ನ್ಯೂಝಿಲ್ಯಾಂಡ್‌ನಲ್ಲಿ ಭಾರತ ‘ಎ’ ತಂಡ ಸೇರಲು ಪೃಥ್ವಿ ಶಾ ಸಜ್ಜು

Update: 2020-01-16 05:07 GMT

ಹೊಸದಿಲ್ಲಿ, ಜ.15: ಕಳೆದ ವಾರ ರಣಜಿ ಟ್ರೋಫಿ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಭುಜದ ನೋವಿಗೆ ಒಳಗಾಗಿ ಇದೀಗ ಚೇತರಿಸಿಕೊಂಡಿರುವ ಪೃಥ್ವಿ ಶಾ ಮುಂದಿನ 48 ಗಂಟೆಗಳಲ್ಲಿ ನ್ಯೂಝಿಲ್ಯಾಂಡ್‌ಗೆ ತೆರಳಿ ಭಾರತ ‘ಎ’ ತಂಡವನ್ನು ಸೇರಿಕೊಳ್ಳಲಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ಯಲ್ಲಿ ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗಲು ಅನುಮತಿ ನೀಡಲಾಗಿದೆ. ‘‘ಪೃಥ್ವಿ ಶಾ ಗುರುವಾರ ಅಥವಾ ಶುಕ್ರವಾರ ನ್ಯೂಝಿಲ್ಯಾಂಡ್‌ಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಸಂಪೂರ್ಣ ಫಿಟ್ ಇದ್ದಾರೆಂದು ಘೋಷಿಸಲಾಗಿದೆ’’ ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಾ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗಿರುವ ಹಿನ್ನೆಲೆಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರಾಷ್ಟ್ರೀಯ ಆಯ್ಕೆಗಾರರು ಶಾ ಹೆಸರನ್ನು ಪರಿಗಣಿಸಲು ಅವಕಾಶ ಸಿಕ್ಕಂತಾಗಿದೆ. ಮೊದಲ ಟೆಸ್ಟ್ ಪಂದ್ಯ ಫೆ.21ರಂದು ಹ್ಯಾಮಿಲ್ಟನ್‌ನಲ್ಲಿ ಹಾಗೂ ಎರಡನೇ ಪಂದ್ಯವು ಫೆ.29ರಂದು ಕ್ರೈರ್ಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ. ಶಾ ಹಾಗೂ ಶುಭಮನ್ ಗಿಲ್ ಭಾರತೀಯ ಟೆಸ್ಟ್ ತಂಡದ ಮೀಸಲು ಆರಂಭಿಕನ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ.

ಈ ಋತುವಿನ ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಶಾ ಬರೋಡದ ವಿರುದ್ಧ 202 ಹಾಗೂ 66 ರನ್ ಗಳಿಸಿದ್ದರು. ಇದಕ್ಕಿಂತ ಮೊದಲು ಸಯ್ಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟ್ರೋಫಿಯಲ್ಲಿ ಸಾಕಷ್ಟು ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News