'ರಾಜೀನಾಮೆ ವಾಪಸ್' ಪಡೆಯುವ ಬಗ್ಗೆ ದಿನೇಶ್ ಗುಂಡೂರಾವ್ ಸ್ಪಷ್ಟನೆ

Update: 2020-01-15 15:23 GMT

ಬೆಂಗಳೂರು, ಜ.15: ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ನಾನು ಯಾವುದೇ ಕಾರಣಕ್ಕೂ ವಾಪಸ್ಸು ಪಡೆಯಲು ಇಚ್ಛಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ತಿರುವಳ್ಳುವರ್ ಜಯಂತಿಯ ಅಂಗವಾಗಿ ನಗರದ ಹಲಸೂರು ಬಳಿಯ ತಿರುವಳ್ಳುವರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಅದನ್ನು ವಾಪಸ್ಸು ಪಡೆಯಲ್ಲ ಎಂದು ನುಡಿದರು.

ಪಕ್ಷದ ಹೈಕಮಾಂಡ್ ಯಾರನ್ನು ಬೇಕಾದರೂ ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಲಿ. ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಅಲ್ಲದೆ, ನೂತನ ಕೆಪಿಸಿಸಿ ಅಧ್ಯಕ್ಷರಿಗೆ ಎಲ್ಲ ರೀತಿಯ ಸಹಕಾರ ನೀಡುವ ಮೂಲಕ, ಪಕ್ಷವನ್ನು ಕಟ್ಟಲು ಕೆಲಸ ಮಾಡುತ್ತೇನೆ ಎಂದು ಗುಂಡೂರಾವ್ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಹಳ ದಿನ ಖಾಲಿ ಬಿಡಬಾರದು. ಶೀಘ್ರವೇ ಹೈಕಮಾಂಡ್ ಸಮರ್ಥ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ. ರಾಜ್ಯ ಸರಕಾರದ ಆಡಳಿತ ಹದಗೆಟ್ಟಿದ್ದು, ಹಳ್ಳ ಹಿಡಿದಿದೆ. ವಿರೋಧ ಪಕ್ಷವಾಗಿ ನಾವಿದನ್ನು ಗಟ್ಟಿಯಾಗಿ ಧ್ವನಿ ಎತ್ತಬೇಕಿದೆ ಎಂದು ಅವರು ತಿಳಿಸಿದರು.

ಮಂಗಳವಾರ ಹರಿಹರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಒತ್ತಡ ಹಾಕಿದ್ದು ಸರಿಯಲ್ಲ. ಈ ರೀತಿಯ ಒತ್ತಡದಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಿ ಸುಮಾರು ಆರು ತಿಂಗಳು ಪೂರ್ತಿಯಾಗುತ್ತಿದೆ. ಆದರೆ, ಇದುವರೆಗೂ ಅಧಿವೇಶನ ನಡೆಸಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಸುವುದು ಬಿಜೆಪಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪಗೆ ಬೇಕಾಗಿಲ್ಲ ಎಂದು ಅವರು ದೂರಿದರು.

ಮಾರ್ಲಾಪಣೆ ಬಳಿಕ ಮಾತನಾಡಿದ ಅವರು, ತಿರುವಳ್ಳುವರ್ ನಡೆಸಿದ ಸಾತ್ವಿಕ ಜೀವನವೇ ಒಂದು ಸಂದೇಶದಂತಿದೆ. ಅವರ ಸಾಂತ್ವನದ ಮಾತುಗಳನ್ನು ಕೇಳಿದ ಬಡಜನ, ದುಃಖದಲ್ಲಿದ್ದ ಜನ, ಧೈರ್ಯವನ್ನು ಕಳೆದುಕೊಂಡಿದ್ದ ಜನ ಮತ್ತೆ ಜೀವನೋತ್ಸಾಹವನ್ನು ತುಂಬಿಕೊಂಡರು, ಕಳೆದು ಹೋಗಿದ್ದ ದಾರಿಗಳನ್ನು ಕಂಡುಕೊಂಡರು ಎಂದು ಅವರು ಹೇಳಿದರು.

ತಮಿಳುನಾಡಿನ ಪ್ರಸಿದ್ಧ ಕವಿ ಹಾಗೂ ತತ್ವಜ್ಞಾನಿಯಾದ ತಿರುವಳ್ಳುವರ್ ಸಾಮಾಜಿಕ ಪರಿವರ್ತನೆಯ ಹರಿಕಾರ. ಕರ್ನಾಟಕಕ್ಕೆ ತ್ರಿಪದಿ ಕವಿ ಸರ್ವಜ್ಞರಿದ್ದಂತೆ ತಮಿಳುನಾಡಿಗೆ ತಿರುವಳ್ಳುವರ್ ಮಹಾಕವಿ. ಅವರು ಮಾನವೀಯ ಮೌಲ್ಯಗಳ ಪ್ರತೀಕವಾಗಿದ್ದರು. ಸಾಹಿತ್ಯದ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ ಆಧ್ಯಾತ್ಮಿಕ ಕವಿಯೂ ಹೌದು. ತಿರುವಳ್ಳುವರ್ ಸಾಹಿತ್ಯದಲ್ಲಿ ಶಾಂತಿ, ಸೌಹಾರ್ದತೆಯ ಸಂದೇಶಗಳನ್ನು ಕಾಣಬಹುದು ಎಂದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಪ್ರಕಾಶಂ ಸೇರಿದಂತೆ ತಮಿಳು ಸಂಘದ ಅನೇಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News