ಬೆಂಗಳೂರಿನಲ್ಲಿ ಮತ್ತೊಮ್ಮೆ ಸದ್ದು ಮಾಡಿದ ಗೋಡೆ ಬರಹ: ಪ್ರಧಾನಿ ಮೋದಿ ಬಗ್ಗೆ ಗ್ರಾಫಿಟಿ ರಚನೆ, ವಿವಾದ

Update: 2020-01-15 15:19 GMT

ಬೆಂಗಳೂರು, ಜ.15: ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಸಿಎಎ, ಎನ್‌ಆರ್‌ಸಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಅಪರಿಚಿತರು ಗ್ರಾಫಿಟಿ ಕಲೆ ರಚಿಸಿದ ಘಟನೆ ಮಾಸುವ ಮುನ್ನವೇ ಮಂಗಳವಾರ ಯಲಹಂಕ ನ್ಯೂಟೌನ್‌ಲ್ಲಿರುವ ಸೃಷ್ಟಿ ಇನ್ಸ್‌ಟಿಟ್ಯೂಟ್ ಆಫ್ ಆರ್ಟ್ ಡಿಸೈನ್ಡ್‌ನ ಎನ್5 ಕ್ಯಾಂಪಸ್ ಎದುರು ಪ್ರಧಾನಿ ನರೇಂದ್ರ ಮೋದಿಯ ಗ್ರಾಫಿಟಿ ಕಂಡು ಬಂದಿದೆ.

ಸ್ಥಳೀಯ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು, ಸ್ಥಳೀಯರು, ಈ ಸಂಬಂಧ ಸಂಸ್ಥೆಯ ವಿದ್ಯಾರ್ಥಿಗಳ ವಿರುದ್ಧವೇ ಆರೋಪ ಮಾಡಿರುವುದು ತಿಳಿದು ಬಂದಿದೆ.

ವಿದ್ಯಾರ್ಥಿಗಳು ಹಾಗೂ ಭದ್ರತಾ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ಸಂಸ್ಥೆಯು ಎರಡು ದಿನ(ಗುರುವಾರ ಹಾಗೂ ಶುಕ್ರವಾರ)ಗಳ ಕಾಲ ರಜೆಯನ್ನು ಘೋಷಿಸಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಇ-ಮೇಲ್ ಮೂಲಕ ಸಂದೇಶ ರವಾನಿಸಿದೆ ಎಂದು ಹೇಳಲಾಗುತ್ತಿದೆ.

ಸಂಸ್ಥೆಯ ಎದುರು ಇರುವ ಕಟ್ಟಡದ ಗೋಡೆ ಮೇಲೆ ಪ್ರಧಾನಿ ನರೇಂದ್ರ ಮೋದಿಯ ಗ್ರಾಫಿಟಿ ಕಲೆ ರಚಿಸಲಾಗಿದ್ದು ಅದರಲ್ಲಿ ‘ಸಬ್ ಚಂಗಾಸಿ’(ಎಲ್ಲವೂ ಚೆನ್ನಾಗಿದೆ) ಎಂದು ಬರೆಯಲಾಗಿದೆ. ಸಂಸ್ಥೆಯ ವಿದ್ಯಾರ್ಥಿಗಳೆ ಇದನ್ನು ರಚಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಸುಮಾರು 10 ಮಂದಿಯ ಗುಂಪೊಂದು ಮಂಗಳವಾರ ಬೆಳಗ್ಗೆ 11.30ರ ಸುಮಾರಿಗೆ ಸಂಸ್ಥೆಯ ಆವರಣ ಪ್ರವೇಶಿಸಿ, ಭದ್ರತಾ ಸಿಬ್ಬಂದಿಯ ಜೊತೆ ವಾಗ್ವಾದ ನಡೆಸಿ, ಗ್ರಾಫಿಟಿ ಕಲೆ ಬಗ್ಗೆ ಚರ್ಚಿಸಬೇಕು ಎಂದು ಏರು ಧ್ವನಿಯಲ್ಲಿ ಆಗ್ರಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆನಂತರ ಬಿಜೆಪಿ ಕಾರ್ಯಕರ್ತರು ಗ್ರಾಫಿಟಿ ಕಲೆಯನ್ನು ಬಣ್ಣ ಬಳಿದು ಅಳಿಸಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News