ಎಸ್ಸೆಂ ಕೃಷ್ಣ ಭೇಟಿ ಬಗ್ಗೆ ಸ್ಪಷ್ಟನೆ ನೀಡಿದ ಡಿ.ಕೆ.ಶಿವಕುಮಾರ್

Update: 2020-01-15 14:52 GMT

ಬೆಂಗಳೂರು, ಜ.15: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಎಸ್ಸೆಂ ಕೃಷ್ಣ ಅವರ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಸದಾಶಿವನಗರದ ತನ್ನ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನನ್ನ ಹಾಗೂ ಕೃಷ್ಣ ಅವರ ಸಂಬಂಧ ಎಲ್ಲರಿಗೂ ಗೊತ್ತಿದೆ. ಸಂಕ್ರಮಣದ ಸಂದರ್ಭದಲ್ಲಿ ಅವರಿಗೆ ಶುಭ ಕೋರಿ, ಅವರಿಂದ ಆಶೀರ್ವಾದ ಪಡೆದಿದ್ದೇನೆ. ಅಷ್ಟು ಬಿಟ್ಟರೆ ಇನ್ನೇನು ವಿಶೇಷ ಇಲ್ಲ ಎಂದರು.

ಉಳುಮೆ ಮಾಡಿಕೊಂಡು ಇರ್ತೀನಿ: ರಾಜ್ಯದಲ್ಲಿ ರಾಜಕಾರಣ ಮಾಡುವವರು ಮಾಡಿಕೊಂಡು ಇರಲಿ. ನಾನು ದನ, ಕರು ಮೇಯಿಸಿಕೊಂಡು, ಹೊಲದಲ್ಲಿ ಉಳುಮೆ ಮಾಡಿಕೊಂಡು ಇರ್ತೀನಿ ಎಂದು ಶಿವಕುಮಾರ್ ತಮ್ಮದೆ ದಾಟಿಯಲ್ಲಿ ಪ್ರತಿಕ್ರಿಯೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಇನ್ನೂ ಖಾಲಿ ಇಲ್ಲ. ಈ ಬಗ್ಗೆ ದಿನೇಶ್ ಗುಂಡೂರಾವ್ ಅವರು ಹೈಕಮಾಂಡ್ ಜೊತೆ ಮಾತನಾಡಲಿ. ದಿನೇಶ್ ರಾಜೀನಾಮೆ ವಿಚಾರವಾಗಿ ಪಕ್ಷದ ವರಿಷ್ಠರು ಏನು ತೀರ್ಮಾನ ಕೈಗೊಳ್ಳಲಿದ್ದಾರೆಯೋ ಗೊತ್ತಿಲ್ಲ. ಪಕ್ಷದಲ್ಲಿ ಅವರು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಪಂಚಮಸಾಲಿ ಸಮುದಾಯಕ್ಕೆ ಮಂತ್ರಿ ಸ್ಥಾನ ನೀಡುವ ಸಂಬಂಧ ಬಿಎಸ್‌ವೈ ಮತ್ತು ಸ್ವಾಮೀಜಿ ನಡುವೆ ಏನೇನು ಮಾತುಕತೆ ನಡೆದಿದೆಯೋ ನನಗೆ ಗೊತ್ತಿಲ್ಲ. ನಾನು ಈಗ ಅದೇ ಕಾರ್ಯಕ್ರಮಕ್ಕಾಗಿ ಹರಿಹರಕ್ಕೆ ಹೋಗುತ್ತಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಜನರಿಗೆ, ಮಠಾಧೀಶರಿಗೆ ಮಾತು ಕೊಟ್ಟಿರಬಹುದೆಂದು ಹೇಳಿದರು.

ಶುಭಾಶಯಗಳು: ಸುಗ್ಗಿ ಹಬ್ಬ ಸಂಕ್ರಾಂತಿ ರೈತರು, ದನ ಕರುಗಳಿಗೆ, ದವಸ ಧಾನ್ಯಗಳಿಗೆ, ಭೂಮಿಗೆ ಎಲ್ಲವಕ್ಕೂ ಪೂಜೆ ಮಾಡುವ ಪವಿತ್ರವಾದ ದಿನ. ಒಕ್ಕಲುತನ ಮಾಡುವ ಕುಟುಂಬಗಳಿಗೆ ಉತ್ಕೃಷ್ಟವಾದ ದಿನ. ಎಲ್ಲರಿಗೂ ಒಳ್ಳೆಯದಾಗಲಿ ಸಂಕ್ರಮಣ ಉಂಟಾಗಲಿ ಎಂದು ಶಿವಕುಮಾರ್ ನಾಡಿನ ಜನತೆಗೆ ಶುಭ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News