ಸಿಎಎ-ಎನ್‌ಆರ್‌ಸಿ ತೊಂದರೆಗಳ ಬಗ್ಗೆ ಮಸೀದಿಗಳ ಮುಖ್ಯಸ್ಥರು ಜಾಗೃತಿ ಮೂಡಿಸಬೇಕು: ಸಗೀರ್ ಅಹ್ಮದ್ ರಶಾದಿ

Update: 2020-01-15 17:30 GMT

ಬೆಂಗಳೂರು, ಜ.15: ದಲಿತರು, ಹಿಂದುಳಿದ ವರ್ಗದವರು, ಕ್ರೈಸ್ತರು ಸೇರಿದಂತೆ ಸರ್ವ ಧರ್ಮೀಯರಿಗೂ ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕುರಿತು ಜಾಗೃತಿ ಮೂಡಿಸಲು ಮಸೀದಿಗಳ ಮುಖ್ಯಸ್ಥರು ಮುಂದಾಗಬೇಕು ಎಂದು ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ಕರೆ ನೀಡಿದ್ದಾರೆ.

ಬುಧವಾರ ನಗರದ ಬೆನ್ಸನ್‌ ಟೌನ್‌ನಲ್ಲಿರುವ ಮಸ್ಜಿದೆ ಖಾದ್ರಿಯಾದಲ್ಲಿ ನಡೆದ ಜಂಟಿ ಕ್ರಿಯಾ ಸಮಿತಿಯ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಸೀದಿಗಳಲ್ಲೆ ಸಭೆಗಳನ್ನು ಮಾಡಿ ಸರ್ವ ಧರ್ಮೀಯರಿಗೆ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ನಿಂದ ಪ್ರತಿಯೊಬ್ಬರಿಗೂ ಯಾವ ರೀತಿಯ ತೊಂದರೆಗಳು ಎದುರಾಗುತ್ತವೆ ಎಂಬುದನ್ನು ಮನದಟ್ಟು ಮಾಡಬೇಕು ಎಂದರು.

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಹಿಂಪಡೆಯುವವರೆಗೆ ನಾವು ನಿರಂತರವಾಗಿ ಹೋರಾಟ, ಪ್ರತಿಭಟನೆಗಳನ್ನು ಮಾಡುತ್ತಿರುತ್ತೇವೆ. ಇದಕ್ಕಾಗಿ ಮುಸ್ಲಿಮರು ಯಾವುದೇ ರೀತಿಯ ತ್ಯಾಗ, ಬಲಿದಾನಕ್ಕೂ ಸಿದ್ಧವಾಗಿದ್ದಾರೆ. ಈ ದೇಶದಲ್ಲಿ ಎಲ್ಲ ಧರ್ಮೀಯರು ಪರಸ್ಪರ ಸಹೋದರತೆ, ಸಹಬಾಳ್ವೆಯೊಂದಿಗೆ ಜೀವಿಸುತ್ತಿದ್ದಾರೆ. ಈ ವಾತಾವರಣ ಕಲುಷಿತಗೊಳ್ಳಲು ಅವಕಾಶ ನೀಡಬಾರದು ಎಂದು ಅವರು ಹೇಳಿದರು.

ಜಂಟಿ ಕ್ರಿಯಾ ಸಮಿತಿಯ ಜಂಟಿ ಸಂಚಾಲಕ ಮೌಲಾನ ಸಯ್ಯದ್ ಶಬ್ಬೀರ್ ಅಹ್ಮದ್ ನದ್ವಿ ಮಾತನಾಡಿ, ಕೇಂದ್ರ ಸರಕಾರ ದೇಶದಲ್ಲಿ ಧರ್ಮ ಧರ್ಮಗಳ ನಡುವೆ ಒಡಕು ಉಂಟು ಮಾಡಲು ಸಿಎಎ ಜಾರಿಗೆ ತರಲಾಯಿತು. ಆದರೆ, ಇದೀಗ ಎಲ್ಲರೂ ಒಗ್ಗಟ್ಟಾಗಿ ಸಂವಿಧಾನ ಹೋರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲ ಸಂಘಟನೆಗಳ ಪ್ರತಿನಿಧಿಯಾಗಿ ನಮ್ಮ ಜಂಟಿ ಕ್ರಿಯಾ ಸಮಿತಿ ಕೆಲಸ ಮಾಡುತ್ತಿದೆ ಎಂದರು.

ಜಮಾತೆ ಇಸ್ಲಾಮಿ ಸಂಘಟನೆಯ ಪ್ರತಿನಿಧಿ ಯಸೂಫ್ ಕುಂಞ ಮಾತನಾಡಿ, ಜಂಟಿ ಕ್ರಿಯಾ ಸಮಿತಿಯು 25ಕ್ಕಿಂತ ಹೆಚ್ಚು ಸಂಘಟನೆಗಳ ಒಕ್ಕೂಟವಾಗಿದೆ. ಡಿ.23ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಟನೆಯ ಮಾದರಿಯಲ್ಲಿಯೇ, ಜಿಲ್ಲಾ ಹಾಗೂ ಸ್ಥಳೀಯ ಮಟ್ಟದಲ್ಲಿ 250-300 ಸ್ಥಗಳಲ್ಲಿ ಜಂಟಿ ಕ್ರಿಯಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿವೆ ಎಂದರು.

ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕೇವಲ ಮುಸ್ಲಿಮರಿಗೆ ಸಂಬಂಧಿಸಿದ್ದಲ್ಲ ಇಡೀ ದೇಶಕ್ಕೆ ಸಂಬಂಧಿಸಿದ್ದು ಎಂಬ ವಾಸ್ತವಾಂಶವನ್ನು ದಲಿತರು, ಹಿಂದುಳಿದವರು ಹಾಗೂ ಆದಿವಾಸಿಗಳಿಗೆ ಮನದಟ್ಟು ಮಾಡಿಕೊಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಅಲ್ಲದೇ, ಇದೇ ವಿಚಾರ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿರುವ ವಿವಿಧ ಸಂಘ ಸಂಸ್ಥೆಗಳಿಗೆ ನಾವು ಮಾರ್ಗದರ್ಶನ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ಮೌಲಾನ ಏಜಾಝ್ ಅಹ್ಮದ್ ನದ್ವಿ ಮಾತನಾಡಿ, ಸುಪ್ರೀಂ ಕೋರ್ಟ್‌ನಲ್ಲಿ ಜ.22ರಂದು ಈ ವಿಚಾರದ ಕುರಿತು ಆದೇಶ ಬರುವ ನಿರೀಕ್ಷೆಯಿದೆ. ಆನಂತರ, ರಾಷ್ಟ್ರಮಟ್ಟದಲ್ಲಿ ನಮಗೆ ಬರುವಂತಹ ಸಂದೇಶದಂತೆ ನಾವು ಮುನ್ನಡೆಯುತ್ತೇವೆ. ಎಪ್ರಿಲ್ ಮೊದಲ ವಾರದಲ್ಲಿ ಎನ್‌ಪಿಆರ್ ಆರಂಭವಾಗುತ್ತದೆ. ಅದಕ್ಕಿಂತ ಮುಂಚಿತವಾಗಿ ಯಾರೇ ಬಂದು ನಿಮ್ಮ ದಾಖಲೆಗಳನ್ನು ಕೇಳಿದರೂ ತೋರಿಸಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ನಿವೃತ್ತ ಐಎಎಸ್ ಅಧಿಕಾರಿ ಸಯ್ಯದ್ ಝಮೀರ್ ಪಾಷ ಮಾತನಾಡಿ, ದಾಖಲೆಗಳನ್ನು ಪಡೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಅದನ್ನು ಸಿದ್ಧಪಡಿಸಿಟ್ಟುಕೊಳ್ಳುವುದು ನಮ್ಮ ಕರ್ತವ್ಯ. ಆದರೆ, ಎನ್‌ಪಿಆರ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನ್ಯಾಯಾಲಯದಲ್ಲಿ ಹೋರಾಟ ಮಾಡಲು ಇನ್ನೆರಡು ದಿನಗಳಲ್ಲಿ ಈ ಸಂಬಂಧ ನಾವು ಅರ್ಜಿಗಳನ್ನು ದಾಖಲು ಮಾಡುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಡಾ.ಮುಹಮ್ಮದ್ ಸಾದ್ ಬೆಳಗಾಮಿ, ಮೌಲಾನ ಝುಲ್ಫಿಕರ್ ನೂರಿ, ಮುಫ್ತಿ ಶಂಶುದ್ದೀನ್ ಬಜ್ಲಿ, ಸಯ್ಯದ್ ಶಾಹಿದ್ ಅಹ್ಮದ್, ಮಸೂದ್ ಅಬ್ದುಲ್ ಖಾದರ್, ಝಿಯಾಉಲ್ಲಾ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜನನ ಪ್ರಮಾಣ ಪತ್ರದ ಆತಂಕ ಬೇಡ

ಎನ್‌ಪಿಆರ್ ಮ್ಯಾನ್ಯುವಲ್ ಜಾರಿ ಮಾಡಲಾಗಿದೆ. ಅಧಿಕಾರಿಗಳು ಬಂದು ಕೇವಲ ಮಾಹಿತಿಯನ್ನು ಕೇಳುತ್ತಾರೆಯೇ ಹೊರತು, ದಾಖಲಾತಿಗಳನ್ನು ಕೇಳುವುದಿಲ್ಲ. ನಿಮ್ಮ ಬಳಿಯಿರುವ ದಾಖಲಾತಿಗಳಲ್ಲಿ ಏನಾದರೂ ಲೋಪದೋಷಗಳು ಇದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳಿ. ಎಲ್ಲರೂ ಜನನ ಪ್ರಮಾಣಪತ್ರ ಹೊಂದಿರಲೇಬೇಕು ಎಂಬ ಗೊಂದಲ ಜನಸಾಮಾನ್ಯರಲ್ಲಿದೆ. 1971ರ ನಂತರ ಜನನ ಪ್ರಮಾಣದ ಕಾನೂನು ಜಾರಿಗೆ ಬಂದಿದೆ. ಅದಕ್ಕಿಂತ ಮುಂಚಿತವಾಗಿ ಜನಿಸಿದವರು ಜನನ ಪ್ರಮಾಣ ಪತ್ರ ಪ್ರದರ್ಶಿಸಬೇಕಾದ ಅಗತ್ಯವಿಲ್ಲ. ಎಸೆಸೆಲ್ಸಿ ಅಂಕಪಟ್ಟಿ, ಶಾಲೆಯ ಟಿಸಿ, ಪಾಸ್‌ಪೋರ್ಟ್ ಸೇರಿದಂತೆ ಸರಕಾರ ನೀಡಿರುವ ದಾಖಲಾತಿಗಳಲ್ಲಿ ನಿಮ್ಮ ಜನನ ದಿನಾಂಕ ನಮೂದಾಗಿದ್ದರೆ ಅದೇ ಸಾಕು. ಅಸ್ಸಾಂನಲ್ಲಿ ಎನ್‌ಆರ್‌ಸಿ ಮಾಡಿದಾಗ ಈ ದಾಖಲೆಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಲಾಗಿದೆ.

-ಮುಹಮ್ಮದ್ ಸನಾವುಲ್ಲಾ, ನಿವೃತ್ತ ಐಎಎಸ್ ಅಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News