ಸಿಂಧು 2ನೇ ಸುತ್ತಿಗೆ; ಸೈನಾ, ಶ್ರೀಕಾಂತ್, ಪ್ರಣೀತ್, ಸೌರಭ್‌ಗೆ ಸೋಲು

Update: 2020-01-16 05:03 GMT

ಜಕಾರ್ತ , ಜ.15: ಇಂಡೋನೇಶ್ಯ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ.

ಇದೇ ವೇಳೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಸೈನಾ ನೆಹ್ವಾಲ್, ಪುರುಷರ ಸಿಂಗಲ್ಸ್ ನಲ್ಲಿ ಬಿ.ಸಾಯಿ ಪ್ರಣೀತ್, ಕೆ.ಶ್ರೀಕಾಂತ್ ಮತ್ತು ಸೌರಭ್ ವರ್ಮಾ ಪ್ರಥಮ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ.

 5ನೇ ಶ್ರೇಯಾಂಕಿತೆ ಪಿ.ವಿ.ಸಿಂಧು ಜಪಾನ್‌ನ ನಂ.10ನೇ ಆಟಗಾರ್ತಿ ಅಯಾ ಒಹೊರಿ ವಿರುದ್ಧ 14-21, 21-15, 21-11 ಅಂತರದಲ್ಲಿ ಗೆಲುವಿನ ನಗೆ ಬೀರಿದರು. ಸಿಂಧು ಮತ್ತು ಒಹೊರಿ ಈ ತನಕ 10 ಬಾರಿ ಮುಖಾಮುಖಿಯಾಗಿದ್ದಾರೆ. ಆದರೆ ಈ ತನಕ ಸಿಂಧು ಅವರ ವಿರುದ್ಧ ಸೋಲು ಅನುಭವಿಸಿಲ್ಲ. ಕಳೆದ ವಾರ ಒಹೊರಿ ಅವರು ಸಿಂಧು ವಿರುದ್ಧ ಮಲೇಶ್ಯ ಮಾಸ್ಟರ್ಸ್‌ನ ಎರಡನೇ ಸುತ್ತಿನಲ್ಲಿ ಸೋಲು ಅನುಭವಿಸಿದ್ದರು. ಎರಡನೇ ಸುತ್ತಿನಲ್ಲಿ 24ರ ಹರೆಯದ ಸಿಂಧು ಅವರು ಜಪಾನ್‌ನ ಸಯಾಕಾ ಟಕಾಹಾಶಿ ಅವರನ್ನು ಎದುರಿಸುವರು. ಟಕಾಹಾಶಿ ಮೊದಲ ಸುತ್ತಿನಲ್ಲಿ ಸೈನಾಗೆ ಸೋಲುಣಿಸಿದ್ದರು. ಟಕಾಹಾಶಿ ವಿರುದ್ಧ ಸೈನಾ 21-19, 13-21, 5-21 ಅಂತರದಲ್ಲಿ ಸೋಲು ಅನುಭವಿಸಿದರು. ಕೇವಲ 50 ನಿಮಿಷಗಳಲ್ಲಿ ಇವರ ನಡುವಿನ ಪಂದ್ಯ ಕೊನೆಗೊಂಡಿತು. ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚು ಜಯಿಸಿದ್ದ ಸೈನಾ ಕಳೆದ ವಾರ ಮಲೇಶ್ಯ ಮಾಸ್ಟರ್ಸ್‌ ನ ಕ್ವಾರ್ಟರ್ ಫೈನಲ್‌ನಲ್ಲಿ ನಿರ್ಗಮಿಸಿದ್ದರು. ವಿಶ್ವದ ನಂ.12 ಶ್ರೀಕಾಂತ್ ಸ್ಥಳೀಯ ಫೇವರಿಟ್ ಆಟಗಾರ ಶೆಸರ್ ಹಿರೆನ್ ರುಸ್ಟಾವಿಟಿಯೊ ವಿರುದ್ಧ 1 ಗಂಟೆ ಮತ್ತು 3 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ 21-12, 12-21, 14-21 ಅಂತರದಲ್ಲಿ ಸೋಲು ಅನುಭವಿಸಿದರು. ಶ್ರೀಕಾಂತ್ ಸತತ ಎರಡನೇ ಟೂರ್ನಿಯಲ್ಲಿ ಆರಂಭಿಕ ಸುತ್ತಿನಲ್ಲಿ ತನ್ನ ಅಭಿಯಾನ ಕೊನೆಗೊಳಿಸಿದ್ದಾರೆ. ಮಲೇಶ್ಯ ಮಾಸ್ಟರ್ಸ್‌ನಲ್ಲಿ ಪ್ರಥಮ ಸುತ್ತಿನಲ್ಲಿ ಸೋತು ಹೊರನಡೆದಿದ್ದರು.

   ಪ್ರಣೀತ್ ಕೂಡಾ ಶ್ರೀಕಾಂತ್‌ರಂತೆ ಮಲೇಶ್ಯ ಮಾಸ್ಟರ್ಸ್‌ನಲ್ಲಿ ಪ್ರಥಮ ಸುತ್ತಿನಲ್ಲಿ ನಿರ್ಗಮಿಸಿದ್ದರು. ಪ್ರಣೀತ್ ಅವರು ಇಂಡೋನೇಶ್ಯ ಮಾಸ್ಟರ್ಸ್‌ ನ ಮೊದಲ ಸುತ್ತಿನಲ್ಲಿ ಚೀನಾದ ಎಂಟನೇ ಶ್ರೇಯಾಂಕದ ಶಿ ಯು ಕೀ ವಿರುದ್ಧ 21-16, 18-21, 10-21 ಅಂತರದಲ್ಲಿ, ಸೌರಭ್ ವರ್ಮಾ ಅವರು ಚೀನಾದ ಲು ಗುವಾಂಗ್ ಝು ಎದುರು 21-17, 15-21, 10-21 ಅಂತರದಲ್ಲಿ ಸೋಲು ಅನುಭವಿಸಿದರು. ಮಿಕ್ಸೆಡ್ ಡಬಲ್ಸ್‌ನಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಸಿಕ್ಕಿ ರೆಡ್ಡಿ ಅವರು ದಕ್ಷಿಣ ಕೊರಿಯಾದ ಕೊ ಸುಂಗ್ ಹ್ಯೂನ್ ಮತ್ತು ಯೆಮ್ ಹೈ ವಾನ್ ವಿರುದ್ಧ 8-21, 14-21 ನೇರ ಸೆಟ್‌ಗಳಿಂದ ಸೋತು ಹೋರಾಟ ಕೊನೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News