ಎಬಿಡಿ ವಿಲಿಯರ್ಸ್‌ಗೆ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡುವ ಆಸಕ್ತಿ

Update: 2020-01-16 05:26 GMT

ಜೋಹಾನ್ಸ್‌ಬರ್ಗ್, ಜ.15: ಮುಂಬರುವ ಟ್ವೆಂಟಿ-20 ವಿಶ್ವಕಪ್‌ಗೆ ಮುನ್ನ ಅನುಭವಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ತಂಡಕ್ಕೆ ಮರಳಿದರೆ ಅವರನ್ನು ಸ್ವಾಗತಿಸುವುದಾಗಿ ದಕ್ಷಿಣ ಆಫ್ರಿಕಾದ ನಾಯಕ ಎಫ್ ಡು ಪ್ಲೆಸಿಸ್ ಹೇಳಿದ್ದಾರೆ. 2018ರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಡಿವಿಲಿಯರ್ಸ್ ಅವರು ಇತ್ತೀಚೆಗೆ ರಾಷ್ಟ್ರೀಯ ತಂಡಕ್ಕೆ ಮರಳಲು ಬಯಸಿರುವುದಾಗಿ ಹೇಳಿಕೆ ನೀಡಿದ್ದರು. ಬ್ರಿಸ್ಬೇನ್ ಹೀಟ್ ಪರ ಬಿಗ್ ಬ್ಯಾಷ್ ಲೀಗ್‌ನಲ್ಲಿ ಪಾದಾರ್ಪಣೆ ಮಾಡಿದ ಡಿವಿಲಿಯರ್ಸ್ ಅವರು ಆಸ್ಟ್ರೇಲಿಯದ ವೆಬ್‌ಸೈಟ್‌ಗೆ ನೀಡಿದ ಹೇಳಿಕೆಯಲ್ಲಿ ತಂಡದ ನಿರ್ದೇಶಕ ಗ್ರೇಮ್ ಸ್ಮಿತ್ ಮತ್ತು ಕೋಚ್ ಮಾರ್ಕ್ ಬೌಚರ್, ನಾಯಕ ಎಫ್‌ಡು ಪ್ಲೆಸಿಸ್ ಅವರೊಂದಿಗೆ ಮಾತನಾಡಿರುವುದಾಗಿ ಹೇಳಿದ್ದಾರೆ. ಡಿವಿಲಿಯರ್ಸ್ ವಾಪಸಾತಿ ಬಗ್ಗೆ ಕೇಳಿದಾಗ ಡು ಪ್ಲೆಸಿಸ್ ಈ ವಿಷಯವನ್ನು ಬಹುತೇಕ ದೃಢ ಪಡಿಸಿರುವುದಾಗಿ ಹೇಳಿದರು. ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ವೇಳೆ ತಂಡಕ್ಕೆ ಮರಳುವ ಬಗ್ಗೆ ಡಿವಿಲಿಯರ್ಸ್ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಪಂದ್ಯಾವಳಿಯ ಮೊದಲು ದಕ್ಷಿಣ ಆಫ್ರಿಕಾದ ಪರ ಒಂದೇ ಒಂದು ಪಂದ್ಯವನ್ನು ಆಡದ ಕಾರಣ ವಿಶ್ವಕಪ್ ತಂಡಕ್ಕೆ ಅವರನ್ನು ಸೇರಿಸಿಕೊಳ್ಳಲಾಗಿಲ್ಲ. ಅದಕ್ಕಾಗಿಯೇ ಟ್ವೆಂಟಿ-20 ವಿಶ್ವಕಪ್ ಆಡಲು ಬಯಸಿದರೆ ಡಿವಿಲಿಯರ್ಸ್ ಪ್ರಸ್ತುತ ತಂಡದೊಂದಿಗೆ ಕೆಲವು ಪಂದ್ಯಗಳನ್ನು ಆಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News