ಟ್ರಂಪ್ ವಾಗ್ದಂಡನೆ ಪ್ರಕರಣ ಸೆನೆಟ್ ವಿಚಾರಣೆಗೆ

Update: 2020-01-16 04:45 GMT

ವಾಷಿಂಗ್ಟನ್, ಜ.16: ಅಮೆರಿಕದ 45ನೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧದ ಅಧಿಕಾರ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಅವರ ಮೇಲೆ ವಾಗ್ದಂಡನೆ ವಿಧಿಸುವ ಪ್ರಸ್ತಾವವನ್ನು ಸೆನೆಟ್‌ಗೆ ಕಳುಹಿಸುವ ಮಹತ್ವದ ನಿರ್ಧಾರವನ್ನು ಅಮೆರಿಕದ ಪ್ರಜಾ ಪ್ರತಿನಿಧಿ ಸಭೆ ಕೈಗೊಂಡಿದೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್‌ನಲ್ಲಿ ಪಕ್ಷದ ಆಧಾರದಲ್ಲಿ ಬುಧವಾರ ನಡೆದ ಮತದಾನದಲ್ಲಿ, ಡೆಮಾಕ್ರಟಿಕ್ ಪಕ್ಷಕ್ಕೆ ಸೇರಿದ ಏಳು ಮಂದಿ ವಾಗ್ದಂಡನೆ ವ್ಯವಸ್ಥಾಪಕರ ತಂಡವನ್ನು ನೇಮಿಸುವ ನಿರ್ಣಯಕ್ಕೆ ಒಪ್ಪಿಗೆ ನೀಡಲಾಯಿತು. ಈ ತಂಡ ಅಧ್ಯಕ್ಷರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲಿದೆ. ಟ್ರಂಪ್ ವಿರುದ್ಧ ಸೆನೆಟ್‌ಗೆ ಎರಡು ಆರೋಪಗಳನ್ನು ಸಲ್ಲಿಸುವ ಅಧಿಕಾರವನ್ನು ಈ ತಂಡಕ್ಕೆ ನೀಡಲಾಗಿದೆ.

ಮೂಲ ತನಿಖೆಯ ವೇಳೆ ನೀಡಲು ನಿರಾಕರಿಸಿದ ಟ್ರಂಪ್ ಅವರ ಆಪ್ತ ವಲಯದ ಸಾಕ್ಷಿಯನ್ನು ಮತ್ತು ಇತರ ಪೂರಕ ದಾಖಲೆಗಳನ್ನು ಸೆನೆಟ್ ವಿಚಾರಣೆ ವೇಳೆ ತರಿಸಿಕೊಳ್ಳಬೇಕು ಎಂದು ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ ತಮ್ಮ ಆಗ್ರಹವನ್ನು ಪುನರುಚ್ಚರಿಸಿದರು. ಅದನ್ನು ತರಿಸಿಕೊಳ್ಳದಿದ್ದಲ್ಲಿ ಪ್ರಕರಣವನ್ನು ಮುಚ್ಚಿ ಹಾಕಿದ ಅಪವಾದಕ್ಕೆ ಸೆನೆಟ್ ಗುರಿಯಾಗಬೇಕಾಗುತ್ತದ ಎಂದು ಎಚ್ಚರಿಸಿದರು.

ಅಮೆರಿಕದ ಇತಿಹಾಸದಲ್ಳೇ ಮಹತ್ವದ ನಿರ್ಣಯವನ್ನು ಈ ಸದನ ಇಂದು ಕೈಗೊಳ್ಳಲಿದೆ ಎಂದು ಪೆಲೋಸಿ ಮತದಾನಕ್ಕೆ ಮುನ್ನ ಹೇಳಿಕೆ ನೀಡಿದರು. ಫಲಿತಾಂಶ ಏನೇ ಬರಲಿ; ಅಮೆರಿಕದ ಜನತೆ ನ್ಯಾಯಸಮ್ಮತ ವಿಚಾರಣೆಯನ್ನು ಬಯಸಿರುವುದು ಸ್ಪಷ್ಟ ಎಂದು ಅವರು ಹೇಳಿದರು.

ಇದು ರಾಜಕೀಯ ಸೇಡಿನ ಕ್ರಮ ಎಂದು ಟ್ರಂಪ್ ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News