ್ ಪುಟ್ಟಪ್ಪ, ಎಚ್.ಎಸ್.ದೊರೆಸ್ವಾಮಿ ವಿಶೇಷ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ ಎಂದರು.

ಖಾದಿ ಉತ್ಸವದಲ್ಲಿ ಧಾರವಾಡ, ಚಿತ್ರದುರ್ಗ, ದಾವಣಗೆರೆ, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ಅರಳೇ ಖಾದಿ ಮತ್ತು ಉಣ್ಣೆ ಉತ್ಪನ್ನಗಳು ದೊರೆಯಲಿವೆ. ವಾಣಿಜ್ಯ ಬೆಳೆಗಳು ಮತ್ತು ಸಾಂಬಾರ್ ಪದಾರ್ಥಗಳಾದ ಏಲಕ್ಕಿ, ಮೆಣಸು, ದ್ರಾಕ್ಷಿ, ಗೋಡಂಬಿ, ಕಾಫಿ ಮತ್ತು ತೋಟಗಾರಿಕಾ ಉತ್ಪನ್ನಗಳು, ಚರ್ಮದ ಉತ್ಪನ್ನಗಳು ಉತ್ಸವದ ಪ್ರಮುಖ ಆಕರ್ಷಣೆಯಾಗಿವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಡಳಿಯ ವಿ.ಅಣ್ಣಪ್ಪ, ರಾಮ್ ಮೋಹನ್ ರಾವ್, ಜಗದೀಶ್ ಸೇರಿದಂತೆ ಪ್ರಮುಖರಿದ್ದರು.

ರಿಯಾಯ್ತಿ ಖಾದಿ ಉತ್ಸವದಲ್ಲಿ ಖಾದಿ ರೇಷ್ಮೆ ಬಟ್ಟೆಗಳಿಗೆ ಶೇ. 25 ಹಾಗೂ ಖಾದಿ ಬಟ್ಟೆಗಳಿಗೆ ಶೇ.35ರಷ್ಟು ರಿಯಾಯ್ತಿ ಇರುತ್ತದೆ. ವಿವಿಧ ರಾಜ್ಯಗಳ ಉತ್ಪನ್ನಗಳು ಇಲ್ಲಿ ದೊರೆಯುವುದರಿಂದ ಗ್ರಾಹಕರಿಗೆ ವೈವಿಧ್ಯಮಯ ಸಂಗ್ರಹ ದೊರೆಯಲಿದೆ. 

ಸಮಯ

ಪ್ರತಿ ದಿನ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಖಾದಿ ಉತ್ಸವ ತೆರೆಯಲಾಗಿರುತ್ತದೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News